ಹುಣಸೂರು: ಪ್ರಸ್ತುತ ಗಾಂಧಿ ತತ್ವಗಳಿಗೆ, ಪ್ರಜಾಪ್ರಭುತ್ವದ ಮೂಲ ಆಶಯಗಳಿಗೆ ಧಕ್ಕೆ ಬಂದಿದ್ದು ಗಾಂಧಿ ಎನ್ನುವುದು ಪ್ರಸ್ತುತತೆ ಎನ್ನುವಂತಾಗಿದೆ ಎಂದು ಶಾಸಕ ಎಚ್.ಪಿ.ಮಂಜುನಾಥ್ ಅಭಿಪ್ರಾಯಪಟ್ಟರು. ಹುಣಸೂರು ಮಹಿಳಾ ಸರ್ಕಾರಿ ಪದವಿ ಕಾಲೇಜಿನ ವತಿಯಿಂದ ಆಯೋಜಿಸಿದ್ದ ಚಾರಿತ್ರಿಕ ದಾಖಲೆಗಳ ಮಹತ್ವ ಮತ್ತು ಉಪಯೋಗ ಹಾಗೂ ಗಾಂಧಿ ಮತ್ತು ವಿಶ್ವಶಾಂತಿ ಕುರಿತಾದ ರಾಷ್ಟ್ರ ಮಟ್ಟದ ವಿಚಾರ ಸಂಕಿರಣದ ಸಮಾರೋಪದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಾವೆಲ್ಲ ಮರೆಯುತ್ತಿರುವ ಗಾಂಧಿ ಹಾಗೂ ಅಂಬೇಡ್ಕರ್‌ರ ಬಗ್ಗೆ ಸಾಹಿತಿ, ಬುದ್ಧಿಜೀವಿಗಳು ಮಾತ್ರ ಸ್ಮರಿಸುವಂತಾಗಿದೆ. ಅಹಿಂಸಾವಾದಿ ಗಾಂಧಿ ಜಾತ್ಯತೀತ ನಾಡಿನಲ್ಲಿ ಜಾತಿಗಳು ಬೇರೂರುತ್ತಿವೆ. ಧರ್ಮ ಸಂಘರ್ಷ ಬಿಸಿಏರುತ್ತಿದೆ, ಸ್ವಾತಂತ್ರ್ಯವೆಂಬುದು ಸ್ವೇಚ್ಚಾಚಾರವೆಂಬಂತಾಗಿದೆ. ಇದೀಗ ಅಘೋಷಿತ ತುರ್ತುಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಹೀಗಾಗಿ ಗಾಂಧಿ ಆಶಯಗಳಿಗೆ ಪೆಟ್ಟು ಬಿದ್ದಿದ್ದು ವಿದ್ಯಾರ್ಥಿಗಳು ಗಾಂಧೀಜಿ ಅವರ ಬಗ್ಗೆ ಹೆಚ್ಚು ಅಧ್ಯಯನ ನಡೆಸಬೇಕೆಂದರು.
ವಿಚಾರ ಸಂಕಿರಣ: ಕಾರ್ಯಕ್ರಮಕ್ಕೂ ಮುನ್ನ ಗಾಂಧಿ ಮತ್ತು ಮಹಿಳೆ ವಿಚಾರ ಸಂಕಿರಣದಲ್ಲಿ ಮೈಸೂರು ಮಹಾರಾಜ ಕಾಲೇಜಿನ ನಿವತ್ತ ಪ್ರಾಧ್ಯಾಪಕಿ ಪೊ›.ವಸಂತಮ್ಮ ವಿಷಯ ಮಂಡಿಸಿ, ಗಾಂಧೀಜಿ ಯಾವಾಗಲೂ ಮಹಿಳೆಯರನ್ನು ಸಬಲರನ್ನಾಗಿಸುವ ಆಶಯ ಹೊಂದಿದ್ದರು. ತಮ್ಮ ಹೋರಾಟದ ಮುಂಚೂಣಿಯಲ್ಲಿ ಮಹಿಳೆಯರನ್ನು ಪ್ರೋತ್ಸಾಹಿಸಿದ್ದರು. ಹೆಣ್ಣು ಮಕ್ಕಳು ರಾಜಕೀಯಕ್ಕೆ ಬರಬೇಕೆಂಬುದು ಅವರ ದೊಡ್ಡ ಆಶಯವಾಗಿತ್ತು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ಪುಷ್ಪಾ ಅಮರ್‌ನಾಥ್, ಪ್ರತಿಯೊಬ್ಬ ಮಹಿಳೆ ಸ್ವತಂತ್ರವಾಗಿ ಬದುಕಬೇಕು. ವಿಧವಾ ವಿವಾಹಕ್ಕೆ ಪ್ರೋತ್ಸಾಹ, ಎಲ್ಲಡೆ ಸಮಾನ ಅವಕಾಶ ನೀಡಿ ಸಮಾಜದ ಕಟ್ಟುಪಾಡನ್ನು ವಿರೋಧಿಸುತ್ತಿದ್ದ ಗಾಂಧೀಜಿಯವರನ್ನು ಮನುವಾದಿಗಳು ಇಂದಿಗೂ ವಿರೋಧಿಸುತ್ತಾರೆಂದರು.
ಸಮಾರೋಪದಲ್ಲಿ ಕಾಲೇಜು ಶಿಕ್ಷಣ ಇಲಾಖೆ ಡಿ.ಡಿ.ಪೊ›.ಎಂ.ಆರ್.ಸೌಭಾಗ್ಯಾ, ಪ್ರಾಂಶುಪಾಲ ಜ್ಞಾನಪ್ರಕಾಶ್, ಸಿಡಿಸಿ ಕಾರ್ಯಾಧ್ಯಕ್ಷ ಗೋವಿಂದರಾಜಗುಪ್ತ ಇದ್ದರು. ವಿಚಾರ ಸಂಕಿರಣದ ಸಂಘಟನಾ ಕಾರ್ಯದರ್ಶಿ ಡಾ.ಮಂಜುನಾಥ್, ಸಂಚಾಲಕ ಬಿ.ಎಂ.ನಾಗರಾಜ್,ಐ.ಕ್ಯೂ.ಎ.ಸಿ.ಸಂಚಾಲಕ ಪುಟ್ಟಶೆಟ್ಟಿ ಗಾಂಧಿ ಕುರಿತ ನಡೆದ ಸಂವಾದದಲ್ಲಿ ಪಾ.ಮಲ್ಲೇಶ್, ಗಾಂಧಿ ಅಧ್ಯಯನ ಕೇಂದ್ರದ ಪೊ›.ಎಸ್.ಶಿವರಾಜಪ್ಪ, ತಿರುಪತಿಹಳ್ಳಿ ಶಿವಶಂಕರಪ್ಪ, ಪೊ›.ವಸಂತಮ್ಮ, ಡಾ.ಪುಷ್ಪಾ ಭಾಗವಹಿಸಿದ್ದರು.
ಆದೇಶ ಕೊಟ್ಟರೂ ಗಾಂಧಿ ಭವನ ನಿರ್ಮಾಣವೇಕಿಲ್ಲ?
ಗಾಂಧೀಜಿ ಅವರು ಗ್ರಾಮೀಣ ಭಾರತದ ಪರಿಕಲ್ಪನೆ ಕಂಡವರು, ಆದರೆ ನೆಹರು ಪ್ರಧಾನಿಯಾದಾಗ ಕೈಗಾರಿಕೆಗಳಿಗೆ ಹೆಚ್ಚು ಆದ್ಯತೆ ನೀಡಲಾಗುವುದೆಂಬ ಸಂದರ್ಭದಲ್ಲಿ ಗಾಂಧೀಜಿ ಗ್ರಾಮಾಭಿವೃದ್ಧಿಗೆ ಆದ್ಯತೆ ನೀಡಬೇಕೆಂಬ ಆಶಯಕ್ಕೆ ಸೂಕ್ತ ಬೆಲೆ ಸಿಗಲಿಲ್ಲ. ಎಲ್ಲೆಡೆ ಗಾಂಧಿ ಭವನ ನಿರ್ಮಿಸಬೇಕೆಂದು ಮುಖ್ಯಮಂತ್ರಿ ಆದೇಶಿಸಿದ್ದರೂ ಇನ್ನೂ ಆಗದಿರುವುದು ವಿಷಾದನೀಯ ಎಂದು ಹಿರಿಯ ಗಾಂಧಿವಾದಿ ಪ.ಮಲ್ಲೇಶ್ ನುಡಿದರು.