ವಿಜಯಪುರ: ಭಾರತ ಕ್ವಿಟ್ ಇಂಡಿಯಾ ಚಳವಳಿಯ 75 ವರ್ಷದ ಸಂಭ್ರಮಾಚರಣೆಯಲ್ಲಿದೆ. ಸ್ವಾತಂತ್ರ್ಯ ಭಾರತದಲ್ಲಿ ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಹಾತ್ಮಗಾಂಧೀಜಿ ಅವರು ಕಂಡಿದ್ದ ಸಮೃದ್ಧ ಭಾರತ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂದು ಕೇಂದ್ರ ಸರ್ಕಾರದ ಕುಡಿಯುವ ನೀರು ಹಾಗೂ ನೈರ್ಮಲ್ಯ ಖಾತೆ ಸಚಿವ ರಮೇಶ ಜಿಗಜಿಣಗಿ ಹೇಳಿದರು. ರವಿವಾರ ನಗರದಲ್ಲಿ ನನ್ನ ಕನಸಿನ ಭಾರತ ಚಿಂತನ ಮಂಥನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆ. 9 ಆಗಸ್ಟ್ ಕ್ರಾಂತಿ ಎಂದು ಕರೆಸಿಕೊಳ್ಳುವ ಕ್ವಿಟ್ ಇಂಡಿಯಾ ಚಳವಳಿ ಭಾರತೀಯರ ಪಾಲಿಗೆ ಎಂದೂ ಮರೆಯದ ದಿನ. ಆ ದಿನ ಮಾಡಿದ ಸಂಕಲ್ಪವೇ ಭವಿಷ್ಯದ ಕೆಲವೇ ವರ್ಷಗಳಲ್ಲಿ ಭಾರತ ಬಂಧಮುಕ್ತವಾಗಲು ಸಾಧ್ಯವಾಯ್ತು. ಹೀಗಾಗಿ ಆಗಸ್ಟ್ ಕ್ರಾಂತಿಯನ್ನು ನೆನೆಯುವುದು ಎಂದು ಭಾರತೀಯರ ಪಾಲಿಗೆ ಹೆಗ್ಗಳಿಕೆ ಸಂಗತಿ. ದೇಶಪ್ರೇಮಕ್ಕೆ ನವಚೈತನ್ಯ ಮೂಡಿರುವ ಸ್ಫೂರ್ತಿ. ಭವಿಷ್ಯದ ಪೀಳಿಗೆಗೂ ಇದು ಚೈತನ್ಯದ ಚಿಲುಮೆ ಎಂದು ಬಣ್ಣಿಸಿದರು. ಬ್ರಿಟಿಷರ ವಿರುದ್ಧ ಭಾರತೀಯರೆಲ್ಲ ಅಂತಸ್ತು, ಅಹಮಿಕೆಯನ್ನೆಲ್ಲ ಬದಿಗಿರಿಸಿ ಒಗ್ಗೂಡಿ ಹೋರಾಡಿದ ಪರಿಣಾಮ ನಾವಿಂದು ನೆಮ್ಮದಿಯ ಜೀವನ ನಡೆಸುವಂತಾಗಿದೆ. ಆದರೆ ಸ್ವಾತಂತ್ರ್ಯ ಪಡೆದ ಭಾರತ ಕಳೆದ 70 ವರ್ಷಗಳಲ್ಲಿ ವಿಭಿನ್ನ ಸವಾಲುಗಳನ್ನು ಎದುರಿಸುತ್ತಿದೆ. ಆಧುನಿಕತೆಯ ಈ ತಾಂತ್ರಿಕ ಯುಗದಲ್ಲಿ 125 ಕೋಟಿ ಭಾರತೀಯ ಪ್ರಜೆಗಳ ಆಶೋತ್ತರ ಈಡೇರಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಪ್ರಾಮಾಣಿಕ ಪ್ರಯತ್ನ ನಡೆಸಿದೆ ಎಂದು ವಿವರಿಸಿದರು. ಮಹಾತ್ಮ ಗಾಂಧಿಧೀಜಿ ಕಂಡಿದ್ದ ಕನನು ನನಸು ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಹಲವು ರೀತಿಯಲ್ಲಿ ದಿಟ್ಟ ಹೆಜ್ಜೆ ಇರಿಸಿದ್ದು, 125 ಕೋಟಿ ಭಾರತೀಯರೆಲ್ಲ ಒಗ್ಗೂಡಿ ಶ್ರಮಿಸಿದರೆ ಅವರು ಕಂಡ ಕನಸು ಖಂಡಿತ ನನಸಾಗುತ್ತದೆ. ದಲಿತ ಕೇರಿಗಳ ಸ್ವತ್ಛತೆ ಮೂಲಕ ಒಂದೆಡೆ ಅಸ್ಪೃಶ್ಯತೆ ನಿವಾರಣೆ, ಮತ್ತೂಂದೆಡೆ ಸ್ವತ್ಛತೆ ಜಾಗೃತಿ ನಡೆಯಬೇಕಿದೆ. ಇದಕ್ಕಾಗಿ ಮೋದಿಜಿ ಅವರು ಹಮ್ಮಿಕೊಂಡಿರುವ ಸ್ವತ್ಛ ಭಾರತ ಎಲ್ಲರಿಗೂ ಪ್ರೇರಣೆ ಆಗಲಿ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ವಿಠ್ಠಲ ಕಟಕದೋಂಡ ಪ್ರಾಸ್ತಾವಿಕ ಮಾತನಾಡಿದರು. ಮಾಜಿ ಸಚಿವರಾದ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಎಸ್.ಕೆ. ಬೆಳ್ಳುಬ್ಬಿ, ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಪಕ್ಷದ ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ, ಆರ್.ಎಸ್. ಪಾಟೀಲ ಕೂಚಬಾಳ, ವಿವೇಕ್ ಡಬ್ಬಿ, ರವಿಕಾಂತ ಬಗಲಿ, ಸಂಗರಾಜ ದೇಸಾಯಿ ವೇದಿಕೆಯಲ್ಲಿದ್ದರು.