Advertisement

ಗಣೇಶನ ಚಿತ್ರವಿರುವ ನೋಟು, ನಾಣ್ಯ ಮತ್ತು ಅಂಚೆ ಚೀಟಿ ಸಂಗ್ರಹಣೆಯಿಂದ ಗಣೇಶನ ಆರಾಧನೆ

10:07 PM Aug 21, 2020 | mahesh |

ವಿದ್ಯೆ ಮತ್ತು ಜ್ಞಾನದ ಅಧಿಪತಿ ಮತ್ತು ಅದೃಷ್ಟದ ಅಧಿನಾಯಕ, ಹಿಂದೂ ಧರ್ಮದ ಪ್ರಮುಖ ದೇವತೆಗಳಲ್ಲಿ ಅಗ್ರಸ್ಥಾನ ಪಡೆದಿರುವ ವಿಘ್ನ ವಿನಾಯಕನಿಗೆ ಗಣೇಶ ಚತುರ್ಥಿಯಂದು ನಮ್ಮ ದೇಶದಲ್ಲಿ ಅತ್ಯಂತ ಶ್ರದ್ಧಾ ಭಕ್ತಿಯಿಂದ ಹಬ್ಬವನ್ನು ಆಚರಿಸುತ್ತಾರೆ. ಈ ಸಮಯದಲ್ಲಿ ವಿವಿಧ ಕಲಾಕಾರರು ತಮ್ಮ ಕಲ್ಪನೆಗೆ ತಕ್ಕಂತೆ ಗಣೇಶನ ವಿವಿಧ ಭಂಗಿಯ ಕಲಾಕೃತಿಯನ್ನು ರಚಿಸುತ್ತಾರೆ. ಇನ್ನು ಕೆಲವರು ಗಣೇಶನನ್ನು ಪೂಜಿಸುತ್ತಾರೆ. ಕೆಲವರು ಅಲಂಕಾರ ಮಾಡುತ್ತಾರೆ. ಹೀಗೆ ಅವರವರ ಇಚ್ಛಾನುಸಾರ ಗಣೇಶನನ್ನು ಪೂಜಿಸುವುದನ್ನು ಕಾಣುತ್ತೇವೆ. ಆದರೆ ಇಲ್ಲೊಬ್ಬರು ಚೌತಿ ಹಬ್ಬದ ವಿಶೇಷವಾಗಿ ಹಿಂದೂ ರಾಷ್ಟ್ರದ ಪ್ರತೀಕವಾದ ಗಣೇಶನ ಚಿತ್ರವಿರುವ ವಿವಿಧ ರಾಷ್ಟ್ರದ ನೋಟು, ನಾಣ್ಯ ಮತ್ತು ಅಂಚೆ ಚೀಟಿಯನ್ನು ಸಂಗ್ರಹಿಸಿ ಗಣೇಶನ ಕೃಪೆಗೆ ಪಾತ್ರರಾಗಿ ಸಂತೃಪ್ತಿ ಪಡೆಯುತ್ತಿದ್ದಾರೆ.

Advertisement

ಅವರೇ ಮಣಿಪಾಲ ಮಾಹೆಯ ಅಂಗ ಸಂಸ್ಥೆಯಾದ ಐಸಿಎಎಸ್‌ ವಿಭಾಗದ ಉದ್ಯೋಗಿಯಾಗಿರುವ ಕಲ್ಯಾಣಪುರದ ಲಕ್ಷ್ಮೀನಾರಾಯಣ ನಾಯಕ್‌. ಕಳೆದ 40 ವರ್ಷಗಳಿಂದ ಚೌತಿ ಹಬ್ಬದ ವಿಶೇಷವಾಗಿ ಹಿಂದೂ ರಾಷ್ಟ್ರದ ಪ್ರತೀಕವಾದ ಗಣೇಶನ ಚಿತ್ರವಿರುವ ವಿವಿಧ ರಾಷ್ಟ್ರದ ನೋಟು, ನಾಣ್ಯ ಮತ್ತು ಅಂಚೆ ಚೀಟಿಯನ್ನು ಸಂಗ್ರಹಿಸುತ್ತಿರುವ ಅವರು ಸುಮಾರು 15-20 ವರ್ಷಗಳಿಂದ ಹಲವಾರು ಶಾಲಾ-ಕಾಲೇಜು, ಸಂಘ-ಸಂಸ್ಥೆಗಳಲ್ಲಿ ಪ್ರದರ್ಶನ ನೀಡಿ ಜನ ಮೆಚ್ಚುಗೆ ಗಳಿಸಿದ್ದಾರೆ. ಅಲ್ಲದೆ ಸಾಕಷ್ಟು ದೊಡ್ಡ ದೊಡ್ಡ ಕಾರ್ಯಕ್ರಮಗಳಲ್ಲಿಯೂ ಪ್ರದರ್ಶನ ನೀಡಿ ಶಹಬ್ಟಾಸ್‌ಗಿರಿ ಪಡೆದಿದ್ದಾರೆ. ಅವರ ಬಳಿ ಸುಮಾರು 180 ರಾಷ್ಟ್ರಗಳ ಅಂಚೆ ಚೀಟಿಗಳು ಮತ್ತು 170 ದೇಶಗಳ ನೋಟು ಹಾಗೂ ನಾಣ್ಯಗಳ ಸಂಗ್ರಹವಿರುವುದು ವಿಶೇಷ.

ಪ್ರಸ್ತುತ ಯುವಜನರಿಗೆ ಅಂಚೆ ಚೀಟಿಯ ಪರಿಚಯವೇ ಇಲ್ಲದಂತಾಗಿದೆ. ಅಂತಹವರಿಗೆ ಹಿಂದೆ ಇಂತಹ ಅಪರೂಪದ ಅಂಚೆ ಚೀಟಿ, ನೋಟು ಮತ್ತು ನಾಣ್ಯಗಳಿದ್ದವು ಎಂಬುವುದನ್ನು ತಿಳಿದುಕೊಳ್ಳಲು ಇದು ಸಹಕಾರಿಯಾಗುತ್ತದೆ. ಈ ಬಗೆಯ ಉತ್ತಮ ಹವ್ಯಾಸದಿಂದ ಮನಸ್ಸಿಗೆ ನೆಮ್ಮದಿ ದೊರಕುವುದಲ್ಲದೆ, ಸಮಾಜಕ್ಕೆ ಮಾದರಿ ಕಾರ್ಯ ಮಾಡುತ್ತಿದ್ದೇನೆ ಎನ್ನುವ ಹೆಮ್ಮೆಯೂ ನನಗಿದೆ. ಇದರಿಂದ ನನ್ನ ಜ್ಞಾನ ವೃದ್ಧಿಯೊಂದಿಗೆ ಯುವ ಪೀಳಿಗೆಗೆ ದೇಶ-ವಿದೇಶಗಳ ಹಬ್ಬದಾಚರಣೆ, ರಾಷ್ಟ್ರ ನಾಯಕರು, ಸಂಸ್ಕೃತಿ, ಆಚಾರ-ವಿಚಾರಗಳ ಬಗ್ಗೆ ಸ್ವಲ್ಪಮಟ್ಟಿನ ಜ್ಞಾನಧಾರೆ ಎರೆದಂತೆಯೂ ಆಗಲಿದೆ ಎಂಬುವುದು ಲಕ್ಷ್ಮೀನಾರಾಯಣ ಅವರ ಅಭಿಪ್ರಾಯ.

Advertisement

Udayavani is now on Telegram. Click here to join our channel and stay updated with the latest news.

Next