Advertisement

ಚಂದ್ರಬಂಡಾ ಗ್ರಾಪಂಗೆ ಗಾಂಧಿ  ಗ್ರಾಮ ಪುರಸ್ಕಾರ

03:38 PM Sep 30, 2018 | |

ರಾಯಚೂರು: ಅಭಿವೃದ್ಧಿ, ಪಾರದರ್ಶಕ ಆಡಳಿತ ಸೇರಿ ಹಲವು ಮಾನದಂಡಗಳನ್ನು ಆಧರಿಸಿ ನೀಡುವ ಗಾಂಧಿ  ಗ್ರಾಮ ಪುರಸ್ಕಾರ ಪ್ರಶಸ್ತಿಗೆ ಆಯ್ಕೆಯಾಗಿರುವ ಜಿಲ್ಲೆಯ 5 ಪಂಚಾಯಿತಿಗಳ ಪೈಕಿ ಚಂದ್ರಬಂಡಾ ಕೂಡ ಒಂದು.

Advertisement

ಈಗಿರುವ ಪಂಚಾಯಿತಿಗಳಲ್ಲಿ ಗುರುತಿಸಿಕೊಳ್ಳುವಂಥ ಪ್ರಗತಿ ಸಾಧಿಸಿರುವುದು ಇಲ್ಲಿನ ಹೆಗ್ಗಳಿಕೆ. ಐದು ಗ್ರಾಮಗಳನ್ನು ಒಳಗೊಂಡ ಈ ಪಂಚಾಯಿತಿಯಲ್ಲಿ 25 ಸದಸ್ಯರಿದ್ದಾರೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಮಾಡಬೇಕಾದ ಕೆಲಸವನ್ನು ಸಾಧ್ಯವಾದ ಮಟ್ಟಿಗೆ ಮಾಡಿದ್ದನ್ನೇ ಸಾಧನೆ ಎಂದು ಪರಿಗಣಿಸಬೇಕಿದೆ. ಹಾಗಂತ ಇದೇನು ಮಾದರಿ ಪಂಚಾಯಿತಿ ಅಲ್ಲ. ಉಳಿದವುಗಳಿಗಿಂತ ಉತ್ತಮ ಎಂದೇ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಜಿಲ್ಲಾ ಕೇಂದ್ರಕ್ಕೆ ಕೇವಲ 12 ಕಿ.ಮೀ. ದೂರದಲ್ಲಿರುವ ಚಂದ್ರಬಂಡಾ ಗಡಿಭಾಗ. ಆಡಳಿತಕ್ಕೂ, ವ್ಯವಹಾರಕ್ಕೂ ರಾಯಚೂರನ್ನೇ ನಂಬಿಕೊಂಡಿರುವ ಇಲ್ಲಿನ ಜನರಿಗೆ ಅಭಿವೃದ್ಧಿಯ ಕಲ್ಪನೆ ಇಲ್ಲದಿರಲಿಕ್ಕಿಲ್ಲ. ಆ ಕಾರಣಕ್ಕೋ, ಅಥವಾ ಜನಪ್ರತಿನಿದಿಗಳ ಇಚ್ಛಾಶಕ್ತಿಗೋ ಸಿಸಿ ರಸ್ತೆ, ಚರಂಡಿ, ಶಾಲಾ ಕೌಂಪೌಂಡ್‌ಗಳು ಸೇರಿ ಕೆಲ ಕಾಮಗಾರಿಗಳು ನಿರೀಕ್ಷಿತ ಮಟ್ಟದಲ್ಲಿ ನಡೆದಿವೆ.  ದ್ರಬಂಡಾ ಹೋಬಳಿ ಕೇಂದ್ರವಾದ್ದರಿಂದ ನಾಡ ಕಚೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ, ರೈತ ಸಂಪರ್ಕ ಕೇಂದ್ರ, ಹಿರಿಯ ಪ್ರಾಥಮಿಕ ಶಾಲೆ ಎಲ್ಲವೂ ಒಂದೇ ಕಂಪೌಂಡ್‌ನೊಳಗೆ ಸಿಗುತ್ತದೆ.

ಕಟ್ಲಟೂರು, ಅರಸಿಗೇರಾ, ಗಣಮೂರು, ಪಲವಲದೊಡ್ಡಿ ಗ್ರಾಮಗಳು ಪಂಚಾಯಿತಿ ವ್ಯಾಪ್ತಿಗೆ ಬರುತ್ತಿದ್ದು, ಉದ್ಯೋಗ ಖಾತ್ರಿ ಯೋಜನೆ ಯಶಸ್ವಿಯಾಗಿದೆ. 1,620 ಜಾಬ್‌ಕಾರ್ಡ್‌ ಗುರಿಯಿದ್ದು, 1200ಕ್ಕೂ ಅಧಿಕ ಜನರಿಗೆ ಕೆಲಸ ನೀಡಲಾಗುತ್ತಿದೆ. 14ನೇ ಹಣಕಾಸಿನ ಯೋಜನೆಯಡಿ 19 ಕೆಲಸಗಳನ್ನು ನಡೆಸಿದ್ದು, ಅವುಗಳನ್ನು ಗಾಂಧಿ  ಸಾಕ್ಷಿ ಕಾಯಕ ಸಾಫ್ಟ್‌ವೇರ್‌ನಲ್ಲಿ ದಾಖಲಿಸಲಾಗಿದೆ. ಈ ಎಲ್ಲ ಅಂಶಗಳನ್ನು ಪ್ರಶಸ್ತಿ ಆಯ್ಕೆಯ ಪ್ರಮುಖಾಂಶಗಳು ಎಂದು
ಹೇಳಬಹುದು.

ಇಕ್ಕಟ್ಟಾದ ಕಟ್ಟಡ: ಗ್ರಾಮ ಪಂಚಾಯತಿಗೆ ಸುಸಜ್ಜಿತ ಕಟ್ಟಡವಿಲ್ಲ. ಸುಮಾರು 25 ಸದಸ್ಯರಿರುವ ಪಂಚಾಯಿತಿಯಲ್ಲಿ ಸಭೆ ನಡೆಸಿದರೆ ಮುಂದಿನ ಆವರಣದಲ್ಲಿ ನಡೆಸಬೇಕು. ಇರುವ ಎರಡು ಕೋಣೆಯೊಳಗೆ ಪಂಚಾಯಿತಿ ನಡೆಸಬೇಕಿದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೇ ಪ್ರತ್ಯೇಕ ಕೊಠಡಿ ಇಲ್ಲ. ಎಚ್‌ಕೆಆರ್‌ಡಿಬಿ ಅನುದಾನದಡಿ ಕಟ್ಟಡ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದರ ಜತೆಗೆ ಪಂಚಾಯಿತಿಯ ಯಾವುದಾದರೂ ಯೋಜನೆಯಡಿ ಕಟ್ಟಡ ನಿರ್ಮಿಸುವ ಚಿಂತನೆ ಇದೆ ಎನ್ನುತ್ತಾರೆ ಪಿಡಿಒ ಹನುಮಂತ.

Advertisement

ಫ್ಲೋರೈಡ್‌ಯುಕ್ತ ನೀರು: ಪಂಚಾಯಿತಿ ಇನ್ನೂ ಶುದ್ಧ ಕುಡಿಯುವ ನೀರು ಪೂರೈಸುವಲ್ಲಿ ಶಕ್ತವಾಗಿಲ್ಲ. ಇಲ್ಲಿ ಫ್ಲೋರೈಡ್‌ ನೀರು ಹೆಚ್ಚಾಗಿದ್ದು, ಜನ ವಿಧಿ  ಇಲ್ಲದೇ ಕುಡಿಯಬೇಕಿದೆ. ಪಂಚಾಯಿತಿ ಕಡೆಯಿಂದ ಚಂದ್ರಬಂಡಾ ಮತ್ತು ಗಣಮೂರಿನಲ್ಲಿ ಒಂದೊಂದು ಶುದ್ಧ ನೀರಿನ ಘಟಕಗಳನ್ನು ಅಳವಡಿಸಿದ್ದು, ಅದು ಸಾಲುತ್ತಿಲ್ಲ. ಪಂಚಾಯಿತಿಯಡಿ 9 ಸಾವಿರ ಜನಸಂಖ್ಯೆಯಿದ್ದರೆ, ಚಂದ್ರಬಂಡಾದಲ್ಲೇ 4 ಸಾವಿರಕ್ಕೂ ಅಧಿಕ ಜನರಿದ್ದಾರೆ. ಎಲ್ಲರಿಗೂ ನೀರಿನ ಸೌಲಭ್ಯ ಕಲ್ಪಿಸಬೇಕಿದೆ. ಆದರೆ, ನಿರೀಕ್ಷಿತ ಮಟ್ಟದಲ್ಲಿ ಕರ ವಸೂಲಿ ಆಗುತ್ತಿಲ್ಲ ಎನ್ನುವ ಕಾರಣಕ್ಕೆ ಅಭಿವೃದ್ಧಿ ವೇಗಕ್ಕೂ ಕಡಿವಾಣ ಬಿದ್ದಿದೆ.

ಇನ್ನು ಸಾಕಷ್ಟು ಕಡೆ ಚರಂಡಿ ವ್ಯವಸ್ಥೆ ಮಾಡಬೇಕಿದೆ. ಶೌಚಗೃಹ ನಿರ್ಮಾಣದಲ್ಲಿ ಶೇ.85ರಷ್ಟು ಗುರಿ ತಲುಪಿರುವುದಾಗಿ ಹೇಳುವ ಅಧಿಕಾರಿಗಳು ಅವುಗಳನ್ನು ಬಳಸುವಂತೆ ಜಾಗೃತಿ ಮೂಡಿಸಬೇಕಿದೆ. ಒಟ್ಟಾರೆ ಇರುವುದರಲ್ಲಿಯೇ ಉತ್ತಮ ಪಂಚಾಯಿತಿ ಎಂಬ ಕಾರಣಕ್ಕೆ ಪ್ರಶಸ್ತಿ ಮುಡಿಗೇರಿದೆ ಎಂದು ಹೇಳಬಹುದು.

ಈ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಚಂದ್ರಬಂಡಾ ಪಂಚಾಯಿತಿ ಆಯ್ಕೆಯಾಗಿರುವುದು ಸಂತಸ ತಂದಿದೆ. ನಾವು ಕೆಲಸ ಮಾಡಿರುವುದರ ಜತೆಗೆ ಸಾಪ್ಟ್ವೇರ್‌ನಲ್ಲಿ ಎಲ್ಲ ವಿವರ ದಾಖಲಿಸಿದ್ದೇವೆ. ಸರ್ಕಾರ ನೀಡಿದ ಪ್ರಶ್ನಾವಳಿಯನ್ನು ಭರ್ತಿ ಮಾಡಿ ಕಳುಹಿಸಲಾಗಿತ್ತು. 
 ಹನುಮಂತ, ಚಂದ್ರಬಂಡಾ ಗ್ರಾಪಂ ಪಿಡಿಒ

Advertisement

Udayavani is now on Telegram. Click here to join our channel and stay updated with the latest news.

Next