ಕನಕಪುರ: ಮಕ್ಕಳ ದಿನಾಚರಣೆ ಪ್ರಯುಕ್ತ ತಾಲೂ ಕಿನ 13 ಸರ್ಕಾರಿ ಶಾಲೆಯ ನೂರಾರು ಮಕ್ಕಳು ಪುನೀತ್ ನಟನೆಯ ಗಂಧದಗುಡಿ ಚಿತ್ರ ವೀಕ್ಷಿಸಿ ಸಂಭ್ರಮಿಸಿದರು. ಶಿಕ್ಷಣ ಫೌಂಡೇಶನ್ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ಸೋಮವಾರ ಮಕ್ಕಳ ದಿನಾಚರಣೆ ಪ್ರಯುಕ್ತ ಪುನೀತ್ ನಟನೆಯ ಗಂಧದ ಗುಡಿ ಚಿತ್ರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು.
ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗಯ್ಯ ನೇತೃತ್ವದಲ್ಲಿ ಸೋಮವಾರ ಬೆಳಗ್ಗೆ 9 ಗಂಟೆಗೆ ಗಂಧದ ಗುಡಿ ಚಿತ್ರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ತಾಲೂಕಿನ ಶಿವನಹಳ್ಳಿ, ಅಂಬೇಡ್ಕರ್ ನಗರ, ಜಿಎನ್‌ಪಿಎಚ್‌ಎಸ್, ಕನಕಪುರ ಜಿಜಿಎಂಎಸ್ ಅರಳಾಳು, ಜ್ಯೋತಿ ಕಾಲೋನಿ, ಕಲ್ಲಹಳ್ಳಿ, ಆನಮಾನ ಹಳ್ಳಿ, ಮೇಳೆಕೋಟೆ ಸರ್ಕಾರಿ ಶಾಲೆ ಸೇರಿದಂತೆ 800ಕ್ಕೂ ಹೆಚ್ಚು ಮಕ್ಕಳು ಮೈಸೂರು ರಸ್ತೆಯಲ್ಲಿರುವ ವಾಣಿ ಚಿತ್ರಮಂದಿರದ ಬಳಿ ಜಮಾಯಿಸಿದ್ದರು.
ಉತ್ಸಹದಿಂದ ವೀಕ್ಷಣೆ: ಮಕ್ಕಳು ಉತ್ಸಹದಿಂದ ಗಂಧದಗುಡಿ ಚಿತ್ರ ವೀಕ್ಷಣೆ ಮಾಡಿದರು. ಪರಿಸರ, ವನ್ಯ ಸಂಪತ್ತು ಎಷ್ಟು ಅನಿವಾರ್ಯ. ನಶಿಸುತ್ತಿರುವ ಅರಣ್ಯ ಸಂಪತ್ತು, ಸಂರಕ್ಷಣೆಯಲ್ಲಿ ನಮ್ಮ ಪಾತ್ರ ಏನು ಎಂಬ ಬಗ್ಗೆ ಮಕ್ಕಳಿಗೆ ಚಿತ್ರ ಮನದಟ್ಟು ಮಾಡಿ ಕೊಟ್ಟಿದೆ. ಮಕ್ಕಳು ಹೊಸ ಅನುಭವವನ್ನು ಪರಸ್ಪರ ವಿನಿಯ ಮಾಡಿಕೋಂಡಿದ್ದು ಕಂಡು ಬಂತು. ಹಾರೋಹಳ್ಳಿಯ ಕೆಪಿಎಸ್, ಜಿಎಚ್‌ಪಿಎಸ್ ಮೇಡಮಾರನಹಳ್ಳಿ ಶಾಲೆ ಮಕ್ಕಳು ಹಾರೋಹಳ್ಳಿಯ ಶ್ರೀವಿನಾಯಕ ಚಿತ್ರಮಂದಿರದಲ್ಲಿ ಗಂಧದಗುಡಿ ಚಿತ್ರ ವೀಕ್ಷಣೆ ಮಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗಯ್ಯ ಮಾತ ನಾಡಿ, ಮಕ್ಕಳ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಬೇಕು. ಈ ದೃಷ್ಟಿಯಿಂದ ಶಿಕ್ಷಣ ಫೌಂಡೇಶನ್ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಮಕ್ಕಳಿಗೆ ಉಚಿತವಾಗಿ ಗಂಧದಗುಡಿ ಚಿತ್ರ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಮುಂದಿನ ಜನರಿಗೆ ಅರಣ್ಯ ಸಂಪತ್ತು ಸಂರಕ್ಷಣೆ ಮಾಡಲು ಈ ಕಾರ್ಯಕ್ರಮ ಅನುಕೂಲವಾಗಲಿದೆ ಎಂದು ಹೇಳಿದರು.
ಸರ್ಕಾರಿ ಶಾಲೆ ಮಕ್ಕಳಿಗೆ ಅನುಕೂಲ: ಶಿಕ್ಷಣ ಇಲಾಖೆ ಬಿಆರ್‌ಪಿ ಉಮೇಶ್ ಬಾಬು ಮಾತನಾಡಿ, ಇದೊಂದು ಉತ್ತಮ ಕಾರ್ಯಕ್ರಮ. ಗಂಧದಗುಡಿ ಕೇವಲ ಸಿನಿಮಾ ಅಷ್ಟೇ ಅಲ್ಲದೆ, ವಿಜ್ಞಾನ ಮತ್ತು ಸಮಾಜ ವಿಜ್ಞಾನಕ್ಕೆ ಸಂಬಂಧಿಸಿದ ಹಲವು ವಿಚಾರ ಗಳು ಚಿತ್ರದಲ್ಲಿದೆ. ಸರ್ಕಾರಿ ಶಾಲೆ ಮಕ್ಕಳಿಗೆ ಅನುಕೂಲವಾಗಿದೆ ಎಂದು ತಿಳಿಸಿದರು. ಸಿಆರ್‌ಪಿ ಮಂಜುನಾಥ್, ಶಿಕ್ಷಕರಾದ ಪ್ರಕಾಶ್, ರಾಘವೇಂದ್ರ ಸ್ವಾಮಿ, ಸಾಕಮ್ಮ, ಶ್ರೀನಿವಾಸ್, ಆಶಾ, ಲಕ್ಕಪ್ಪ ಸೇರಿದಂತೆ 32 ಶಿಕ್ಷಕರು, ಶಿಕ್ಷಣ ಮಾರ್ಗ ದರ್ಶ ಕರಾದ ಶಿವಕುಮಾರ್, ಸುಮಿತ್ರ, ಸುಷ್ಮಾ, ಸತೀಶ್ ಮತ್ತು 845 ವಿದ್ಯಾರ್ಥಿಗಳು ಭಾಗವಹಿಸಿದ್ದರು.