Advertisement

Police FIR: ಎಫ್ಐಆರ್‌ ದಾಖಲಿಸಿ ನನ್ನ ವಿರುದ್ಧ ಸರ್ಕಾರದಿಂದ ದ್ವೇಷ ಸಾಧನೆ: ಎಚ್‌ಡಿಕೆ

10:27 PM Nov 05, 2024 | Team Udayavani |

ರಾಮನಗರ: ಉಪಚುನಾವಣೆ ಸಮಯದಲ್ಲಿ ಕಾಂಗ್ರೆಸ್‌ ಸರ್ಕಾರ ನನ್ನ ವಿರುದ್ಧ ಭಾರೀ ಉಮೇದಿನಿಂದ ಎಫ್‌ಐಆರ್‌ ದಾಖಲಿಸಿ ದ್ವೇಷ ಸಾಧನೆ ಮಾಡುತ್ತಿದೆ. ಐಪಿಎಸ್‌ ಅಧಿಕಾರಿಯೊಬ್ಬನ ದೂರಿನ ಮೇರೆಗೆ ಎಫ್‌ಐಆರ್‌ ದಾಖಲಿಸುತ್ತಿರುವುದು ಹಾಸ್ಯಾಸ್ಪದ. ಸರ್ಕಾರದ ಈ ಕ್ರಮಕ್ಕೆ ನ್ಯಾಯಾಲಯದ ಮೂಲಕವೇ ಉತ್ತರ ನೀಡುವುದಾಗಿ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ಚನ್ನಪಟ್ಟಣ ತಾಲೂಕಿನ ಅಕ್ಕೂರು ಹೊಸಹಳ್ಳಿ ಗ್ರಾಮದಲ್ಲಿ ತಮ್ಮ ಪುತ್ರ ನಿಖಿಲ್‌ ಕುಮಾರಸ್ವಾಮಿ ಪರವಾಗಿ ಚುನಾವಣಾ ಪ್ರಚಾರ ನಡೆಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಎಫ್‌ಐಆರ್‌ ಪ್ರತಿಯನ್ನು ನಾನು ಓದಿದ್ದೇನೆ. ಇದೊಂದು ಹಾಸ್ಯಾಸ್ಪದ ಹಾಗೂ ದುರುದ್ದೇಶ ಪೂರಿತ ಎಫ್‌ಐಆರ್‌ ಎಂಬುದು ಓದಿದ ತಕ್ಷಣ ತಿಳಿಯುತ್ತದೆ. ನಾನು ಪ್ರೆಸ್‌ ಮೀಟ್‌ ಮಾಡಿದೆ ಎಂದು ಎಫ್‌ಐಆರ್‌ ಮಾಡಿಸಿದ್ದಾರೆ.

ನಾನು ಪತ್ರಿಕಾಗೋಷ್ಠಿಯಲ್ಲಿ ಅವರ ವಿರುದ್ಧ ಆರೋಪ ಮಾಡಿದ್ದೇನೆ ಎಂದು ದೂರುದಾರರು ಹೇಳಿಕೆ ನೀಡಿದ್ದು, ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ. ನಾನು ಅವರ ಬಗ್ಗೆ ತಪ್ಪು ಮಾಹಿತಿ ನೀಡಿದ್ದೇನೆಯೇ? ಅವರು ಬೇಕಿದ್ದರೆ ನನ್ನ ಪತ್ರಿಕಾಗೋಷ್ಠಿಯ ವಿಡಿಯೋವನ್ನು ಪರಿಶೀಲಿಸಬಹುದು. ಹೇಳಿಕೆ ನೀಡಿದರು ಎಂದು ಚನ್ನಪಟ್ಟಣದ ಅಭ್ಯರ್ಥಿ ನಿಖಿಲ್‌ ಮೇಲೂ ಎಫ್‌ಐಆರ್‌ ಮಾಡಿಸಿದ್ದಾರೆ ಎಂದರು.

ಮುಖ್ಯ ಕಾರ್ಯದರ್ಶಿಗೆ ದೂರು ಕೊಟ್ಟರು ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಸುರೇಶ್‌ ಬಾಬು ಮೇಲೂ ಎಫ್‌ಐಆರ್‌ ಮಾಡಿಸಿದ್ದಾರೆ. ಹಾಗಾದರೆ, ಯಾರೂ ವಿರುದ್ಧವೂ ಮಾತನಾಡಬಾರದು, ದೂರು ನೀಡಬಾರದು ಎಂದು ಕಾನೂನಿನಲ್ಲಿ ಇದೆಯೇ? ನಮ್ಮ ಬಾಯಿ ಮುಚ್ಚಿಸಲು ಇವರಿಂದ ಸಾಧ್ಯವಿಲ್ಲ. ಇಂತಹ ನೂರು ಎಫ್‌ಐಆರ್‌ ದಾಖಲಾದರೂ ನಾನು ಎದೆಗುಂದುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next