Advertisement

ರಾಜ್ಯದ 176 ಗ್ರಾಪಂಗಳಿಗೆ ಗಾಂಧಿ ಗ್ರಾಮಪುರಸ್ಕಾರ ಪ್ರದಾನ

12:36 PM Oct 16, 2017 | Team Udayavani |

ಪಡುಪಣಂಬೂರು:  ಪಂಚಾಯತ್‌ನ ಆಡಳಿತ ಮತ್ತು ಆರ್ಥಿಕ ಮಾನದಂಡಗಳ ಮೌಲ್ಯಮಾಪನದಲ್ಲಿ ಶೇ. 90ಕ್ಕೂ ಹೆಚ್ಚು ಸಾಧನೆ ಅಂಕ ಗಳಿಸಿದ ಪಡು ಪಣಂಬೂರು ಗ್ರಾಪಂ ಗಾಂಧಿ ಗ್ರಾಮ ಪುರಸ್ಕಾರ ಪಡೆದಿದೆ.

Advertisement

ಎನ್‌ಐಸಿ ಮೂಲಕ ಸಿದ್ಧಪಡಿಸಲಾದ ಪಂಚತಂತ್ರ ದಾಖಲಾತಿ ಮೂಲಕ ವಿವಿಧ ಮಾನದಂಡಗಳನ್ನು ನಿಗದಿಪಡಿಸಿ, ಅದರಲ್ಲೇ ಉತ್ತರಿಸಲು ಸೂಚಿಸಲಾಗಿತ್ತು. ಜಿಪಂ ಸಿಇಒ ಅಧ್ಯಕ್ಷತೆಯಲ್ಲಿ ಪರಿಶೀಲನೆ ಮತ್ತು ಆಯ್ಕೆ ಸಮಿತಿ ರಚಿಸಲಾಗಿತ್ತು. ಜಿಪಂ ಉಪ ಕಾರ್ಯದರ್ಶಿ, ತಾಪಂ ಇಒ ಮತ್ತು ಮುಖ್ಯ ಯೋಜನಾಧಿಕಾರಿ ಇದ್ದ ತಂಡ ಪಂಚಾಯತ್‌ಗೆ ಭೇಟಿ ನೀಡಿ, ಮಾಹಿತಿಯನ್ನು ಪರಿಶೀಲಿಸಿತ್ತು.

ಒಟ್ಟು 34 ಪ್ರಶ್ನೆಗಳು ವೈಯಕ್ತಿಕ ಶೌಚಾಲಯ, ನರೇಗಾ ಯೋಜನೆ, ಮೂಲಸೌಕರ್ಯ, ವಸತಿ, ನೈರ್ಮಲೀಕರಣ, ಸಂಪನ್ಮೂಲ, ಜಮಾಬಂದಿ, ಸಾಮಾನ್ಯ ಹಾಗೂ ವಿಶೇಷ ಸಭೆಗಳಲ್ಲಿ ಸದಸ್ಯರ ಪಾಲ್ಗೊಳ್ಳುವಿಕೆ – ಹೀಗೆ 150 ಅಂಕಗಳನ್ನು ಒಳಗೊಂಡಿತ್ತು. ಇದರಲ್ಲಿ ಪಡುಪಣಂಬೂರು ಗ್ರಾಪಂ 139 ಅಂಕಗಳನ್ನು ಗಳಿಸಿದೆ. ರಾಜ್ಯಮಟ್ಟದ ಪರಾಮರ್ಶನ ಸಮಿತಿ ಪುರಸ್ಕಾರಕ್ಕೆ ಗ್ರಾಪಂನ್ನು ಆಯ್ಕೆ ಮಾಡಿತ್ತು.

ಗ್ರಾಮದಲ್ಲಿ ಉದ್ಯೋಗ ಖಾತರಿ ಯೋಜನೆಯಡಿ 410 ಜನರು ಉದ್ಯೋಗ ಕಾರ್ಡ್‌ ಪಡೆದಿದ್ದಾರೆ. 2016-17ನೇ ಸಾಲಿನಲ್ಲಿ 20 ಲಕ್ಷಕ್ಕಿಂತ ಹೆಚ್ಚು ಅನುದಾನ ವಿನಿಯೋಗವಾಗಿದೆ. ಮನೆ, ಬಾವಿ, ದನದ ಕೊಟ್ಟಿಗೆ, ರಸ್ತೆ, ಕಾಲುಸಂಕ, ಕೊಳವೆಬಾವಿ ಮರುಪೂರಣ, ಕೆರೆ-ತೋಡಿನ ಹೂಳೆತ್ತುವಿಕೆ, ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿಗಳಾಗಿವೆ.

14ನೇ ಹಣಕಾಸು ಯೋಜನೆಯಿಂದ 15 ಲಕ್ಷ ಅನುದಾನ, ಮನೆ, ಅಂಗಡಿ, ಪರವಾನಿಗೆ, ತೆರಿಗೆ, ತ್ಯಾಜ್ಯ ಶುಲ್ಕ, ಎನ್‌ಆರ್‌ಇಜಿಯಿಂದ 25 ಲಕ್ಷ ರೂ. ಸಂಗ್ರಹವಾಗಿದೆ. ಇದರಲ್ಲಿ ಪರಿಶಿಷ್ಟ ಜಾತಿ-ಪಂಗಡಕ್ಕೆ ಶೇ. 25, ಅಂಗವಿಕಲರಿಗೆ ಶೇ. 3, ಕ್ರೀಡೆಗೆ ಶೇ. 2 ಅನುದಾನ ವಿನಿಯೋಗಿಸಲಾಗಿದೆ. ತೆರಿಗೆ ಸಂಗ್ರಹ ಶೇ. 82ರಷ್ಟಾಗಿದೆ.

Advertisement

ಕುಡಿಯುವ ನೀರಿನ ಬಿಲ್‌ ಸಂಗ್ರಹದಲ್ಲಿ ಶೇ. 100 ಸಾಧನೆಯಾಗಿದೆ. ಸಚಿವ ಆಂಜನೇಯ ಅವರು ಗ್ರಾಮವಾಸ್ತವ್ಯ ಮಾಡಿದ್ದ ಈ ಗ್ರಾಪಂನಲ್ಲಿ, ತ್ಯಾಜ್ಯ ವಿಲೇವಾರಿಗೆ ನಿರಂತರ ಸಭೆ, ಸಿಬ್ಬಂದಿ ಸಮವಸ್ತ್ರ ವಿಶೇಷವೆನಿಸಿದೆ. 

ಇನ್ನೂ ಏನಾಗಬೇಕಿದೆ?
ಶಾಶ್ವತ ಕುಡಿಯುವ ನೀರಿಗೆ ಯೋಜನೆ ರೂಪಿಸಬೇಕಾಗಿದೆ. ಗ್ರಾಮದ ಕೆರೆಗಳನ್ನು ಪುನರುಜ್ಜೀವನಗೊಳಿಸಿ ಪರಿಣಾಮಕಾರಿ ಬಳಕೆ ಆಗಬೇಕಿದೆ. ಗ್ರಾಪಂ ಆವರಣದಲ್ಲಿ ಜಮೀನಿದ್ದು, ಸುಸಜ್ಜಿತ ಕಟ್ಟಡದ ಅಗತ್ಯವಿದೆ. ಮಾರುಕಟ್ಟೆ ಪ್ರದೇಶಗಳನ್ನು ಗುರುತಿಸಿ, ಅಭಿವೃದ್ಧಿ ಪಡಿಸಬೇಕಾಗಿದೆ.ವಾಣಿಜ್ಯ ಕಟ್ಟಡಗಳಿಗೆ ಅವಕಾಶ ನೀಡಿ ಆರ್ಥಿಕ ಸಂಪನ್ಮೂಲ ಹೆಚ್ಚಿಸಿಕೊಳ್ಳಬೇಕಾಗಿದೆ.

ಆದರ್ಶ ಪಂಚಾಯತ್‌
ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾದ ರಾಜ್ಯದ 176 ಗ್ರಾಪಂಗಳಲ್ಲಿ ಪಡುಪಣಂಬೂರು ಕೂಡ ಒಂದು. ಇದು ತಾಲೂಕಿನ ಹೆಮ್ಮೆ. ಆಡಳಿತದ ಸದಸ್ಯರ ಒಮ್ಮತ ಹಾಗೂ ಅ ಧಿಕಾರಿ, ಸಿಬಂದಿಯ ಕಾರ್ಯಕ್ಷಮತೆಯ ಜತೆಗೆ ಸಾಂಘಿ ಕ ಪ್ರಯತ್ನದ ಫ‌ಲವಾಗಿ ಆದರ್ಶ ಪಂಚಾಯತ್‌ನ ಗರಿ ಲಭಿಸಿದೆ. ರಚನಾತ್ಮಕ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಹೆಚ್ಚು ಮಹತ್ವ ನೀಡಿರುವುದರಿಂದ ನಿರೀಕ್ಷೆ ಹೆಚ್ಚಿದೆ.
ಎಂ. ದುಗ್ಗಣ್ಣ ಸಾವಂತರು
ಮೂಲ್ಕಿ ಸೀಮೆ ಅರಸರು, ಪಡುಪಣಂಬೂರು

ಗ್ರಾಮಸ್ಥರ ಸಹಕಾರಕ್ಕೆ ಮನ್ನಣೆ
ಪಡುಪಣಂಬೂರು ಗ್ರಾಪಂಗೆ ಗಾಂಧಿ  ಗ್ರಾಮ ಪುರಸ್ಕಾರ ಸಿಕ್ಕಿದ್ದು, ಗ್ರಾಮಸ್ಥರಿಗೆ ಸಿಕ್ಕ ಮನ್ನಣೆ. ಗ್ರಾಮದ ಯುವ ಸಮುದಾಯ, ವಿಶೇಷವಾಗಿ ಶಾಲಾ ಮಕ್ಕಳ ಜಾಗೃತಿ ಕಾರ್ಯಕ್ರಮ, ಸಭೆ-ಕಾರ್ಯಕ್ರಮಗಳಲ್ಲಿ ಸಹಕಾರ, ಸದಸ್ಯರು ಹಾಗೂ ಸಿಬಂದಿ ಶ್ರಮ, ತಾಪಂ ಹಾಗೂ ಜಿಪಂ ಸದಸ್ಯರ ಪ್ರೋತ್ಸಾಹದಿಂದ ಇದೆಲ್ಲ ಸಾಧ್ಯವಾಗಿದೆ. ಇನ್ನಷ್ಟು ಅಭಿವೃದ್ಧಿ ಕಾರ್ಯಗಳಿಗೆ ಉತ್ಸುಕವಾಗಿದ್ದೇವೆ.
-ಮೋಹನ್‌ದಾಸ್‌, ಪಡುಪಣಂಬೂರು ಗ್ರಾ. ಪಂ ಅಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next