Advertisement

ಗಾಂಧಿ, ವಿವೇಕಾನಂದ ನಿಜ ದಾರ್ಶನಿಕರು

06:30 AM Mar 11, 2019 | |

ಬೆಂಗಳೂರು: ಮಹಾತ್ಮ ಗಾಂಧೀಜಿ ಹಾಗೂ ಸ್ವಾಮಿ ವಿವೇಕಾನಂದರು ಭಾರತಕ್ಕೆ ನಿಜವಾದ ಹಿಂದುತ್ವವನ್ನು ನೀಡಿದ ದಾರ್ಶನಿಕರು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಬಂಜೆಗೆರೆ ಜಯಪ್ರಕಾಶ್‌ ಅಭಿಪ್ರಾಯಪಟ್ಟರು.

Advertisement

ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್‌ನಿಂದ ಶೇಷಾದ್ರಿಪುರಂ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧೀಜಿ-ವಿವೇಕಾನಂದ ಪ್ರಣೀತ ರಾಜ್ಯ ಮಟ್ಟದ ಯುವಜನ ಸಮ್ಮೇಳನದಲ್ಲಿ ಮಾತನಾಡಿದ ಅವರು, ದುಸ್ಥಿತಿಯಲ್ಲಿರುವ ಸಮಾಜದಲ್ಲಿ ಉನ್ನತ ಧರ್ಮ ಕಾಣಲು ಸಾಧ್ಯವಿಲ್ಲ ಎಂಬುದನ್ನು ಸಮಾಜ ಅರ್ಥ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು. 

ಭಾರತೀಯತೆ, ಹಿಂದುತ್ವದ ಪ್ರತಿನಿಧಿಗಳಾಗಿದ್ದ ಗಾಂಧೀಜಿ ಮತ್ತು ವಿವೇಕಾನಂದರು ಎಂದಿಗೂ ದೇವಸ್ಥಾನಗಳಿಗೆ ಹೋಗಲಿಲ್ಲ ಹಾಗೂ ಮೌಡ್ಯವನ್ನು ಒಪ್ಪಲಿಲ್ಲ. ಬದಲಿಗೆ ಸತ್ಯ ಶೋಧನೆ ತಮ್ಮ ಪರಮಗುರಿ ಎಂದು ನಿಶ್ಚಯಿಸಿದ ಅವರು, ಅದೇ ಮಾರ್ಗದಲ್ಲಿ ಸಾಗಿದ್ದರು ಎಂದರು.

ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ.ವೂಡೇ ಪಿ. ಕೃಷ್ಣ ಮಾತನಾಡಿ, ಪಾಶ್ಚಿಮಾತ್ಯ ಶಿಕ್ಷಣ ಪಡೆದರೂ ಸಂಪೂರ್ಣ ಭಾರತೀಯತೆಯನ್ನು ಮೈಗೂಡಿಸಿಕೊಂಡಿದ್ದ ಗಾಂಧೀಜಿ ಹಾಗೂ ವಿವೇಕಾನಂದರ ಆದರ್ಶಗಳು ಸಮಾಜಕ್ಕೆ ಮಾರ್ಗದರ್ಶಿಯಾಗಿವೆ. ಅವರ ಚಿಂತನೆಗಳು ಕೇವಲ ಭಾರತಕ್ಕೆ ಸೀಮಿತವಾಗಿರಲಿಲ್ಲ. ಬದಲಿಗೆ ಇಡೀ ವಿಶ್ವದ ದೃಷ್ಟಿಯನ್ನು ಹೊಂದಿದ್ದವು ಎಂದು ಹೇಳಿದರು.

ಸಮ್ಮೇಳನಾಧ್ಯಕ್ಷ ಡಾ.ಡಿ.ಕೆ.ಚಿತ್ತಯ್ಯ ಪೂಜಾರ್‌ ಮಾತನಾಡಿ, ಯಂತ್ರಗಳ ಅತಿಯಾದ ಅವಲಂಬನೆ ಹಾಗೂ ಸರ್ಕಾರವನ್ನು ನೆಚ್ಚಿ ಉದ್ಯೋಗದ ನಿರೀಕ್ಷೆಯಲ್ಲಿರುವ ಬದಲಿಗೆ ಸ್ವಯಂ ಉದ್ಯೋಗಿಗಳಾಗಲು ಯುವಕರು ಮುಂದಾಗಬೇಕು ಎಂದು ಕರೆ ನೀಡಿದರು. 

Advertisement

ಸಮ್ಮೇಳನದಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ವಿವಿಧ ಗೋಷ್ಠಿಗಳು ನಡೆದವು. ಈ ವೇಳೆ ಕರ್ನಾಟಕ ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಡಾ.ಮಲ್ಲೇಪುರಂ ಜಿ. ವೆಂಕಟೇಶ್‌, ತುಮಕೂರು ವಿವಿ ಪ್ರಾಧ್ಯಾಪಕ ಡಾ.ಶಿವಣ್ಣ ಬೆಳವಾಡಿ, ಗಾಂಧಿ ಸ್ಮಾರಕ ನಿಧಿ ಗೌರವ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ, ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್‌ನ ಕಾರ್ಯದರ್ಶಿ ಸಿ.ಹೇಮಾವತಿ ಸಿಸಿರಾ ಉಪಸ್ಥಿತರಿದ್ದರು.

ಪಾಕಿಸ್ತಾನ ಎಂದ ತಕ್ಷಣ ಎಲ್ಲರನ್ನೂ ವಿರೋಧಿಸುವುದು ಬೇಡ. ಅಲ್ಲಿಯೂ ಹಿಂದುಸ್ತಾನವನ್ನು ಪ್ರೀತಿಸುವ ಸ್ನೇಹಜೀವಿಗಳಿದ್ದಾರೆ. ಮಾನವೀಯತೆ ಯುದ್ಧಕ್ಕಿಂತ ದೊಡ್ಡದು.
-ಡಾ.ಮನು ಬಳಿಗಾರ್‌, ಕಸಾಪ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next