ಹೊಸದಿಲ್ಲಿ: 5ನೇ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮೇ 3 ಕೊನೆಯ ದಿನವಾಗಿದ್ದರೂ ಉತ್ತರ ಪ್ರದೇಶದ ಅಮೇಠಿ ಮತ್ತು ರಾಯ್‌ಬರೇಲಿ ಕ್ಷೇತ್ರದಿಂದ ಯಾರು ಸ್ಪರ್ಧಿಸಲಿದ್ದಾರೆಂಬುದು ಇನ್ನೂ ಖಚಿತವಾಗಿಲ್ಲ. ಆದರೆ ಕೆಲವು ಮಾಧ್ಯಮಗಳ ಪರದಿ ಪ್ರಕಾರ, ತಾವು ಮಾತ್ರವಲ್ಲದೇ ಗಾಂಧಿ ಕುಟುಂಬದ ಯಾರೊಬ್ಬರೂ ಸ್ಪರ್ಧೆಗೂ ರಾಹುಲ್ ಗಾಂಧಿ ಒಪ್ಪುತ್ತಿಲ್ಲ !
ಅಮೇಠಿ ಅಥವಾ ರಾಯ್‌ಬರೇಲಿ ಕ್ಷೇತ್ರದಲ್ಲಿ ಸ್ಪರ್ಧೆಗೆ ರಾಹುಲ್ ಗಾಂಧಿ ಅವರ ಮನವೊಲಿಸುವ ಪ್ರಯತ್ನವನ್ನು ಖುದ್ದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾಡುತ್ತಿದ್ದಾರೆ. ಆದರೆ ರಾಹುಲ್ ಸ್ಪರ್ಧೆಗೆ ಮುಂದಾಗುತ್ತಿಲ್ಲ ಎಂದು ಕಾಂಗ್ರೆಸ್‌ನ ಪದಾಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖೀಸಿ ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.
ವಾಸ್ತವದಲ್ಲಿ ರಾಹುಲ್ ಗಾಂಧಿ ರಾಯ್‌ಬರೇಲಿ ಕ್ಷೇತ್ರದಿಂದ ಸ್ಪರ್ಧಿಸಲು ಮಂಗಳವಾರ ರಾತ್ರಿಯವರೆಗೂ ರೆಡಿಯಾಗಿದ್ದರು. ಆದರೆ ಬಳಿಕ ಸ್ಪರ್ಧೆಯಿಂದ ಹಿಂದೆ ಸರಿದು, ಗಾಂಧಿ ಕುಟುಂಬದ ಯಾರೂ ಸ್ಪರ್ಧಿಸಲು ಅವರು ಬಿಡುತ್ತಿಲ್ಲ ಎಂದು ಪದಾಧಿಕಾರಿ ತಿಳಿಸಿದ್ದಾರೆ. ಇದರ ಹೊರತಾಗಿಯೂ ಅಮೇಠಿ ಮತ್ತು ರಾಯ್‌ಬರೇಲಿ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿಯಾಗಬೇಕು ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಖರ್ಗೆಯವರಿಗೆ ಈಗಾಗಲೇ ಕಾಂಗ್ರೆಸ್ ನೀಡಿದೆ.
ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಎಸ್‌ಪಿ ನಾಯಕ ಅಖೀಲೇಶ್ ಸಿಂಗ್ ಅವರ ಜತೆಗಿದ್ದಾಗಲೂ ರಾಹುಲ್ ತಮ್ಮ ಸ್ಪರ್ಧೆಯ ಬಗ್ಗೆ ಸಲಹೆ ಕೇಳಿದ್ದರು. ಆಗ ಸ್ಪರ್ಧಿಸಿ ಎಂದು ಹೇಳಿದ್ದರಲ್ಲದೇ, ತಳಮಟ್ಟದಲ್ಲಿ ಬೆಂಬಲ ಚೆನ್ನಾಗಿದೆ ಎಂಬ ಸಂಗತಿಯನ್ನು ಅಖೀಲೇಶ್ ಯಾದವ್ ತಿಳಿಸಿದ್ದರು ಎನ್ನಲಾಗಿದೆ. ಜತೆಗೆ ಗಾಂಧಿ ಕುಟುಂಬದವರು ಸ್ಪರ್ಧಿಸಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯನ್ನೂ ನಡೆಸಿದ್ದಾರೆ. ಈ ಮಧ್ಯೆ, ರಾಹುಲ್ ಮತ್ತು ಪ್ರಿಯಾಂಕಾ ಸ್ಪರ್ಧಿಸಿದರೆ ಮಾತ್ರವೇ ಉತ್ತರ ಪ್ರದೇಶದಲ್ಲಿ ಪಕ್ಷ ಸಂಘಟನೆಗೆ ಬಲ ಬರಲಿದೆ ಎಂಬ ವಾದವನ್ನು ಪಕ್ಷದ ಸ್ಥಳೀಯ ಕಾರ್ಯಕರ್ತರು ಮುಂದಿಡುತ್ತಿದ್ದಾರೆ.
ಇದನ್ನೂ ಓದಿ: Lok Sabha Election: ವಾರಾಣಸಿಯಲ್ಲಿ ರಿಯಲ್ ಮೋದಿ VS ರೀಲ್ ಮೋದಿ ಫೈಟ್!