– ಗಾಂಧೀಜಿ ಭಂಗಿಯಲ್ಲಿ ಕುಳಿತ ಪ್ರಧಾನಿ ಚಿತ್ರ ಪ್ರಕಟ
– ನೌಕರರಿಗೆ ಶಾಕ್, ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ
ಮುಂಬೈ: ಖಾದಿ ಗ್ರಾಮೋದ್ಯೋಗ ಆಯೋಗದ ಗೋಡೆ ಕ್ಯಾಲೆಂಡರ್ ಹಾಗೂ ಟೇಬಲ್ ಡೈರಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಭಾವಚಿತ್ರದ ಬದಲಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋವನ್ನು ಮುದ್ರಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಗಾಂಧೀಜಿ ಅವರ ಭಂಗಿಯಲ್ಲೇ ನರೇಂದ್ರ ಮೋದಿ ಅವರು ಕುಳಿತು, ದೊಡ್ಡ ಚರಕವೊಂದರಲ್ಲಿ ಖಾದಿ ನೇಯುತ್ತಿರುವ ಫೋಟೋವನ್ನು ಕ್ಯಾಲೆಂಡರ್ ಹಾಗೂ ಟೇಬಲ್ ಡೈರಿಯ ಮುಖಪುಟದಲ್ಲಿ ಪ್ರಕಟಿಸಲಾಗಿದೆ. ಪ್ರತಿ ಬಾರಿ ಕ್ಯಾಲೆಂಡರ್ ಹಾಗೂ ಡೈರಿಯಲ್ಲಿ ಗಾಂಧಿ ಫೋಟೋವನ್ನು ಮಾತ್ರ ಕಂಡಿದ್ದ ಗ್ರಾಮೋದ್ಯೋಗ ಆಯೋಗದ ಸಿಬ್ಬಂದಿ, ಈ ಬೆಳವಣಿಗೆಯಿಂದ ಅವಾಕ್ಕಾಗಿದ್ದಾರೆ. ಗುರುವಾರ ಮಧ್ಯಾಹ್ನ ಭೋಜನದ ಸಮಯದಲ್ಲಿ ವಿಲೆಪಾರ್ಲೆಯಲ್ಲಿರುವ ಕೇಂದ್ರ ಕಚೇರಿಯಲ್ಲಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆಯನ್ನೂ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಆದರೆ, ಇದರಲ್ಲಿ ವಿಶೇಷವೇನೂ ಇಲ್ಲ. ಈ ಹಿಂದೆ ಕೂಡ ಫೋಟೋ ಬದಲಿಸಿದ ನಿದರ್ಶನಗಳಿವೆ. ಮೋದಿ ಅವರು ತುಂಬಾ ಹಿಂದಿನಿಂದಲೂ ಖಾದಿ ವಸ್ತ್ರ ಧರಿಸುತ್ತಿದ್ದಾರೆ. ಜನಮಾನಸದಲ್ಲಿ ಖಾದಿಯನ್ನು ಜನಪ್ರಿಯಗೊಳಿಸಿದ್ದಾರೆ ಎಂದು ಖಾದಿ ಗ್ರಾಮೋದ್ಯೋಗ ಆಯೋಗದ ವಿನಯ್ ಕುಮಾರ್ ಸಕ್ಸೇನಾ ಸಮರ್ಥಿಸಿಕೊಂಡಿದ್ದಾರೆ.
ಕಳೆದ ವರ್ಷ ಕ್ಯಾಲೆಂಡರ್‌ನಲ್ಲಿ ಮೋದಿ ಅವರ ಫೋಟೋವನ್ನೂ ಸೇರಿಸಲಾಗಿತ್ತು. ಈ ಬಗ್ಗೆ ಆಡಳಿತ ಮಂಡಳಿಯ ಗಮನಕ್ಕೆ ತರಲಾಗಿತ್ತು. ಆದರೆ ಈ ಬಾರಿ ಗಾಂಧೀಜಿ ಅವರ ಫೋಟೋವನ್ನು ಸಂಪೂರ್ಣವಾಗಿ ಕೈಬಿಡಲಾಗಿದೆ ಎಂದು ಹಿರಿಯ ಉದ್ಯೋಗಿಯೊಬ್ಬರು ಬೇಸರ ತೋಡಿಕೊಂಡಿದ್ದಾರೆ.