ಈಗಾಗಲೇ ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿರುವ, “ಗಂಡುಲಿ’ ಚಿತ್ರದ ಹಾಡುಗಳು ಇತ್ತೀಚೆಗೆ ಬಿಡುಗಡೆಯಾಗಿವೆ. ನಟ ಪ್ರಥಮ್, ಹಿರಿಯ ನಟಿ ಸುಧಾ ನರಸಿಂಹರಾಜು, ಸಂಗೀತ ನಿರ್ದೇಶಕ ರವಿದೇವ್, ವಿತರಕಮರಿಸ್ವಾಮಿ, ದಿಲೀಪ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಮತ್ತು ಚಿತ್ರದ ಕಲಾವಿದರು, ತಂತ್ರಜ್ಞರ ಸಮ್ಮುಖದಲ್ಲಿ “ಗಂಡುಲಿ’ ಚಿತ್ರದ ಆಡಿಯೋ ಬಿಡುಗಡೆಯಾಯಿತು.
ಇದೇ ವೇಳೆ ಮಾತನಾಡಿದ “ಗಂಡುಲಿ’ ಚಿತ್ರದ ನಾಯಕ ನಟ ಕಂ ನಿರ್ದೇಶಕ ವಿನಯ್ ರತ್ನಸಿದ್ಧಿ, “ಈಗಾಗಲೇ ಸಿನಿಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಎಲ್ಲ ಕಡೆಯಿಂದ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ಆರಂಭದಲ್ಲಿ 20-30 ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಮಾಡುವ ಯೋಚನೆಯಲ್ಲಿದ್ದೆವು. ಆದರೆ ವಿತರಕರು 50ಕ್ಕೂ ಹೆಚ್ಚು ಚಿತ್ರಮಂದಿರಗಳನ್ನು ಕೊಡಿಸುತ್ತಿದ್ದಾರೆ. ಊರಿನ ದೇವಸ್ಥಾನದ ಸಂಶೋಧನೆಗೆ ಬರುವ ಪುರಾತತ್ವ ಇಲಾಖೆಯ ಕೆಲವರು ನಿಗೂಢವಾಗಿ ಕೊಲೆಯಾಗ್ತಾರೆ. ಅವರು ಏಕೆ ಕೊಲೆಯಾದರು, ಅದರ ಹಿಂದಿರುವ ಕಾರಣವೇನು ಎಂಬುದೇ ಸಿನಿಮಾದ ಒಂದು ಎಳೆಯ ಸಸ್ಪೆನ್ಸ್-ಥ್ರಿಲ್ಲರ್ ಕಥೆ. ಇಲ್ಲಿ ಸೆಂಟಿಮೆಂಟ್, ಲವ್, ಆ್ಯಕ್ಷನ್, ಸಸ್ಪೆನ್ಸ್-ಥ್ರಿಲ್ಲರ್ ಎಲ್ಲ ಥರದ ಎಲಿಮೆಂಟ್ಸ್ ಇದೆ. ಪ್ರೇಕ್ಷಕರಿಗೆ ಇಷ್ಟವಾಗುವಂಥ ಅಂಶಗಳನ್ನು ಇಟ್ಟು ಕೊಂಡು ಸಿನಿಮಾ ಮಾಡಿದ್ದೇವೆ’ ಎಂದರು.
ಇದನ್ನೂ ಓದಿ:ಅಡಿಲೇಡ್ ಟೆನಿಸ್’ ಕೂಟ : ಸೆಮಿಫೈನಲ್‌ಗೆ ನೆಗೆದ ಸಾನಿಯಾ ಮಿರ್ಜಾ ಜೋಡಿ
ಚಿತ್ರದಲ್ಲಿ ಹಿರಿಯ ನಟಿ ಸುಧಾ ನರಸಿಂಹರಾಜು ನಾಯಕನ ತಾಯಿಯ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದು, “ಹೊಸಬರ ತಂಡವಾದರೂ ತುಂಬ ಚೆನ್ನಾಗಿ ಸಿನಿಮಾ ಮಾಡಿದ್ದಾರೆ. ಸಿನಿಮಾದ ಹಾಡುಗಳು ತುಂಬಾ ಕ್ಯಾಚಿ ಆಗಿವೆ. ಹಿಂದಿನ ಹುಲಿ ಸೀರಿಸ್ ಸಿನಿಮಾಗಳಂತೆ ಈ ಸಿನಿಮಾವೂ ಜನರ ಮನ ಗೆಲ್ಲಲಿದೆ. ಹಳ್ಳಿಯ ಪರಿಸರದಲ್ಲಿ ನಡೆಯೋ ಕಥೆಯಿದಾಗಿದ್ದು, ದಿವಾನರ ಕುಟುಂಬದ ಹೆಣ್ಣುಮಗಳಾಗಿ ನಾನು ಕಾಣಿಸಿಕೊಂಡಿದ್ದೇನೆ. ತಾಯಿ ಮಗನ ಸೆಂಟಿಮೆಂಟ್ ಜೊತೆಗೆ ಮನರಂಜನಾತ್ಮಕ ಕಥೆಯೂ ಚಿತ್ರದಲ್ಲಿದೆ’ ಎಂದು ತಮ್ಮ ಪಾತ್ರ ಪರಿಚಯ ಮಾಡಿಕೊಟ್ಟರು.
“ಗಂಡುಲಿ’ ಚಿತ್ರದಲ್ಲಿ ನಾಯಕಿಯಾಗಿ ಛಾಯಾದೇವಿ ನಟಿಸಿದ್ದು, ಉಳಿದಂತೆ ಧರ್ಮೇಂದ್ರ ಅರಸ್, ಸುಬ್ಬೇಗೌಡ, ರಾಮಣ್ಣ, ರಂಜಿತ್, ಪುನೀತ್ ಮುಂತಾದವರು ಇತರ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರದ 3 ಹಾಡುಗಳಿಗೆ ರವಿದೇವ್ ಸಂಗೀತ ಸಂಯೋಜನೆ ಮಾಡಿದ್ದಾರೆ. ವಿಜಯಪ್ರಕಾಶ್ ಮೊದಲಾದವರು ಚಿತ್ರದ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಚಿತ್ರಕ್ಕೆ ರಾಜು ಶಿವಶಂಕರ್ ಮತ್ತು ಶ್ಯಾಮ್ ಛಾಯಾಗ್ರಹಣ, ಸತೀಶ್ ಚಂದ್ರಯ್ಯ ಸಂಕಲನವಿದೆ.