Advertisement

ಈದ್ಗಾ ಮೈದಾನದಲ್ಲಿ ಗಣೇಶ; ಚುನಾವಣೆಗಾಗಿಯೇ ಎಂದು ಒಪ್ಪುವುದಿಲ್ಲ: ಜೋಶಿ

05:18 PM Aug 29, 2022 | Team Udayavani |

ಹುಬ್ಬಳ್ಳಿ: ”ಚುನಾವಣೆ ಬಂದಾಗ ಸಾಕಷ್ಟು ವಿಚಾರಗಳು ಮುನ್ನೆಲೆಗೆ ಬರುತ್ತವೆ. ಹೋರಾಟಗಳು ಕೂಡ ಹೆಚ್ಚಾಗುತ್ತವೆ. ಈ ನಿಟ್ಟಿನಲ್ಲಿ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ವಿಚಾರ ಇರಬಹುದೇನೋ ಗೊತ್ತಿಲ್ಲ. ಆದರೆ ಇದು ಚುನಾವಣೆಗಾಗಿಯೇ ಎದ್ದಿದೆ ಎಂದು ನಾನು ಒಪ್ಪುವುದಿಲ್ಲ” ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಹಾಗೂ ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.

Advertisement

ಸೋಮವಾರ ಇಲ್ಲಿನ ಭವಾನಿ ನಗರದ ಅವರ ನಿವಾಸಕ್ಕೆ ಭೇಟಿ ನೀಡಿದ ಪಾಲಿಕೆ ಮೇಯರ್ ಹಾಗೂ ಸದಸ್ಯರ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಗಣೇಶ ಉತ್ಸವವು ಸಾಮಾಜಿಕ ಜಾಗೃತಿ ಮೂಡಿಸುವ ಹಾಗೂ ಶಾಂತಿ ಸೌಹಾರ್ಧತೆಯಿಂದ ಮಾಡುವ ಹಬ್ಬವಾಗಿದೆ. ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಕುರಿತು ಸಮಿತಿ ಏನು ನಿರ್ಧಾರ ತೆಗೆದುಕೊಳ್ಳುತ್ತದೆ ಅದನ್ನು ಪಾಲನೆ ಮಾಡಬೇಕು. ಇತರೆ ಧರ್ಮದವರು ಕೂಡ ತಮ್ಮ ಹಬ್ಬಗಳಿಗೆ ಕೊಡಬೇಕು ಎಂದು ಮನವಿ ಮಾಡಿದರು.

ಕೆಲವರು ಸಮಿತಿ ರಚನೆಗೆ ವಿರೋಧ ಮಾಡಿದವರಿದ್ದಾರೆ. ಇದೆಲ್ಲವೂ ಸಮಿತಿಗೆ ಬಿಟ್ಟ ವಿಚಾರವಾಗಿದೆ. ಯಾವುದೇ ನಿರ್ಧಾರಗಳನ್ನು ಕೈಗೊಂಡರೂ ಕಾನೂನುಗಳ ಇತಿಮಿತಿಯಲ್ಲಿ ಆಗಲಿದೆ. ನಗರದ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರ ಅಭಿಪ್ರಾಯ ಪಡೆಯಲಾಗುವುದು. ಅಲ್ಲದೆ ನಗರದ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಧಾರ ಕೈಗೊಳ್ಳಲಾಗುವುದು. ಯಾವುದೇ ನಿರ್ಧಾರ ಬಂದರೂ ಪ್ರತಿಯೊಬ್ಬರು ಅದನ್ನು ಪಾಲನೆ ಮಾಡಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next