ವರದಿ:ಡಿ.ಜಿ. ಮೋಮಿನ್
ಗಜೇಂದ್ರಗಡ: ಸರಕಾರದ ಯೋಜನೆ ಗಳನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಮುಶಿಗೇರಿ ಗ್ರಾಮ ಪಂಚಾಯಿತಿಗೆ 2020-21ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ದೊರೆತಿದೆ.
ತಾಲೂಕಿನ ಮುಶಿಗೇರಿ ಗ್ರಾಪಂ ಒಟ್ಟು 14 ಸದಸ್ಯರನ್ನು ಹೊಂದಿದ್ದು, ಮುಶಿಗೇರಿ, ನೆಲ್ಲೂರ, ಪ್ಯಾಟಿ, ಚಿಕ್ಕಳಗುಂಡಿ ಗ್ರಾಮಗಳಲ್ಲಿನ ಜನರಿಗೆ ನರೇಗಾ ಯೋಜನೆ ಸಮರ್ಪಕವಾಗಿ ಅನುಷ್ಠಾನ ಮಾಡುವಲ್ಲಿ ಯಶಸ್ಸು ಕಂಡಿದೆ. ಜತೆಗೆ ಗ್ರಾಪಂ ವ್ಯಾಪ್ತಿಯಲ್ಲಿ ಸ್ವತ್ಛತೆಗೆ ಹೆಚ್ಚು ಆದ್ಯತೆ ನೀಡಿದೆ. ನಿತ್ಯವೂ ಕಸ ಸಂಗ್ರಹಣೆ, ವಿಲೇವಾರಿ ಕಾರ್ಯ ನಡೆಸುವಲ್ಲಿ ಬದ್ಧತೆ ಮೆರೆಯುತ್ತಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ಸಮರ್ಪಕ ನೀರು ಸರಬರಾಜು, ಗ್ರಾಮ ಸಭೆ, ಮಕ್ಕಳ ಸಭೆ, ವಿಶೇಷಚೇತನರ ಸಭೆ ಆಯೋಜಿಸಿ ಸಮಸ್ಯೆಗಳನ್ನು ನೀಗಿಸುವ ಮೂಲಕ ಸಾರ್ವಜನಿಕರು ಕಚೇರಿಗೆ ಅಲೆದಾಡು ವುದನ್ನು ತಪ್ಪಿಸಿದೆ. ವಿದ್ಯುದ್ದೀಪ, ಚರಂಡಿ, ಗ್ರಂಥಾಲಯ, ಅಂಗನವಾಡಿ ಕಟ್ಟಡ, ಸಮುದಾಯ ಭವನ, ಶೌಚಾಲಯ, ತೆರಿಗೆ ವಸೂಲಿ, ವಸತಿ ಯೋಜನೆಯಲ್ಲಿ ಶೇ.100 ರಷ್ಟು ಸಾಧನೆ ಮಾಡಿದೆ.
ಸ್ವತ್ಛ ಭಾರತ ಯೋಜನೆಯಡಿ ಬಯಲು ಶೌಚ ಮುಕ್ತ ಗ್ರಾಮ ಪಟ್ಟಿಗೆ ಸೇರಿದೆ. 2011ರ ಜನಗಣತಿ ಪ್ರಕಾರ 5126 ಜನಸಂಖ್ಯೆ ಹೊಂದಿದೆ. ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ಆಸ್ಪತ್ರೆ, ಗ್ರಾಪಂ ಉತ್ತಮ ಕಟ್ಟಡ ಹೊಂದಿದೆ. ಗ್ರಾಪಂ ವ್ಯಾಪ್ತಿಯಲ್ಲಿ ಒಟ್ಟು 560 ವೈಯಕ್ತಿಕ ಶೌಚಗೃಹಗಳ ನಿರ್ಮಾಣ ಮಾಡಲಾಗಿದೆ. ನರೇಗಾ ಅಡಿ 67 ಫಲಾನುಭವಿಗಳ ಕಾಮಗಾರಿಗಳನ್ನು ನಡೆಸಲಾಗಿದೆ. 14ನೇ ಹಣಕಾಸು ಹಾಗೂ ವಿವಿಧ ಯೋಜನೆಗಳ ಸದ್ಬಳಕೆ ಮಾಡಿಕೊಂಡು ಕಾಂಕ್ರೀಟ್ ರಸ್ತೆ, ಚರಂಡಿ ಮುಂತಾದ ಅಭಿವೃದ್ಧಿ ಕಾರ್ಯ ಮಾಡಲಾಗಿದೆ. ಶೇ.100ರಷ್ಟು ಅನುದಾನದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿ ಕಾರ್ಯಕ್ರಮ ಹಾಗೂ ಶೇ.80ರಷ್ಟು ವಿಶೇಷಚೇತನರಿಗೆ ಕಾರ್ಯ ಕ್ರಮ ಅನುಷ್ಠಾನಗೊಳಿಸಲಾಗಿದೆ. ಕೃಷಿ ಹೊಂಡ, ಬದು ನಿರ್ಮಾಣ, ದನದ ದೊಡ್ಡಿ, ಬಳಗಟ್ಟಿ, ವೈಯಕ್ತಿಕ ಬದು ನಿರ್ಮಾಣ ಕಾಮಗಾರಿ ನಡೆಸಲಾಗಿದೆ.
ನರೇಗಾದಲ್ಲಿ ಉತ್ತಮ ಸಾಧನೆ: ಗ್ರಾಮೀಣ ಭಾಗದ ಜನರು ಗುಳೆ ಹೋಗುವುದನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸಿದೆ. ಆದರೆ ಮುಶಿಗೇರಿ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯನ್ನು ಅತ್ಯಂತ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಮೂಲಕ 14088 ಮಾನವ ದಿನಗಳನ್ನು ಸೃಜನ ಮಾಡಲಾಗಿದೆ.
ಹಿರಿಯ ಅಧಿಕಾರಿಗಳಿಂದ ಪ್ರಶಂಸೆ: ಮುಶಿಗೇರಿ ಗ್ರಾಪಂ ವ್ಯಾಪ್ತಿಯ ನೆಲ್ಲೂರ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ನಿರ್ಮಿಸಿರುವ ಮಾನವ ಕೃಷಿ ಹೊಂಡ ವೀಕ್ಷಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆ ಆಯುಕ್ತರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಷ್ಟರ ಮಟ್ಟಿಗೆ ಗ್ರಾಪಂ ಆಡಳಿತ ಸರ್ಕಾರದ ಯೋಜನೆಗಳನ್ನು ಗ್ರಾಮೀಣ ಜನರ ಕೈಗೆ ತಲುಪಿಸುವಲ್ಲಿ ಶ್ರಮಿಸುತ್ತಿದೆ.
ಕ್ರಿಯಾಶೀಲ ಪಿಡಿಒ: ಮುಶಿಗೇರಿ ಗ್ರಾಪಂ ಆಧಾರ ಸ್ತಂಭವಾಗಿರುವ ಗ್ರಾಪಂ ಪಿಡಿಒ ಎಸ್.ಎಸ್. ವ್ಯಾಪಾರಿ ಗ್ರಾಪಂ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಗಳಿಗೆ ಕಂಕಣ ಬದ್ಧರಾಗಿ ಕೆಲಸ ಮಾಡುತ್ತಿದ್ದಾರೆ. ಆಡಳಿತ ಮಂಡಳಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಸರ್ಕಾರದ ಹೊಸ, ಹೊಸ ಯೋಜನೆಗಳು, ಅನುದಾನಗಳನ್ನು ತರುವಲ್ಲಿ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿರುವ ಪ್ರತಿಫಲವೇ ಗಾಂ ಧಿ ಗ್ರಾಮ ಪುರಸ್ಕಾರಕ್ಕೆ ಕಾರಣವಾಗಿದೆ.
ಜನಸ್ನೇಹಿ ಆಡಳಿತ: ಗ್ರಾಮೀಣರ ಅಭ್ಯುದಯಕ್ಕೆ ಮುಶಿಗೇರಿ ಗ್ರಾಪಂ ಅಧ್ಯ ಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಿಡಿಒ, ಎಲ್ಲ ಅಧಿಕಾರಿಗಳು ಶ್ರಮಿಸಿದ್ದಾರೆ.