ಮೈಸೂರು: ಭಾರತೀಯರ ಏಕತೆಗೆ ಹಿಂದಿ ಭಾಷೆಯೇ ಉತ್ತಮ ಮಾರ್ಗ ಎಂದು ಗಾಂಧೀಜಿ ಅರಿತಿದ್ದರು. ಅದಕ್ಕೆಂದೇ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲೂ ಹಿಂದಿಯನ್ನೇ ಬಳಸಿಕೊಂಡರು. ಭಾರತದ ಎಲ್ಲಾ ವ್ಯವಹಾರವೂ ರಾಷ್ಟ್ರ ಭಾಷೆಯಾದ ಹಿಂದಿಯಲ್ಲಿರಬೇಕೆಂದು ಅವರು ಬಯಸಿದ್ದರು ಎಂದು ವಿಶ್ರಾಂತ ಹಿಂದಿ ಪ್ರಾಧ್ಯಾಪಕ ಡಾ.ತಿಪ್ಪೇಸ್ವಾಮಿ ಹೇಳಿದರು.
ನಗರದ ಬಿ.ಎನ್.ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಹಿಂದಿ ವಿಭಾಗದ ವತಿಯಿಂದ ಆಯೋಜಿಸಿದ್ದ ಹಿಂದಿ ದಿನಾಚರಣೆಯ ಸಮಾರಂಭದಲ್ಲಿ ‘ಗಾಂಧೀಜಿ ಮತ್ತು ರಾಷ್ಟ್ರಭಾಷೆ ಹಿಂದಿ’ ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಗಾಂಧೀಜಿಯ ಮಾತೃ ಭಾಷೆ ಗುಜರಾತಿಯಾದರೂ ಹಿಂದಿ ಭಾಷೆಯ ಮೇಲೆ ಅಪಾರ ಪ್ರಭುತ್ವ ಸಾಧಿಸಿದ್ದರು. ಜನತೆಯನ್ನು ಸ್ವಾತಂತ್ರ ಹೋರಾಟಕ್ಕೆ ಅಣಿಗೊಳಿಸಲು ಹಿಂದಿಯನ್ನು ಸಮರ್ಥವಾಗಿ ಬಳಸಿಕೊಂಡರು. ಇಂದು ಹಿಂದಿ ರಾಷ್ಟ್ರ ಭಾಷೆಯಾದರೂ ಸರ್ಕಾರಿ ಆಡಳಿತ ಹಿಂದಿಯಲ್ಲಿ ನಿರ್ವಹಣೆಯಾಗುತ್ತಿಲ್ಲ.
ಆ ದಿಸೆಯಲ್ಲಿ ಆಡಳಿತ ವ್ಯವಸ್ಥೆ ಗಮನಹರಿಸಬೇಕಿದೆ. ಭಾಷೆಯ ಬೆಳವಣಿಗೆಗೆ ಅನುವಾದ ಕಾರ್ಯ ಬಹಳ ಮುಖ್ಯವಾದುದು. ಹೀಗಾಗಿ ಹಿಂದಿ ಸಾಹಿತ್ಯವನ್ನು ಪ್ರಾದೇಶಿಕ ಮತ್ತು ಜಾಗತಿಕ ಭಾಷೆಗಳಿಗೆ ಅನುವಾದಗೊಳಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ. ಸಾಂಬಶಿವಯ್ಯ ಮಾತನಾಡಿ, ಭಾಷೆಯು ಧ್ವನಿ-ಸಂಕೇತಗಳ ಮೂಲಕ ವಿಚಾರಗಳ ವಿನಿಮಯಕ್ಕೆ ನೆರವಾಗುವ ಒಂದು ಮಾಧ್ಯಮವಾಗಿದೆ. ಆಯಾ ನೆಲದ ಸಂಸ್ಕೃತಿಯನ್ನು ಗುರುತಿಸಲು ಭಾಷೆ ಬಹು ಮುಖ್ಯ ಆಯಾಮವಾಗಿದೆ.
ಅಂತೆಯೇ ಬೆಳವಣಿಗೆ, ಅಭಿರುಚಿ, ಆರ್ಥಿಕತೆಗೂ ಭಾಷೆ ಅಗತ್ಯವಾಗಿದೆ. ಭಾರತದಲ್ಲಿ 780 ಭಾಷೆಗಳಿದ್ದರೂ 66 ಭಾಷೆಗಳು ಮಾತ್ರ ಲಿಪಿ ಹೊಂದಿವೆ. ಅವುಗಳಲ್ಲಿ ಹಿಂದಿಯೂ ಒಂದಾಗಿದ್ದು ವಿಶ್ವದ ತೃತೀಯ ಭಾಷೆಯಾಗಿದೆ. 9ನೇ ಶತಮಾನದಲ್ಲಿಯೇ ಹಿಂದಿ, ಅತೀ ಹೆಚ್ಚು ಮಾತನಾಡುವ ಭಾಷೆಯಾಗಿತ್ತು. ಮುಂದೆ ಬ್ರಿಟೀಷರ ವಿರುದ್ಧ ಹೋರಾಡುವಾಗ ಭಾರತದ ಸ್ವಾತಂತ್ರ ಚಳವಳಿಯ ಭಾಷೆಯಾಗಿಯೂ ಬಳಕೆಯಾಯಿತು.
ಇಂದು ವಿಶ್ವದಲ್ಲಿ 2500 ಭಾಷೆಗಳು ಅಳಿನಂಚಿನಲ್ಲಿವೆ. ಪ್ರತಿಯೊಂದು ಭಾಷೆಯು ವೈಶಿಷ್ಟ್ಯವೂ ಭಿನ್ನವೂ ಆಗಿರುವುದರಿಂದ ಅವುಗಳನ್ನು ಬಳಸುವ ಮೂಲಕ ಉಳಿಸಿ ಬೆಳೆಸಬೇಕಾಗಿದೆ ಎಂದು ಹೇಳಿದರು. ಪಿ.ಯು ಕಾಲೇಜು ಪ್ರಾಂಶುಪಾಲ ಎಸ್.ಸೋಮಶೇಖರ ಮಾತನಾಡಿದರು. ಪದವಿ ಕಾಲೇಜು ಪ್ರಾಂಶುಪಾಲ ಪ್ರೊ.ಎಂ. ಮಹದೇವಪ್ಪ ಉಪಸ್ಥಿತರಿದ್ದರು.