ಬೆಂಗಳೂರು: ರಾಜ್ಯದಲ್ಲಿ ನಡೆದಿರುವ ಹಲವು ಜನಪರ ಚಳವಳಿಗಳ ಮೇಲೆ ಗಾಂಧೀಜಿ ಅವರ ಚಿಂತನೆಗಳು ಪ್ರಭಾವ ಬೀರಿವೆ ಎಂದು ಲೇಖಕ ಹಾಗೂ ಬೆಂಗಳೂರು ವಿವಿಯ ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ. ನಟರಾಜ್ ಹುಳಿಯಾರ್ ಅಭಿಪ್ರಾಯಪಟ್ಟರು.
ಕೇಂದ್ರ ಸಾಹಿತ್ಯ ಅಕಾಡೆಮಿ, ಸೆಂಟ್ರಲ್ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ “ಕನ್ನಡದಲ್ಲಿ ಗಾಂಧೀ ಸ್ವೀಕಾರ’ ಕುರಿತ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವನೂರು ಮಹಾದೇವ ಅವರ ದಲಿತ ಚಳವಳಿ ಸೇರಿದಂತೆ ಹಲವು ಚಳವಳಿಗಳಲ್ಲಿ ಗಾಂಧೀಜಿ ಅವರ ಚಿಂತನೆಗಳಿವೆ ಎಂದರು.
ಗಾಂಧೀಜಿ ಚಿಂತನೆ ಮತ್ತು ಶಾಂತಿಯುತ ಹೋರಾಟಗಳು ಒಂದು ಕಾಲಘಟ್ಟಕ್ಕೆ ಸೀಮಿತವಾಗಿಲ್ಲ. ಹೀಗಾಗಿಯೇ ಎಲ್ಲಾ ಕಾಲಘಟ್ಟಕ್ಕೂ ಪ್ರಸ್ತುತವಾಗಿ ನಿಲ್ಲುತ್ತವೆ. ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದಾಗ ಗಾಂಧೀಜಿ ಅವರನ್ನು ಮತ್ತೆ ಓದುವ ಅವಶ್ಯಕತೆಯಿದೆ ಎನಿಸುತ್ತದೆ ಎಂದು ತಿಳಿಸಿದರು.
ರಾಷ್ಟ್ರಕವಿ ಕುವೆಂಪು, ಪಿ.ಲಂಕೇಶ್, ಶಿವರಾಮ ಕಾರಂತ, ಪೂರ್ಣಚಂದ್ರ ತೇಜಸ್ವಿ, ಚಂದ್ರಶೇಖರ ಕಂಬಾರ ಮತ್ತು ಸಿದ್ದಲಿಂಗಯ್ಯ ಅವರ ಸಾಹಿತ್ಯದಲ್ಲೂ ಗಾಂಧೀಜಿ ಅವರನ್ನು ಕಾಣಬಹುದಾಗಿದೆ. ಕಾರಂತರ ಚೋಮನದುಡಿ, ದೇವನೂರರ ಎದೆಗೆ ಬಿದ್ದ ಅಕ್ಷರ, ತೇಜಸ್ವಿಯ ಕರ್ವಾಲೋ ಸೇರಿದಂತೆ ಅನೇಕರ ಕೃತಿಗಳಲ್ಲಿ ಗಾಂಧೀಯ ಚಿಂತನೆಗಳಿವೆ ಎಂದು ಹೇಳಿದರು.
ಗಾಂಧೀಜಿ ಅವರ ಅಹಿಂಸೆ ಮಾರ್ಗ ದುರ್ಬಲ ಅಸ್ತ್ರವಲ್ಲ ಅದು ಶೌರ್ಯದ ಅಸ್ತ್ರವಾಗಿದೆ. ಮಹಾತ್ಮ ಗಾಂಧಿಯವರ ಆತ್ಮಕತೆ ಹಲವಾರು ಭಾಷೆಗಳಿಗೆ ಭಾಷಾಂತರವಾಗಿದೆ. ಆದರೆ ಎಂದಿಗೂ ಅವರು ಆ ಕೃತಿಯನ್ನು ಆತ್ಮಕತೆ ಎನ್ನದೆ ಸತ್ಯಾನ್ವೇಷಣೆ, ಸತ್ಯದೊಂದಿಗಿನ ಪ್ರಯೋಗ ಎಂದಿದ್ದಾರೆ ಎಂದು ತಿಳಿಸಿದರು.
ಕೇಂದ್ರ ಸಾಹಿತ್ಯ ಅಕಾಡೆಮಿ ಭಾಷಾಂತರ ಕೇಂದ್ರದ ಗೌರವ ನಿರ್ದೇಶಕ ಎಸ್.ಆರ್.ವಿಜಯಶಂಕರ ಮಾತನಾಡಿ, ಇತ್ತೀಚಿನ ವಿದ್ಯಮಾನಗಳನ್ನು ಗಮನಿಸಿದಾಗ ಗಾಂಧೀಜಿ ಅವರು ಪ್ರಸ್ತುತವಾಗಿ ನಿಲ್ಲುತ್ತಾರೆ ಎಂದು ಹೇಳಿದರು. ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ, ಕವಿ ಸಿದ್ದಲಿಂಗಯ್ಯ, ಹಿರಿಯ ವಿದ್ವಾಂಸ ಶಿವರಾಜ್ ಉಪಸ್ಥಿತರಿದ್ದರು.