Advertisement

ಸಸ್ತಾಪುರ ಗ್ರಾಪಂಗೆ ಗಾಂಧಿ  ಪುರಸ್ಕಾರ

12:18 PM Oct 01, 2018 | Team Udayavani |

ಬಸವಕಲ್ಯಾಣ: 2017-18ನೇ ಸಾಲಿನ ರಾಜ್ಯ ಮಟ್ಟದ ಗಾಂಧಿ ಪುರಸ್ಕಾರಕ್ಕೆ ತಾಲೂಕಿನ ಸಸ್ತಾಪುರ ಗ್ರಾಪಂ ಆಯ್ಕೆಯಾಗಿದೆ. ಸಸ್ತಾಪುರ ಗ್ರಾಪಂ ವ್ಯಾಪ್ತಿಯಲ್ಲಿ ಮಿರ್ಜಾಪುರ, ಅತಲಾಪುರ ಸೇರಿದಂತೆ ಅಂದಾಜು 8 ಸಾವಿರ ಜನ ವಾಸಿಸುವ ಗ್ರಾಮ ಇದಾಗಿದೆ. ಸರಕಾರದ ಅನುದಾನ ಸಮರ್ಪಕವಾಗಿ ಗ್ರಾಮದ ಅಭಿವೃದ್ಧಿಗೆ ಸದ್ಬಳಕೆ ಮಾಡಿಕೊಂಡ ಹಿನ್ನೆಲೆಯಲ್ಲಿ ಪ್ರಶಸ್ತಿಗೆ ಭಾಜನವಾಗಿದೆ. 

Advertisement

ಗ್ರಾಮದಲ್ಲಿ ಒಟ್ಟು 900 ಮನೆಗಳಿವೆ. ಎಸ್‌ಸಿ, ಎಸ್‌ಟಿ ಮತ್ತು ಸಾಮಾನ್ಯ ವರ್ಗಗಳಿಗೆ ಸರಕಾರ ಆದೇಶದಂತೆ ಶೌಚಾಲಯ ಕಟ್ಟಿಕೊಳ್ಳಲು ಅನುದಾನ ನೀಡಿ ಗ್ರಾಮ ಬಹಿರ್ದೆಸೆ ಮುಕ್ತ ಘೋಷಣೆಗೆ ಸಿದ್ಧಗೊಂಡಿದೆ.  2017-18ನೇ ಸಾಲಿನ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಅಂದಾಜು 70 ಲಕ್ಷ ರೂ. ಖರ್ಚಿನಲ್ಲಿ ಮಿರ್ಜಾಪುರ ಮತ್ತು ಸಸ್ತಾಪುರದಲ್ಲಿ 20 ಕೃಷಿ ಹೊಂಡ, 4 ಚಿಕ್ಕ ಚೆಕ್‌ಡ್ಯಾಂ ಹಾಗೂ 15 ಚೆಕ್‌ಡ್ಯಾಂಗಳು  ಹೂಳೆತ್ತುವ ಕೆಲಸಗಳು ನಡೆದಿವೆ.

2014ನೇ ಸಾಲಿನಲ್ಲಿ ಕುಡಿಯುವ ನೀರಿಗಾಗಿ, ಉತ್ತಮವಾದ ಚರಂಡಿ ನಿರ್ಮಾಣ, ಮಳೆ ನೀರಿನ ಇಂಗು ಗುಂಡಿ, ನೀರಿನ ಟ್ಯಾಂಕ್‌ ಮತ್ತು ಗ್ರಾಮದ ಅತಿಹೆಚ್ಚು ಅಂಕ ಪಡೆದ ಎಸ್‌ಸಿ ಹಾಗೂ ಎಸ್‌ಟಿ ವಿದ್ಯಾರ್ಥಿಗಳ ಮುಂದಿನ ಅಭ್ಯಾಸಕ್ಕಾಗಿ ಸಹಾಯಧನ ವಿತರಣೆ ಮಾಡಲಾಗಿದೆ. 

ಗ್ರಾಪಂ ವ್ಯಾಪ್ತಿಗೆ ಒಳಪಡುವ ಅಂಗನವಾಡಿ ಕೇಂದ್ರ ಮತ್ತು ಸರಕಾರಿ ಶಾಲೆಗಳಲ್ಲಿ ಶೌಚಾಲಾಯ, ಆಟದ ಮೈದಾನ ಮತ್ತು ಗ್ರಾಮದಲ್ಲಿ ಸಂಗ್ರಹವಾದ ಕಸ ರಸ್ತೆ ಹಾಗೂ ಚರಂಡಿಯಲ್ಲಿ ಹಾಕದಂತೆ ಕ್ರಮ ಕೈಗೊಳ್ಳಲಾಗಿದೆ. ಕಸ ನಿರ್ವಹಣೆಗಾಗಿ ನಾಲ್ವರು ಸಿಬ್ಬಂದಿಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಬೆಳಗ್ಗೆ ಆದರೆ ಸಾಕು. ಮನೆ ಮನೆಗೆ ತೆರಳಿ ಕಸ ಸಂಗ್ರಹ ಮಾಡುವುದೇ ಇವರ ಕಾರ್ಯವಾಗಿದೆ ಎಂದು ಪಿಡಿಒ ಚಂದ್ರಮ ಹಣಮಂತಪ್ಪ ತಿಳಿಸಿದರು.

ರಾಜ್ಯ ಸರಕಾರ ಬೀದರ ಜಿಲ್ಲೆಯಲ್ಲಿ ಆಯ್ಕೆ ಮಾಡಿರುವ 5 ಗ್ರಾಪಂ ಪೈಕಿ ಸಸ್ತಾಪುರ ಗ್ರಾಪಂ ಗಾಂಧಿ ಪುರಸ್ಕಾರಕ್ಕೆ
ಆಯ್ಕೆಯಾಗಿದೆ. 

Advertisement

ಗ್ರಾಪಂ ಮುಂದಿನ ಯೋಜನೆ
ವಿದ್ಯುತ್‌ ಮಾದರಿಯಲ್ಲಿ ಕುಡಿಯುವ ನೀರಿನ ನಳಗಳಿಗೆ ಮೀಟರ್‌ ಅಳವಡಿಸುವ ಯೋಜನೆ. ಸಸ್ತಾಪುರ ಗ್ರಾಪಂಗೆ ಸಂಪೂರ್ಣ ಸೋಲಾರ್‌ ವ್ಯವಸ್ಥೆ ಮಾಡಲಾಗುವುದು. ಕಸ ನಿರ್ವಹಣೆಗಾಗಿ ಸಂಸ್ಕರಣ ಘಟಕ ನಿರ್ಮಾಣ ಮಾಡಿ ಗೊಬ್ಬರ ತಯಾರಿಸಿ ರೈತರಿಗೆ ವಿತರಿಸುವ ಯೋಜನೆ.

ಗ್ರಾಪಂನಲ್ಲಿ ಸೌಕರ್ಯಗಳು: ಕೃಷಿ ಹೊಂಡ, ಇಂಗು ಗುಂಡಿ ಮತ್ತು ಮಿನಿ ಟ್ಯಾಂಕ್‌ ನಿರ್ಮಾಣ. ಮನೆ ಮನೆಗೆ ನೀರಿನ ಸಂಪರ್ಕ. ಸಿಸಿ ರಸ್ತೆ, ಶೌಚಾಲಯ, ಚರಂಡಿ ನಿರ್ಮಾಣ. ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ. ಶೇ. 85ರಷ್ಟು ಕಂದಾಯ ಸಂಗ್ರಹ 

ಪ್ರಶಸ್ತಿ ಪ್ರದಾನ: ಮಹಾತ್ಮ ಗಾಂಧೀ ಜಿ ಅವರ 150ನೇ ಜನ್ಮದಿನದ ಅಂಗವಾಗಿ ಬೆಂಗಳೂರಿನ ಅರಮನೆ ಮೈದಾನದದಲ್ಲಿ ಅ. 2ರಂದು ಮುಖ್ಯಮಂತ್ರಿ ಮತ್ತು ಪಂಚಾಯತ್‌ ರಾಜ್‌ ಖಾತೆ ಸಚಿವರ ಸಮ್ಮುಖದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪತ್ರ ಪ್ರದಾನ ಮಾಡಲಾಗುತ್ತಿದೆ. ಪ್ರಶಸ್ತಿ 5 ಲಕ್ಷ ರೂ. ನಗದು ಮತ್ತು ಪ್ರಮಾಣ ಪತ್ರ ಒಳಗೊಂಡಿದೆ. ಗ್ರಾಪಂ ಅಧ್ಯಕ್ಷ ಬ್ರಹ್ಮಾರೆಡ್ಡಿ ಮತ್ತು ಪಿಡಿಒ ಚಂದ್ರಮ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಗ್ರಾಮಸ್ಥರ ಸಹಕಾರ ಮತ್ತು ಗ್ರಾಪಂ ಸರ್ವ ಸದಸ್ಯರ ಪ್ರೋತ್ಸಾಹದಿಂದ ಮತ್ತು ಪಿಡಿಒ ಅಭಿವೃದ್ಧಿ ದೂರದೃಷ್ಟಿ
ಹಿನ್ನೆಲೆಯಲ್ಲಿ ಸಸ್ತಾಪುರ ಗ್ರಾಪಂ ರಾಜ್ಯ ಮಟ್ಟದ ಗಾಂಧಿಪುರಸ್ಕಾರಕ್ಕೆ ಆಯ್ಕೆ ಯಾಗಲು ಸಾಧ್ಯವಾಗಿದೆ. 
ಬ್ರಹ್ಮಾರೆಡ್ಡಿ ಗ್ರಾಪಂ ಅಧ್ಯಕ್ಷ

 ಕಾನೂನು ಚೌಕಟ್ಟಿನಲ್ಲಿ ನಡೆಯುವ ಪ್ರತಿಯೊಂದು ಅಭಿವೃದ್ಧಿ ಕಾಮಗಾರಿಗಳಿಗೆ ಗ್ರಾಮಸ್ಥರ ಸಹಕಾರ ಮತ್ತು ಅವುಗಳನ್ನು ಚಾಚು ತಪ್ಪದೆ ಪಾಲಿಸಿರುವುದಕ್ಕೆ ಗ್ರಾಮ ಬಯಲು ಬಹಿರ್ದೆಸೆ ಮುಕ್ತ ಗ್ರಾಮದ ಜತೆಗೆ, ಗಾಂಧಿ ಪುರಸ್ಕಾರ ಪಡೆಯಲು ಸಾಧ್ಯವಾಗಿದೆ.
 ಚಂದ್ರಮ, ಪಿಡಿಒ ಸಸ್ತಾಪುರ

ಸಸ್ತಾಪುರ ಗ್ರಾಪಂ ಗಾಂಧಿ  ಪುರಸ್ಕಾರಕ್ಕೆ ಆಯ್ಕೆ ಆಗಿರುವುದು ಹೆಮ್ಮೆಯ ಸಂಗತಿ. ಇದರಲ್ಲಿ ಗ್ರಾಮಸ್ಥರ ಹಾಗೂ ಪಂಚಾಯಿತಿ ಸರ್ವ ಸದಸ್ಯರ ಪರಿಶ್ರಮ ಅಡಗಿದೆ. ವಿಶೇಷವಾಗಿ ಎಲ್ಲರೂ ಒಮ್ಮತ ಮನಸ್ಸಿನಿಂದ ಮಾಡಿದಾಗ
ಇಂತಹ ಪುರಸ್ಕಾರ ಪಡೆಯಲು ಸಾಧ್ಯ ಎಂಬುವುದಕ್ಕೆ ಈ ಗ್ರಾಪಂ ಸಾಕ್ಷಿ. 
ಜೈಪ್ರಕಾಶ ಚವ್ಹಾಣ, ತಾಪಂ ಎಡಿ ಬಸವಕಲ್ಯಾಣ

„ವೀರಾರೆಡ್ಡಿ ಆರ್‌.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next