ಗಂಗಾವತಿ: ದೇಶದ ಜನರನ್ನು ವಿಭಜಿಸಿ ಹಲವು ದಶಕಗಳ ಕಾಲ ದೇಶವನ್ನಾಳಿದ ಗಾಂಧಿ ಕುಟುಂಬ ನೇಪಥ್ಯಕ್ಕೆ ಸರಿದಿದ್ದು, ಸದ್ಯ ಕಾಂಗ್ರೆಸನ್ನು ಮುನ್ನೆಡೆಸುವ ಸಾಮಾರ್ಥ್ಯ ಗಾಂಧಿ ಮನೆತನಕ್ಕಿಲ್ಲ, ಇನ್ನೂ 25 ವರ್ಷಗಳ ಕಾಲ ದೇಶದ ಜನರನ್ನು ಬಿಜೆಪಿಗೆ ಅಧಿಕಾರ ನೀಡಲಿದ್ದಾರೆಂದು ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹೇಳಿದರು.
ಅವರು ರವಿವಾರ ನಗರದ ಅಮರಜ್ಯೋತಿ ಕಲ್ಯಾಣಮಂಟಪದಲ್ಲಿ ಬಿಜೆಪಿ ಆಯೋಜಿಸಿದ್ದ ಜಿಲ್ಲಾ ಕಾರ್ಯಕಾರಿ ಸಭೆಯ ಸಮಾರೋಪದಲ್ಲಿ ಪಾಲ್ಗೊಂಡು ಮಾತನಾಡಿದರು.
ಹಲವು ದಶಕಗಳ ಕಾಲ ನೆಹರೂ, ಇಂದಿರಾಗಾಂಧಿ , ರಾಜೀವ್ ಗಾಂಧಿ ಪರೋಕ್ಷವಾಗಿ ಸೋನಿಯಾಗಾಂಧಿ ಈ ದೇಶವನ್ನು ಆಳ್ವಿಕೆ ನಡೆಸಿದ್ದಾರೆ. ದೇಶದ ಜನರ ಕಷ್ಟ ಸುಖವನ್ನು ಅವರು ಎಂದಿಗೂ ಕೇಳಿಲ್ಲ. ವಿಶ್ವದ ನಾಯಕ ಪ್ರಧಾನಮಂತ್ರಿ ನರೇಂದ್ರ ಮೋದಿ ಸಂಕಷ್ಟದಲ್ಲಿರುವ ಪ್ರತಿಯೊಬ್ಬ ಭಾರತೀಯನ ಬಗ್ಗೆ ಯೋಚನೆ ಮಾಡುತ್ತಾರೆ ಎಂದು ತಿಳಿಯಲು ಇತ್ತೀಚೆಗೆ ಉಕ್ರೇನ್ ನಲ್ಲಿ ನಿಧನರಾದ ನವೀನ್ ಅವರ ತಂದೆ ಸ್ವತಹ ಪ್ರಧಾನಿ ದೂರವಾಣಿ ಕರೆ ಮಾಡಿ ಸಾಂತ್ವಾನ ಹೇಳುವುದು ದೊಡ್ಡ ವಿಷಯವಾಗಿದೆ. ಈ ಕಾರ್ಯವನ್ನು ಗಾಂಧಿ ಕುಟುಂಬದವರು ಎಂದಿಗೂ ಮಾಡಲಿಲ್ಲ. ಕಾಂಗ್ರೆಸ್ ಮುಳುಗಿದ ಹಡಗಾಗಿದ್ದು ಬಿಜೆಪಿ ಮುಖಮಡರು ಕಾರ್ಯಕರ್ತರು ಕಾಂಗ್ರೆಸ್ ಹೆಸರೇಳಿ ಎಲ್ಲಿಯೂ ಟೀಕೆ ಮಾಡಬಾರದು. ಇದರಿಂದ ಕಾಂಗ್ರೆಸ್ ಗೆ ಸರಿ ಸಮಾನ ಸ್ಥಾನ ಕೊಟ್ಟಂತಾಗುತ್ತದೆ. ಸ್ವಾತಂತ್ರ್ಯಾ ನಂತರ ಹಲವು ದಶಕಗಳ ಕಾಲ ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ(370) ರದ್ದು ಮಾಡುವ ಧೈರ್ಯವನ್ನು ಗಾಂಧಿ ಕುಟುಂಬದವರು ಮಾಡಲಿಲ್ಲ. ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಪರಿಶ್ರಮದ ಫಲವಾಗಿ 370 ರದ್ದು ಯಾವುದೇ ರಕ್ತಪಾತವಿಲ್ಲದೇ ರದ್ದು ಮಾಡಿ ಇಡೀ ದೇಶವೇ ಒಂದು ಎಂದು ಸಾಬೀತು ಮಾಡಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅತ್ಯುತ್ತಮ ಬಜೆಟ್ ನೀಡಿದ್ದಾರೆ. ಇದನ್ನು ಕಾಂಗ್ರೆಸ್ ಪಕ್ಷದ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ಹಲವರು ಟೀಕೆ ಮಾಡುತ್ತಿರುವುದನ್ನು ಗಮನಿಸಿದರೆ ಅವರೆಲ್ಲ ಹತಾಶೆಗೊಂಡಿದ್ದಾರೆ. ಕಾಂಗ್ರೆಸ್ ನವರು ಕೆಸರಿದ್ದಂತೆ ಅದಕ್ಕೆ ಕಲ್ಲು ಹೊಡೆದರೆ ಸಿಡಿಯುತ್ತದೆ. ಆದ್ದರಿಂದ ಅವರ ಬಗ್ಗೆ ಬಿಜೆಪಿಯವರು ಮಾತನಾಡಬಾರದು. ಅಂಜನಾದ್ರಿ ಬೆಟ್ಟದಲ್ಲಿ ವಿಶೇಷ ಮೂಲಸೌಕರ್ಯ ಕಲ್ಪಿಸಲು ಬಜೆಟ್ ನಲ್ಲಿ ನೂರು ಕೋಟಿ ಅನುದಾನ ನೀಡಲಾಗಿದೆ. ಅಯೋಧ್ಯೆಯಂತೆ ಅಂಜನಾದ್ರಿ ಅಭಿವೃದ್ಧಿಗೆ ಬಿಜೆಪಿ ಸಂಘಪರಿವಾರದ ಹಿರಿಯರ ಯೋಜನೆಯಾಗಿದ್ದು ದೇಶ ವಿದೇಶ ಮೆಚ್ಚುವ ಅಭಿವೃದ್ಧಿ ಮಾಡಲಾಗುತ್ತದೆ ಎಂದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಎಂಎಲ್ಸಿ ಅಶ್ವಥ ನಾರಾಯಣ, ಸಂಸದ ಕರಡಿ ಸಂಗಣ್ಣ, ಶಾಸಕರಾದ ಪರಣ್ಣ ಮುನವಳ್ಳಿ, ದಡೇಸೂಗುರು ಬಸವರಾಜ, ಮಾಜಿ ಶಾಸಕರಾದ ಜಿ.ವೀರಪ್ಪ.,ಕೆ.ಶರಣಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್, ಮಾಜಿ ಅಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ, ಬಿಜೆಪಿ ಮುಖಂಡರಾದ ಸಿ.ವಿ.ಚಂದ್ರಶೇಖರ, ಈಶಪ್ಪ, ಹೇಮಲತಾ ನಾಯಕ, ಶಿವಲೀಲಾ ದೇಸಾಯಿ, ಚಂದ್ರಶೇಖರ ಹಲಗೇರಿ, ನವೀನಕುಮಾರ ಗುಳಗಣ್ಣನವರ್ ಸೇರಿ ಅನೇಕರಿದ್ದರು.
ಖರ್ಗೆ ಹೊಗಳಿದ್ದನ್ನು ನೋಡಿದ್ದೇನೆ
ಸಂಸದ ಕರಡಿ ಸಂಗಣ್ಣ ಅವರು ಮಾತನಾಡಿ , ಕಾಂಗ್ರೆಸ್ ಪಕ್ಷದ ಕೆಲವರು ಟೀಕೆ ಮಾಡುವ ಉದ್ದೇಶದಿಂದ ಬಿಜೆಪಿ ಮತ್ತು ಪ್ರಧಾನಿ ಮೋದಿಯವರನ್ನು ಟೀಕೆ ಮಾಡುತ್ತಿದ್ದಾರೆ. ಇತ್ತೀಚೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿಯವರ ಜತೆ ಕಾರ್ಯಕ್ರಮ ವೇದಿಕೆ ಹಂಚಿಕೊಂಡ ಕಾಂಗ್ರೆಸ್ ಹಿರಿಯ ಮುಖಂಡ ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಸಚಿವ ಗಡ್ಕರಿ ಹಾಗೂ ಕೇಂದ್ರ ಸರಕಾರದ ಕಾರ್ಯಯೋಜನೆ ಬಗ್ಗೆ ಮನಸ್ಸಿನಿಂದ ಹೊಗಳಿದ್ದನ್ನು ನಾನು ನೋಡಿದ್ದೇನೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ ಬಿಜೆಪಿ ಸರಕಾರವನ್ನು ಟೀಕೆ ಮಾಡಲು ಟೀಕಿಸುತ್ತಾರೆ. ಕಾಂಗ್ರೆಸ್ ಮೇಕೆದಾಟು ಯೋಜನೆ ಪಾದಯಾತ್ರೆಯ ನಾಟಕವನ್ನು ಸಿಎಂ ಬೊಮ್ಮಾಯಿಯವರು ಮೇಕೆದಾಟು ಯೋಜನೆಗೆ ಬಜೆಟ್ ನಲ್ಲಿ 1000 ಕೋಟಿ ರೂ. ಮೀಸಲಿಡುವ ಮೂಲಕ ಕಾಂಗ್ರೆಸ್ ಪಾದಯಾತ್ರೆಗೆ ಉತ್ತರ ಕೊಟ್ಟಿದ್ದಾರೆ ಎಂದರು.