Advertisement
ಐಶಾರಾಮಿ ಉಡುಗೆಗಳನ್ನು ತೊಡುತ್ತಿದ್ದ ಗಾಂಧೀಜಿಯವರಿಗೆ ಕನಿಷ್ಠ ಉಡುಗೆಯನ್ನು ಸ್ವೀಕರಿಸುವ ಮನಃಸ್ಥಿತಿ ಹೇಗೆ ಉಂಟಾಯಿತು ಎನ್ನುವುದು ಜಗತ್ತಿನಲ್ಲಿ ಬಡತನ ಇರುವಷ್ಟು ಕಾಲ ಚಿಂತನೀಯ ವಿಷಯ. ಜನಸಾಮಾನ್ಯರು ಬಡತನದಿಂದ ಲಂಗೋಟಿ ಧರಿಸು ವಾಗ ತಾವು ಧರಿಸುತ್ತಿದ್ದ ಖಾದಿ ಬಟ್ಟೆ ಕೂಡ ದುಬಾರಿಯದು ಎಂದು ತಿಳಿದು ಗಾಂಧೀಜಿ ಕನಿಷ್ಠ ಉಡುಗೆಯ ನಿರ್ಧಾರಕ್ಕೆ ಬಂದಿದ್ದರು. ನಾವೆಲ್ಲ ಒಂದರ್ಥದಲ್ಲಿ ಒಂದಲ್ಲ ಒಂದು ಮಹಾನುಭಾವರ ಉತ್ತರಾ ಧಿಕಾರಿಗಳು. ಕನಿಷ್ಠ ಬಟ್ಟೆ (ಸರಳ ಉಡುಗೆ), ಕನಿಷ್ಠ ಆಭರಣಗಳನ್ನು ಉಪದೇಶಿಸಿದ್ದ ಗಾಂಧೀಜಿಯವರ ಉತ್ತರಾಧಿಕಾರಿಗಳಾದ ನಮ್ಮ ನಮ್ಮ ಮನೆಗಳ ಕಪಾಟುಗಳನ್ನು (ಮನಸ್ಸು) ಶೋಧಿಸಬೇಕಾಗಿದೆ. ನಿಸರ್ಗದಿಂದ ಕಡಿಮೆ ಪ್ರಯೋಜನ ಪಡೆದಾಗ ಮಾತ್ರ ಸಮಾನತೆ ಸಾಧ್ಯ ಎನ್ನುವುದನ್ನು ಗಾಂಧಿ ಜಯಂತಿಯಂದು (ಅ. 2) ಮನಗಾಣಬಹುದು.
Advertisement
ಇದನ್ನೂ ಓದಿ:ಕೊಲೊಂಬೊ ಬಂದರಿನಲ್ಲಿ ಅದಾನಿ ಗ್ರೂಪ್‌ನ 5 ಸಾವಿರ ಕೋಟಿ ರೂ. ಹೂಡಿಕೆ
“ನಾಗರಿಕನಾಗಬೇಕೆಂಬ ಹುಚ್ಚು ನನಗೆ ಸುಮಾರು ಮೂರು ತಿಂಗಳು ಇತ್ತು. ಆದರೆ ಠೀವಿಯ ಬಟ್ಟೆಗಳ ಹುಚ್ಚು ಅನೇಕ ವರ್ಷ ಇತ್ತು’ ಎನ್ನುವುದನ್ನು ಆತ್ಮಕಥನದಲ್ಲಿ ಉಲ್ಲೇಖೀಸಿದ್ದಾರೆ.
1891ರಿಂದ ಭಾರತದಲ್ಲಿ, 1893ರಲ್ಲಿ ದಕ್ಷಿಣ ಆಫ್ರಿಕಾ ದಲ್ಲಿ ವಕಾಲತ್ತು ನಡೆಸಿದರು. ನಟಾಲ್ ಇಂಡಿಯನ್ ಕಾಂಗ್ರೆಸ್ ಮೂಲಕ ಭಾರತೀಯರ ಸಂಘಟನೆಗಳನ್ನು ಯಶಸ್ವಿಯಾಗಿ ನಡೆಸಿ ಭಾರತಕ್ಕೆ ಬಂದರು.
ಭಾರತಕ್ಕೆ ಬಂದದ್ದು, ವ್ಯಾಪಕ ಪ್ರವಾಸ ನಡೆಸಿದ್ದು ಗೋಪಾಲಕೃಷ್ಣ ಗೋಖಲೆಯವರ ಸಲಹೆ ಮೇರೆಗೆ. 1915ರಲ್ಲಿ ದಕ್ಷಿಣ ಆಫ್ರಿಕಾ ದಿಂದ ಭಾರತಕ್ಕೆ ಬಂದಾಗ ಗಾಂಧೀಜಿ ಮತ್ತು ಪತ್ನಿ ಕಸ್ತೂರ್ಬಾ ಗುಜರಾತಿನ ಉಡುಗೆ ಧರಿಸಿದ್ದರು. ಲಂಡನ್‌ನಲ್ಲಿ ಭಾರೀ ಬ್ಯಾರಿಸ್ಟರ್ ಪದವಿ ಗಳಿಸಿ ದಕ್ಷಿಣ ಆಫ್ರಿಕಾದಲ್ಲಿ ಯಶಸ್ವೀ ವಕೀಲರಾದ “ಹೀರೋ’ ಗಾಂಧೀಜಿ ಸರಳ ಕಾಥೇವಾಡಿ ಶೈಲಿಯ ಮುಂಡಾಸು, ಜುಬ್ಬ, ಧೋತಿ ಧರಿಸಿದ್ದನ್ನು ಕಂಡು ಜನರು ಅಚ್ಚರಿಪಟ್ಟಿದ್ದರು.
ಅಸಹಕಾರ ಚಳವಳಿ ಆರಂಭಿಸುವಾಗ (1920) ಕಾತೆವಾಡಿ ಜುಬ್ಬ, ಮುಂಡಾಸನ್ನು ಬಿಟ್ಟು ತಾವೇ ವಿನ್ಯಾಸಗೊಳಿಸಿದ ಬಿಳಿಯ ಟೋಪಿ (ಗಾಂಧಿ ಟೋಪಿ) ಧರಿಸಿದರು. 1920ರ ಆ. 19ರಂದು ಮಂಗಳೂರಿಗೆ ಬಂದಾಗ ಟೋಪಿ, ಸಾಮಾನ್ಯ ಕೈಮಗ್ಗದ ಜುಬ್ಬ, ಧೋತಿ ಧರಿಸಿದ್ದರು ಎಂದು ಉಡುಪಿ ಎಂಜಿಎಂ ಕಾಲೇಜಿನ ಗಾಂಧೀ ಅಧ್ಯಯನ ಕೇಂದ್ರದ ದಾಖಲೆಗಳು ಸಾರುತ್ತಿವೆ.
ತಮಿಳುನಾಡಿನ ಮಧುರೆಯಲ್ಲಿ 1921ರ ಸೆ. 22ರಂದು ಮಹತ್ವದ ನಿರ್ಣಯ ಕೈಗೊಂಡರು. ಆಗ ಗಾಂಧೀಜಿ ಸಾಮಾನ್ಯ ಜನರಿಗೆ ಖಾದಿ ಧರಿಸಲು ಉಪದೇಶಿಸುತ್ತಿದ್ದರು. ಜನರು ಖಾದಿ ಕೊಳ್ಳಲು ಆಗದಷ್ಟು ಬಡವರೆನ್ನುವುದು ತಿಳಿಯಿತು. ಬಡತನದಿಂದ ಕಡ್ಡಾಯ ಲಂಗೋಟಿ ಮಾತ್ರ ತೊಡಬೇಕಾಗಿರುವ ಜನಸಮೂಹದ ಎದುರು ತಾವೂ ಅದಕ್ಕೆ ಸಮನಾದ ದಿರಿಸು ಧರಿಸಲು ನಿರ್ಧರಿಸಿದರು. ಅಂದು ಬೆಳಗ್ಗೆದ್ದು ಹೊರಗೆ ಹೊರಟಾಗ ಅದುವರೆಗೆ ಧರಿಸುತ್ತಿದ್ದ ಟೋಪಿ, ಅಂಗಿ, ಧೋತಿ ಬಿಟ್ಟು ಒಂದು ಖಾದೀ ಬಟ್ಟೆಯ ತುಂಡನ್ನು ಕಚ್ಚೆಯಂತೆ ಧರಿಸಿದರು. ಅಂಗಿ ಕಿಸೆಯಲ್ಲಿ ಇಟ್ಟುಕೊಳ್ಳುವ ವಸ್ತುಗಳಿಗಾಗಿ ಖಾದಿ ಬಟ್ಟೆಯ ಸಣ್ಣ ಜೋಳಿಗೆಯನ್ನು ಸೊಂಟಕ್ಕೆ ಸಿಕ್ಕಿಸಿಕೊಂಡರು. ತುಂಡು ಬಟ್ಟೆಯನ್ನು ಹೆಗಲ ಮೇಲೆ ಹಾಕಿಕೊಂಡರು. ಈ ವಸ್ತ್ರ ಸಂಹಿತೆಯನ್ನು ಕೊನೆಯವರೆಗೂ ಪಾಲಿಸಿದರು.
ಸಮಾಜದಲ್ಲಿ ಎದ್ದ ಸಂದೇಹಗಳಿಗೆ ಉತ್ತರವಾಗಿ ಅನುಯಾಯಿಗಳಿಗೆ “ನನ್ನನ್ನು ಅನುಸರಿಸಿ ವಸ್ತ್ರಗಳನ್ನು ತ್ಯಾಗ ಮಾಡಬಾರದು. ಬದಲಾಗಿ ವಿದೇಶಿ ವಸ್ತ್ರಗಳ ಬಹಿಷ್ಕಾರದ ಮಹತ್ವ ಮತ್ತು ಸ್ವದೇಶೀ ಅರ್ಥವನ್ನು ಮಾಡಿಕೊಳ್ಳಿ’ ಎಂದು ಕರೆ ನೀಡಿದ್ದರು. ಚಳವಳಿಯಲ್ಲಿ ವಿದೇಶೀ ವಸ್ತ್ರಗಳ ಬಹಿಷ್ಕಾರ ಮತ್ತು ಖಾದಿ (ಸ್ವದೇಶಿ) ವಸ್ತ್ರದ ಬಳಕೆ ಪ್ರಧಾನ ವಿಷಯ. ಖಾದಿಯನ್ನು ಕೇವಲ ಸ್ವದೇಶೀ ಮಂತ್ರವಾಗಿ ಕಾಣದೆ ಸ್ವಾವಲಂಬನೆ, ಸರಳತೆ ಮತ್ತು ಆತ್ಮಗೌರವದ (ಸ್ವಾಭಿಮಾನ) ಸಂಕೇತವಾಗಿ ಕಂಡಿದ್ದರು.
ದೇಶ ಸುತ್ತಿ…ಚಳವಳಿಗೆ ಮುನ್ನ ಗಾಂಧೀಜಿ ಒಂದು ವರ್ಷ ರೈಲಿನ ಮೂರನೆಯ ದರ್ಜೆ ಬೋಗಿಯಲ್ಲಿ ಪ್ರಯಾಣಿಸಿ ದೇಶ ಸುತ್ತಿ ಅನುಭವ ಪಡೆದರು. ಇದು ದಿರಿಸು ಬದಲಾವಣೆಗೆ ಕಾರಣವಾಯಿತು. ದೇಶ ಸುತ್ತಿದವರಿಗೆಲ್ಲ ಇಂತಹ ಮಾನಸಿಕ ಬದಲಾವಣೆಯಾದರೆ ಎಂತಹ ಸಮಾಜ ನಿರ್ಮಾಣಗೊಳ್ಳಬಹುದು?