ಬಂಟ್ವಾಳ: ಗಾಂಧೀಜಿಯವರ ಹೋರಾಟಗಳ ಜತೆಗೆ ಅವರ ವ್ಯಕ್ತಿತ್ವವೂ ಆದರ್ಶವಾಗಿದ್ದು, ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ ಖಾವಂದರ ಮಾರ್ಗದರ್ಶನದಲ್ಲಿ ಜನಜಾಗೃತಿ ವೇದಿಕೆಯೂ ಗಾಂಧೀಜಿ ತತ್ತ್ವಾದರ್ಶದೊಂದಿಗೆ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಹೇಳಿದರು.
ಬುಧವಾರ ಬಿ.ಸಿ. ರೋಡ್‌ನ ಸ್ಪರ್ಶಾ ಕಲಾಮಂದಿರದಲ್ಲಿ ಅಖೀಲ ಕರ್ನಾಟಕ ಜನಜಾಗೃತಿ ವೇದಿಕೆ ಬಂಟ್ವಾಳ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳದ ಸಹಯೋಗದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಆಯೋಜನೆಗೊಂಡಿದ್ದ ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕಾಗಿ ಜನಜಾಗೃತಿ ಜಾಥಾ ಮತ್ತು ವ್ಯಸನಮುಕ್ತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ಜಗತ್ತಿನ ಅತ್ಯಂತ ಹೆಚ್ಚು ದೇಶಗಳಲ್ಲಿ ಗೌರವಿಸಲ್ಪಡುವ ಗಾಂಧೀಜಿ ಕುರಿತು ಭಾರತದಲ್ಲೇ ಅಗೌರವದ ಮಾತುಗಳು ಕೇಳಿಬರುತ್ತಿರುವುದು ವಿಷಾದ ನೀಯ. ಸಾಮಾಜಿಕ ಸಾಮರಸ್ಯಕ್ಕೆ ಅವರ ಕೊಡುಗೆ ಅದ್ವಿತೀಯ. ಕಾನೂನಿನ ಮೂಲಕ ಸಾಧ್ಯವಾಗದ ವ್ಯಸನ ಮುಕ್ತ ಕಾರ್ಯವನ್ನು ಖಾವಂದರು ಮನಪರಿವರ್ತನೆಯ ಮೂಲಕ ಸಾಧಿಸಿ ತೋರಿಸಿದ್ದಾರೆ ಎಂದರು. ಸಮಾ ವೇಶಕ್ಕೆ ಪೂರ್ವಭಾವಿಯಾಗಿ ಬಿ.ಸಿ. ರೋಡ್‌ನಿಂದ ನಡೆದ ಬೃಹತ್ ಜಾಗೃತಿ ಜಾಥಾವನ್ನು ಬಂಟ್ವಾಳ ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ಎ.ಸಿ. ಭಂಡಾರಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದ ಜನಜಾಗೃತಿ ವೇದಿಕೆಯ ಸದಸ್ಯ ಕೃಷ್ಣಕುಮಾರ್ ಪೂಂಜ ಅವರನ್ನು ಸಮ್ಮಾನಿಸಲಾಯಿತು.
ಬಂಟ್ವಾಳ ಜನಜಾಗೃತಿ ವೇದಿಕೆಯ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ವಲಯ ಪ್ರಧಾನ ಧರ್ಮಗುರು ವಂ| ವಲೇರಿಯನ್ ಡಿ’ಸೋಜಾ, ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ, ಜಿ.ಪಂ. ಸದಸ್ಯರಾದ ಬಿ. ಪದ್ಮ ಶೇಖರ್ ಜೈನ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಮಂಜುಳಾ ಮಾವೆ, ನಿವೃತ್ತ ಆರೋಗ್ಯ ಮೇಲ್ವಿಚಾರಕ ಜಯರಾಮ ಪೂಜಾರಿ, ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷರಾದ ಕೈಯೂರು ನಾರಾಯಣ ಭಟ್, ಕಿರಣ್ ಹೆಗ್ಡೆ, ರೊನಾಲ್ಡ್ ಡಿ’ಸೋಜಾ, ಬಂಟ್ವಾಳ ಕೇಂದ್ರ ಒಕ್ಕೂಟದ ಅಧ್ಯಕ್ಷ ಮಾಧವ ಎಂ. ವಳವೂರು, ಬಂಟ್ವಾಳ ವರ್ತಕರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸುಭಾಶ್ಚಂದ್ರ ಜೈನ್, ಜಯಂತಿ ಪೂಜಾರಿ, ಯೋಜನಾಧಿಕಾರಿ ಮೋಹನ್ ಕೆ., ವಿವಿಧ ವಲಯಗಳ ಅಧ್ಯಕ್ಷರು ಉಪಸ್ಥಿತರಿದ್ದರು. ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ಯೋಜನಾಧಿಕಾರಿ ಜಯಾನಂದ್ ಪಿ. ಸ್ವಾಗತಿಸಿದರು. ರಾಮ್‌ಕುಮಾರ್ ಕಾರ್ಯಕ್ರಮ ನಿರೂಪಿಸಿದರು.