Advertisement

ವಿಘ್ನ ವಿನಾಶಕನ ಆಗಮನಕ್ಕೆ ಕ್ಷಣಗಣನೆ-ಭರ್ಜರಿ ವ್ಯಾಪಾರ

07:22 PM Aug 21, 2020 | Suhan S |

ದಾವಣಗೆರೆ: ವಿಘ್ನ ವಿನಾಶಕನ ಆಗಮನಕ್ಕೆ ಕ್ಷಣಗಣನೆ ಶುರುವಾಗಿದ್ದು, ಕೋವಿಡ್ ಆತಂಕ ನಡುವೆಯೂ ಜನರು ಮೋದಕಪ್ರಿಯನ ಸ್ವಾಗತಕ್ಕೆ ಸಡಗರದ ಸಿದ್ಧತೆ ನಡೆಸಿದ್ದಾರೆ.

Advertisement

ಭಾದ್ರಪದ ಮಾಸ ಶುಕ್ಲಪಕ್ಷದ ಚೌತಿಯ ದಿನ ಮನೆ ಬಾಗಿಲಿಗೆ ಬರುವ ಗೌರಿ-ಗಣೇಶನನ್ನು ಪ್ರತಿಷ್ಠಾಪಿಸಿ ಹಬ್ಬ ಆಚರಿಸಲು ಉತ್ಸುಕರಾಗಿರುವ ಜನರು, ಗುರುವಾರ ಹಬ್ಬಕ್ಕೆ ಬೇಕಾದ ವಸ್ತು  ಖರೀದಿಸುವಲ್ಲಿ ಮಗ್ನರಾಗಿರುವುದು ಕಂಡು ಬಂತು.

ಗುರುವಾರ ಬೆಳಗ್ಗೆಯಿಂದ ರಾತ್ರಿಯವರೆಗೂ ಮಾರುಕಟ್ಟೆಯಲ್ಲಿ ಹಬ್ಬದ ವ್ಯಾಪಾರ ಜೋರಾಗಿತ್ತು. ಕೆಲವು ಹೂವು, ಹಣ್ಣು, ಅಲಂಕಾರಿಕ ವಸ್ತುಗಳ ಅಂಗಡಿ, ದಿನಸಿ ಅಂಗಡಿಗಳಲ್ಲಿ ಜನದಟ್ಟಣೆಯೂ ನಿರ್ಮಾಣವಾಗಿತ್ತು. ಆಗಾಗ ಸುರಿಯುವ ಜಿಟಿಜಿಟಿ ಮಳೆ ನಡುವೆಯೂ ಜನರು ಮಾಸ್ಕ್ ಹಾಕಿಕೊಂಡು ವಸ್ತುಗಳ ಖರೀದಿಯಲ್ಲಿ ತೊಡಗಿಕೊಂಡರು. ಹಬ್ಬದ ಈ ಸಡಗರದಲ್ಲಿ ಜನರು ಸಾಮಾಜಿಕ ಅಂತರ ಮರೆತಿರುವುದು ಎಲ್ಲೆಡೆ ಗೋಚರಿಸಿತು.

ಪುಟ್ಟ ಗಣೇಶನ ಕಡೆ ಒಲವು: ವಿವಿಧ ಭಂಗಿಯ ಲಂಬೋದರನ ಮೂರ್ತಿಗಳು ಮಾರುಕಟ್ಟೆಗೆ ಬಂದಿದ್ದು ಶಿವರೂಪಿ ಗಣೇಶ, ಸಾಯಿರೂಪಿ ಗಜಾನನ, ನಂದಿರೂಢ ಏಕದಂತ, ವಿಷ್ಣುರೂಪಿ ವಕ್ರತುಂಡ, ವೆಂಕಟೇಶ ರೂಪಿ ವಿಘ್ನೇಶ್ವರ ಮೂರ್ತಿಗಳು ಗಮನ ಸೆಳೆಯುತ್ತಿವೆ. ಮಾರುಕಟ್ಟೆಗೆ ಬಂದ ಆಕರ್ಷಕ ಗಜಾನನ ಮೂರ್ತಿಗಳನ್ನು ಗುರುತಿಸಿ, ಅನೇಕರು ಮುಂಗಡ ಹಣ ಪಾವತಿ ಮಾಡಿದರು. ಕೋವಿಡ್ ಕಾರಣದಿಂದ ಆರ್ಥಿಕ ಸಂಕಷ್ಟದಲ್ಲಿರುವ ಬಹುತೇಕರು ಚಿಕ್ಕ ಮೂರ್ತಿಗಳ ಪ್ರತಿಷ್ಠಾಪನೆಗೆ ಒಲವು ತೋರುತ್ತಿರುವುದು ಕಂಡು ಬಂತು.

ಕಳೆಗುಂದಿದ ಸಾರ್ವಜನಿಕ ಉತ್ಸವ: ಸಾರ್ವಜನಿಕರು ಗಣೇಶನ ಸ್ವಾಗತಕ್ಕಾಗಿ ಮನೆಗಳನ್ನು ಸುಣ್ಣ-ಬಣ್ಣಗಳಿಂದ ಹಾಗೂ ಹಸಿರು ತಳೀರು ತೋರಣಗಳಿಂದ ಶೃಂಗರಿಸುತ್ತಿದ್ದ ದೃಶ್ಯ ಹಲವೆಡೆ ಕಂಡು ಬಂತು. ಗಣೇಶೋತ್ಸವ ಆಚರಣೆಗೆ ಮನೆಯಲ್ಲಿನ ಸಂಭ್ರಮಕ್ಕೇನೂ ಕೊರತೆಯಾಗಿಲ್ಲ. ಆದರೆ, ಸಾರ್ವಜನಿಕ ಗಣೇಶೋತ್ಸವ ಮಾತ್ರ ಅಕ್ಷರಶಃ ಕಳೆಗುಂದಿರುವುದು ಕಂಡು ಬಂತು. ಪ್ರತಿ ವರ್ಷ ಜಿಲ್ಲೆಯಲ್ಲಿ ಮೂರು ಸಾವಿರದಷ್ಟು ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ನಡೆಯುತ್ತಿತ್ತು. ಈ ಬಾರಿ ಕೋವಿಡ್ ಸೋಂಕಿನ ಆತಂಕ,  ಸುರಕ್ಷತೆಗಾಗಿ ಸರಕಾರ ವಿಧಿಸಿದ ವಿವಿಧ ಷರತ್ತುಗಳ ಕಾರಣದಿಂದ ಗಣೇಶೋತ್ಸವ ಸಮಿತಿಗಳಲ್ಲಿ ಹಬ್ಬದಾಚರಣೆಯ ಉತ್ಸಾಹ ಕಾಣುತ್ತಿಲ್ಲ. ಕೆಲ ಸಮಿತಿಯವರು ಸಾಂಕೇತಿಕವಾಗಿ ಸಾರ್ವಜನಿಕ ಉತ್ಸವ ಆಚರಿಸಲು ಮುಂದಾಗಿದ್ದರೆ ಇನ್ನೂ ಹಲವು ಸಮಿತಿಯವರು ಕೊರೊನಾ ಕಾರಣದಿಂದ ಸಾರ್ವಜನಿಕ ಉತ್ಸವ ಆಚರಣೆಯಿಂದ ಹಿಂದೆ ಸರಿದಿದ್ದಾರೆ.

Advertisement

ಒಟ್ಟಾರೆ ಕೋವಿಡ್ ಸಂಕಷ್ಟ ಕಾಲದಲ್ಲಿಯೂ ಸಂಭ್ರಮದ ಗಣೇಶೋತ್ಸವಕ್ಕೆ ಜಿಲ್ಲೆಯಾದ್ಯಂತ ಭರದ ಸಿದ್ಧತೆ ನಡೆದಿದ್ದು ಜನರ ಹಬ್ಟಾಚರಣೆಯ ಉತ್ಸಾಹ, ಸಂಭ್ರಮ ಎಲ್ಲೆಡೆ ಪಸರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next