ಮೂಡಿಸಿರಿ ನಮ್ಮ ಹೃದಯಗಳಲ್ಲಿ ಸ್ವಾತಂತ್ರದ ಛಾಪು…ವಂದಿಸುವೆವು ಹೃದಯ ಪೂರ್ವಕವಾಗಿ ನಿಮಗೆ ನಾವು…ರಕ್ತವಿಲ್ಲದೆ ದೇಹ ಹೇಗೆ ಬದುಕಲು ಸಾಧ್ಯವಿಲ್ಲವೋ ಹಾಗೆಯೇ ಶ್ರದ್ಧೆ ಮತ್ತು ಪ್ರಾರ್ಥನೆಗಳಿಲ್ಲದೆ ಆತ್ಮವೂ ಬದುಕಲು ಸಾಧ್ಯವಿಲ್ಲ…ಹೀಗೆ ಬ್ರಿಟಿಷ್ ಸರ್ಕಾರದ ವಿರುದ್ಧ ಸ್ವಾತಂತ್ರÂದ ಕಿಚ್ಚನ್ನು ಹತ್ತಿಸಿದ ಮಹಾತ್ಮ ಮೋಹನ್‌ದಾಸ್ ಕರಮಚಂದ್ರ ಗಾಂಧಿ. ಅ.2 ಸೋಮವಾರ ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಸ್ಮರಣೆ ನಡೆಯಿತು. ಈ ವೇಳೆ ಗಣ್ಯರು, ಗಾಂಧಿವಾದಿಗಳು ಬಾಪು ಆದರ್ಶಗಳನ್ನು ಪಾಲಿಸಲು ಯುವಕರಿಗೆ ಕರೆ ನೀಡಿದರು.
ಮೈಸೂರು: ಯುವಜನತೆ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಬಾಪುವಿನ ಜಯಂತಿಯಲ್ಲಿ ಪಾಲ್ಗೊಳ್ಳಲು ಆಸಕ್ತಿ ತೋರದಿರುವುದನ್ನು ನೋಡಿದರೆ ನಮ್ಮ ಶಿಕ್ಷಣ ವ್ಯವಸ್ಥೆ ಸರಿ ಇದೆಯೇ ಎಂದು ಪ್ರಶ್ನೆ ಮಾಡಿಕೊಳ್ಳಬೇಕಿದೆ ಎಂದು ಗಾಂಧಿ ಮಾರ್ಗಿ ಪ್ರೊ.ಎಂ.ಕರೀಂಮುದ್ದೀನ್ ವಿಷಾದಿಸಿದರು.
ಮೈಸೂರು ವಿವಿ ಗಾಂಧಿ ಭವನ ಮತ್ತು ಸರಸ್ವತಿಪುರಂನ ಮಹಾಬೋಧಿ ಶಾಲೆ ವತಿಯಿಂದ ಸೋಮವಾರ ಮಾನಸಗಂಗೋತ್ರಿ ಗಾಂಧಿ ಅಧ್ಯಯನ ಕೇಂದ್ರದಲ್ಲಿ 149ನೇ ಗಾಂಧಿ ಜಯಂತಿ ಪ್ರಯುಕ್ತ ಆಯೋಜಿಸಿದ್ದ ವಿಶ್ವ ಅಹಿಂಸಾ ದಿನದಲ್ಲಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಬೇರೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಆಸಕ್ತಿ ತೋರುವ ವಿದ್ಯಾರ್ಥಿಗಳು, ಯುವಜನತೆ ಗಾಂಧಿಜಯಂತಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸದಿರುವುದು ಬೇಸರದ ಸಂಗತಿ. ಯುವಜನರಲ್ಲಿ ಇಂತಹ ಮನಸ್ಥಿತಿ ಬೆಳೆಯಲು ಶಿಕ್ಷಣ ವ್ಯವಸ್ಥೆಯೇ ಕಾರಣ ಎಂದರು.
ಇಂದಿನ ಶಿಕ್ಷಣ ಸಂಸ್ಥೆಗಳಲ್ಲಿ ನೀಡುವ ಶಿಕ್ಷಣ ಕೇವಲ ಜ್ಞಾನ ಪ್ರಧಾನವಾಗಿರುತ್ತದೆಯೇ ಹೊರತು ಗಾಂಧೀಜಿ ಅವರು ಹೇಳಿದ ಮೌಲ್ಯಯುತ ಶಿಕ್ಷಣ ಮರೆಯಾಗುತ್ತಿದೆ. ಇಂದಿನ ಯುವಕರಲ್ಲಿ ಕಲಿಯುವ ಆಸಕ್ತಿ, ಒಲುಮೆ, ಬದಲಾವಣೆ ತಂದುಕೊಳ್ಳುವ ಇಚ್ಛೆ ಬೆಳೆಯಬೇಕಿದೆ ಎಂದು ತಿಳಿಸಿದರು.
ಪ್ರಜ್ಞಾ ಪ್ರಧಾನ ಶಿಕ್ಷಣ ನೀಡುವತ್ತ ಶಿಕ್ಷಣ ಸಂಸ್ಥೆಗಳು ಮುಂದಾಗಬೇಕಿದೆ. ಆ ಮೂಲಕ ಜ್ಞಾನ ಪ್ರಧಾನ ಶಿಕ್ಷಣಕ್ಕಿಂತ ಪ್ರಜ್ಞಾ ಪ್ರಧಾನ ಶಿಕ್ಷಣ ನೀಡುವುದು ನಮ್ಮ ಗುರಿಯಾಗಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಂಗವಾಗಿ ಸಭಿಕರಿಗೆ ಸ್ವತ್ಛತಾ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಮೈಸೂರು ವಿವಿ ಪ್ರಭಾರ ಕುಲಪತಿ ಪ್ರೊ.ದಯಾನಂದ ಮಾನೆ, ಕುಲಸಚಿವೆ ಡಿ.ಭಾರತಿ, ಗಾಂಧಿಭವನದ ನಿರ್ದೇಶಕ ಪ್ರೊ.ಎಸ್.ಶಿವರಾಜಪ್ಪ, ಮಹಾಬೋಧಿ ಶಾಲೆ ಉಪ ಪ್ರಾಂಶುಪಾಲ ಪಿ.ಆರ್.ದ್ವಾರಕೀಶ್ ಇದ್ದರು.