ಹಗರಿಬೊಮ್ಮನಹಳ್ಳಿ: ಸರಕಾರ ಗ್ರಾಪಂಗಳ ಅಭಿವೃದ್ಧಿ, ದಾಖಲೆಗಳ ನಿರ್ವಹಣೆ ಗುರುತಿಸಿ ಅ.2 ಗಾಂಧಿ ಜಯಂತಿ ದಿನದಂದು ನೀಡುವ ಗಾಂಧಿ ಗ್ರಾಮ ಪುರಸ್ಕಾರಕ್ಕೆ ತಾಲೂಕಿನ ನೆಲ್ಕುದ್ರಿ ಗ್ರಾಪಂ ಆಯ್ಕೆಯಾಗಿರುವುದು ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸಂತಸ ಮನೆ ಮಾಡಿದೆ. ನೂತನ ನೆಲ್ಕುದ್ರಿ ಗ್ರಾಪಂನಲ್ಲಿ ಸ್ವತ್ಛತೆ, ನೈರ್ಮಲ್ಯ, ಕಂದಾಯ ವಸೂಲಿಯಲ್ಲಿ ವಿಶೇಷ ಸಾಧನೆ ಮಾಡಿರುವುದರಿಂದ ಪುರಸ್ಕಾರಕ್ಕೆ ಆಯ್ಕೆಯಾಗಿದೆ.
ಪಂಚಾಯತ್‌ರಾಜ್ ಇಲಾಖೆಯ ಎಲ್ಲಾ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಣೆ, ಯೋಜನೆಗೆ ಅನುಷ್ಠಾನ, ಸಾರ್ವಜನಿಕರಿಗೆ ಅನುಕೂಲಕಾರಿಯಾಗುವಂತಹ ಕಾಮಗಾರಿ, ಜಮಾಬಂ ಧಿ, ಗ್ರಾಮಸಭೆ, ವಾರ್ಡ್‌ಸಭೆ, ಸಾಮಾನ್ಯಸಭೆಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸಿರುವ ಹಿನ್ನಲೆಯಲ್ಲಿ ಗ್ರಾಪಂಗೆ ಈ ಗರಿ ಸಿಕ್ಕಿದೆ. ಪಂಚತಂತ್ರ ಅಳವಡಿಕೆ, ಉದ್ಯೋಗ ಖಾತ್ರಿಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿಕೂಲಿ ಕಾರ್ಮಿಕರಿಗೆ ನಿರಂತರವಾಗಿ ಕೆಲಸ ನೀಡಲಾಗಿದೆ. ಸಕಾಲ ಸೇವೆ, ಗ್ರಾಪಂ ಹಣಕಾಸು ನಿರ್ವಹಣೆಯನ್ನು ಅಚ್ಚುಕಟ್ಟಾಗಿ ಮಾಡಿರುವುದರಿಂದ ಪ್ರಶಸ್ತಿ ಲಭಿಸಿದೆ.
ಗ್ರಾಪಂವ್ಯಾಪ್ತಿಯ ಕನ್ನಿಹಳ್ಳಿ, ಚಿಮ್ನಳ್ಳಿ, ಹಂಚನಾಳು, ಹಳೇ ನೆಲ್ಕುದ್ರಿ, ಮಸಾರಿ ನೆಲ್ಕುದ್ರಿ, ನೆಲ್ಕುದ್ರಿ-1 ಗ್ರಾಮಗಳಲ್ಲಿ ಚೆಕ್ ಡ್ಯಾಂ, ಬದು ನಿರ್ಮಾಣ, ನಮ್ಮ ಹೊಲ ನಮ್ಮ ದಾರಿ, ದನದ ಕೊಟ್ಟಿಗೆ, ಚರಂಡಿ, ಸಿಸಿ ರಸ್ತೆ, ಮೆಟಲಿಂಗ್ ರಸ್ತೆಗಳನ್ನು ನಿರ್ಮಾಣ ಮಾಡಿ ಗ್ರಾಪಂನ್ನು ಮುನ್ನೆಲೆಗೆ ತರಲಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ತೋಟಗಾರಿಕೆ ಇಲಾಖೆಯಲ್ಲಿ ರೈತರಿಗೆ ದಾಳಿಂಬೆ ಬೆಳೆಗೆ ಪ್ರೋತ್ಸಾಹಧನ, ಕೃಷಿಇಲಾಖೆಯಿಂದ ಕೃಷಿಹೊಂಡಗಳನ್ನು ಅಚ್ಚುಕಟ್ಟಾಗಿ ನಿರ್ಮಿಸಲಾಗಿದೆ. ಕೆರೆ ಹೂಳು ಎತ್ತುವ ಕಾಮಗಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಲಾಗಿದ್ದು, ಅಂತರ್ಜಲ ಅಭಿವೃದ್ಧಿಗೆ ಪೂರಕವಾಗುವ ಕಾಮಗಾರಿಗಳನ್ನು ಕೂಲಿ ಕಾರ್ಮಿಕರಿಂದಲೇ ಮಾಡಿಸಿ ಯಶಸ್ವಿಯಾಗಿರುವುದು ಪಂಚಾಯ್ತಿಯ ಹೆಮ್ಮೆಯಾಗಿದೆ.
ನೆಲ್ಕುದ್ರಿ ಗ್ರಾಪಂನಲ್ಲಿ ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಯಶಸ್ವಿಯಾಗಿದ್ದಾರೆ. ಬದು ನಿರ್ಮಾಣ, ಕೃಷಿ ಹೊಂಡ ನಿರ್ಮಾಣ ಸೇರಿ ವಿವಿಧ ವೈಯಕ್ತಿಕ ಕಾಮಗಾರಿಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಪಂಚಾಯ್ತಿ ಪಿಡಿಒ, ಜನಪ್ರತಿನಿ ಧಿಗಳ ಮತ್ತು ಸಿಬ್ಬಂದಿಯ ನಿರಂತರ ಶ್ರಮದಿಂದ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿದೆ.
– ಹಾಲಸಿದ್ದೇಶ್ ಪೂಜೇರಿ, ತಾಪಂ ಇಒ.
ಗಾಂಧಿ ಗ್ರಾಮ ಪುರಸ್ಕಾರ ಇನ್ನಷ್ಟು ಜವಾಬ್ದಾರಿಯನ್ನು ಹೆಚ್ಚಿಸಿದೆ. ಗ್ರಾಪಂ ವ್ಯಾಪ್ತಿಯಲ್ಲಿ ಶೌಚಾಲಯ, ಶುದ್ಧ ಕುಡಿಯುವ ನೀರು, ಉದ್ಯೋಗ ಖಾತ್ರಿ ಯೋಜನೆಯನ್ನುಸಮರ್ಪಕವಾಗಿ ಜಾರಿಗೊಳಿಸಿ, ಮಾನವ ದಿನಗಳನ್ನು ನೀಡಿ ಸೃಜಿಸಲಾಗಿದೆ. ಪಂಚಾಯ್ತಿಯಎಲ್ಲ ದಾಖಲೆಗಳನ್ನು ಸಮರ್ಪಕವಾಗಿನಿರ್ವಹಿಸುರುವುದರಿಂದ ಪ್ರಶಸ್ತಿ ಸಿಕ್ಕಿದೆ.-
ಲಕ್ಷ್ಮಣ, ಪಿಡಿಒ, ನೆಲ್ಕುದ್ರಿ ಗ್ರಾಪಂ.
ನೂತನ ನೆಲ್ಕುದ್ರಿ ಗ್ರಾಪಂನಲ್ಲಿ ಉದ್ಯೋಗ ಖಾತ್ರಿಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದ್ದಾರೆ. ರೈತರಿಗೆ ಅನುಕೂಲಕಾರಿಯಾಗುವಂತಹ ಕಾಮಗಾರಿಗಳಿಗೆ ಕ್ರಿಯಾಯೋಜನೆ ರೂಪಿಸಿ ಜಾರಿಗೊಳಿಸಿದ್ದಾರೆ. –
ಸಿದ್ದಪ್ಪ ಪೂಜಾರ, ಚಿಮ್ನಳ್ಳಿ ಗ್ರಾಮಸ್ಥರು.
-ಸುರೇಶ ಯಳಕಪ್ಪನವರ