Advertisement

ಕಲಾವಿದರು ಕಂಡಂತೆ ಗಣಪತಿ

06:45 AM Aug 25, 2017 | |

ಕಲಾಕ್ಷೇತ್ರದಲ್ಲಿ ವಿಭಿನ್ನವಾದ, ವಿಶೇಷವಾದ ಸಾಧನೆಯನ್ನು ಮಾಡಬೇಕೆಂದು ಹಂಬಲಿಸುವ ಕಲಾವಿದರಿಗೆ ಮೊದಲು ಸಿಗುವ ರೂಪವೇ ಗಣೇಶ. ಇವನನ್ನು ಹೇಗೆ ಬಿಡಿಸಿದರೂ ಸರಿ. ಚಿತ್ರದಲ್ಲಿ ಸೊಂಡಿಲಿನಾಕಾರ ಎಲ್ಲಾದರೊಂದು ಕಡೆ ಮೂಡಿದರೆ ಸಾಕು, ಅದು ಗಣೇಶ ಕಲಾಕೃತಿಯೆಂದೆನಿಸುತ್ತದೆ. ಹಾಗಾಗಿ ಗಣೇಶ ಕಲಾಕೃತಿಯನ್ನು ಒಂದು ಬಾರಿಯಾದರೂ ರಚಿಸದ ಕಲಾವಿದ ಇಲ್ಲವೆಂದೇ ಹೇಳಬಹುದು. ಕಲಾವಿದರು ಗಣೇಶನ ಆಕಾರವನ್ನು ಮೂರ್ತ – ಅಮೂರ್ತತೆಯಲ್ಲಿ ಪರಿಪರಿಯಾಗಿ ವರ್ಣವೈಭವ‌ದೊಂದಿಗೆ ಚಿತ್ರಿಸುತ್ತಾರೆ. ಸೌಂದರ್ಯವಿರುವುದು ನೋಡುವ ಕಣ್ಣಿನಲ್ಲಲ್ಲ, ಅರಿಯುವ ಮನಸ್ಸಿನಲ್ಲಿ ಎಂಬ ವಾದ ಇದಕ್ಕೆ ಪುಷ್ಟಿಕೊಡುತ್ತದೆ. ಇತರ ದೇವರುಗಳಿಗೆ ಹೋಲಿಸಿದರೆ ಗಣೇಶನದ್ದು ಸರ್ರಿಯಲಿಸಂ ರೂಪ. ಆನೆಯ ಮುಖ, ಮನುಷ್ಯ ದೇಹ, ಡೊಳ್ಳು ಹೊಟ್ಟೆ, ಕುಬj ಕೈಕಾಲುಗಳು; ಚಿಕ್ಕ ಇಲಿ ಅವನ ವಾಹನ! ಹೀಗೆ ಗಣೇಶನ ವಿಚಿತ್ರ ರೂಪ ಕಲಾವಿದರ ಕಲಾಕೃತಿ ರಚನೆಗೆ ಸ್ಫೂರ್ತಿದಾಯಕವಾಗಿದೆ. 

Advertisement

ಆದರೆ ಗಣೇಶನನ್ನು ಭಕ್ತಜನರು ವಿಕಟನನ್ನಾಗಿ ಗುರುತಿಸದೆ ಸುಮುಖನನ್ನಾಗಿ ಕಾಣುತ್ತಾರೆ. ಈತ ಭಕುತರ ಪಾಲಿಗೆ ವಿಘ್ನನಾಶಕನಾಗಿದ್ದಾನೆ. ವಿದ್ಯಾರ್ಥಿಗಳಿಗೆ, ವಿದ್ವಾಂಸರಿಗೆ ವಿದ್ಯಾದಾಯಕನಾಗಿದ್ದಾನೆ. ಕಲಾವಿದರಿಗೆ ಭಾವಸ್ವರೂಪವಾಗಿದ್ದಾನೆ. ಸಂಗೀತ, ನೃತ್ಯ, ನಾಟಕ, ಯಕ್ಷಗಾನಾದಿಗಳಿಗೆ ಆರಂಭದ ಸೊಲ್ಲಾಗಿದ್ದಾನೆ. ಹೀಗೆ ಗಣೇಶ ಎಲ್ಲರಿಗೂ ಅಚ್ಚುಮೆಚ್ಚು. ಗಣೇಶ ಕಲೆ ವಿಶ್ವವ್ಯಾಪಿಯಾಗಿದೆ ಎಂಬುದಕ್ಕೆ ನಾನಾ ದೇಶಗಳಲ್ಲಿ ದೊರೆತಿರುವ ಗಣೇಶ ವಿಗ್ರಹಗಳು, ಚಿತ್ರಗಳು ಸಾಕ್ಷಿಯಾಗಿವೆ. ಮುದ್ಗಲ ಪುರಾಣದ ಗಣಪತಿಯ ರೂಪಗಳು ಕಲಾವಿದರ ಕೈಯ್ಯಲ್ಲಿ ನವುರಾದ ಶಿಲ್ಪವಾಗಿ, ಮೂರ್ತಿಯಾಗಿ, ಚಿತ್ರವಾಗಿ ಮೂಡಿ ಜನಮನದೆದುರು ನಿಂತಾಗ ಆತ ಎಲ್ಲರಿಗೂ ಆಕರ್ಷಿತನಾಗಿ ಪೂಜೆಗೊಳ್ಳುತ್ತಾನೆ. 

ಕಲೆಯಲ್ಲಿ ಸೃಜನಶೀಲತಾವಾದ ಬಂದಾಗಿನಿಂದ ಕೆಲವು ದೇವತೆಗಳ ರೂಪಗಳು ಭಾವನಾತ್ಮಕವಾಗಿ ಕಲಾಕೃತಿ ರಚನೆಯಿಂದ ಹಿಂದೆ ಸರಿದವು. ಆದರೆ ಗಣಪತಿ ಎಂದೂ ಹಿಂದೆ ಸರಿದಿಲ್ಲ. ಆತನ ಸ್ವರೂಪವೇ ಕಲಾವಿದರ ಭಾವನೆಗಳನ್ನು ಕೆರಳಿಸಿ ಕಲಾಕೃತಿ ರಚನೆಗೆ ಸಾಕಷ್ಟು ಗ್ರಾಸ ಒದಗಿಸುವಂಥದ್ದು. ಈಗೀಗ ಗಣೇಶನನ್ನು ಕಲಾವಿದ ಹೇಗೆ ಬರೆದರೂ ಚೆಂದ ಅನ್ನುವಷ್ಟರ ಮಟ್ಟಿಗೆ ಗಣೇಶ ಕಲೆ ಬೆಳೆದಿದೆ. ದೇಹಶಾಸ್ತ್ರ, ಪ್ರಮಾಣ ಬದ್ಧತೆ, ವರ್ಣವಿನ್ಯಾಸ ಯಾವುದೂ ಮುಖ್ಯವಲ್ಲ ಎಂದೆನಿಸಿದೆ. ಮೂರ್ತ-ಅಮೂರ್ತ ರೂಪಗಳಲ್ಲೆಲ್ಲ ಆತ ಕಾಣುತ್ತಿದ್ದಾನೆ. ಸೊಂಡಿಲಿನಾಕಾರದಲ್ಲಿ ಭ್ರಮೆ ಹುಟ್ಟಿಸುವ ಯಾವುದೇ ವಸ್ತುಗಳಲ್ಲಿ, ಕಲ್ಲು -ಕಾಷ್ಟಗಳಲ್ಲಿ, ಮರಗಿಡಗಳಲ್ಲಿ, ಬೇರುಗಂಟುಗಳಲ್ಲಿ, ಹಣ್ಣುತರಕಾರಿಗಳಲ್ಲಿ, ಫ‌ಲಪುಷ್ಪಗಳಲ್ಲೆಲ್ಲ ಗಣೇಶ ಕಲೆ ಕಾಣುತ್ತಿದೆ.

ಇಂತಹ ಬಹುರೂಪಿ ಗಣೇಶನ ವಿಶ್ವರೂಪ ದರ್ಶನವನ್ನು ಕರಾವಳಿ ಜಿಲ್ಲೆಯ ಕಲಾವಿದರು ಮೂರ್ತ-ಅಮೂರ್ತ ರೂಪದಲ್ಲಿ ವೈವಿಧ್ಯಮಯವಾಗಿ ಕ್ಯಾನ್ವಾಸ್‌ ಮೇಲೆ ರೂಪಿಸಿದ್ದು, ಗಣೇಶ ಕಲಾಕೃತಿಗಳ ಪ್ರದರ್ಶನವನ್ನು ಆಗಾಗ್ಗೆ ನಡೆಸುತ್ತಿದ್ದಾರೆ. ಕರಾವಳಿಯ ಅನೇಕ ಕಲಾವಿದರ ಕೈಯ್ಯಲ್ಲಿ ಗಣೇಶನ ವಿಶ್ವಂಭರ ರೂಪ ವೈವಿಧ್ಯ ಮಯವಾಗಿ ಮೂಡಿಬಂದಿದೆ. ಚಿತ್ರದಲ್ಲಿ ಗಣೇಶ ಪುರಾಣದ ಪ್ರಮುಖ ಅಂಶಗಳು, ಗಣೇಶೋತ್ಸವದ ದೃಶ್ಯ, ಜನರು ಗಣೇಶನನ್ನು ನಮಸ್ಕರಿಸುವಂತೆ, ಕೊನೆಯಲ್ಲಿ ಗಣೇಶನನ್ನು ಕೆರೆಯಲ್ಲಿ ವಿಸರ್ಜಿಸುವಂತೆಯೂ ಚಿತ್ರಿಸಿ ದ್ದಾರೆ. ಗಣೇಶೋತ್ಸವದ ಎಲ್ಲ ದೃಶ್ಯಗಳೂ ಕ್ಯಾನ್ವಾಸ್‌ನಲ್ಲಿ ರೂಪಿತವಾಗಿದ್ದು ವೀಕ್ಷಕರಿಗೆ ಮುದ ಕೊಡುವಂತಿದೆ.

ಕಲಾವಿದ ಉಪ್ಪುಂದದ ಮಂಜುನಾಥ ಮಯ್ಯ ಅವರು ದಿನಕ್ಕೊಂದು ಗಣೇಶ ಕಲಾಕೃತಿ ಅಭಿಯಾನ ಆರಂಭಿಸಿ ಒಂದು ವರ್ಷವಿಡೀ ಚಿತ್ರಗಳನ್ನು ರಚಿಸಿ ಕುಂದಾಪುರದಲ್ಲಿ ಪ್ರದರ್ಶಿಸಿದ್ದಾರೆ. ಕಲಾವಿದ ವಿಶ್ವೇಶ್ವರ ಪರ್ಕಳ ಅವರು ಗಣೇಶ ಪುರಾಣದ ಅಂಶಗಳನ್ನು ಸೃಜನಾತ್ಮಕವಾಗಿ ದುಡಿಸಿ ಕೊಂಡು ಆಕರ್ಷಕ ಕಲಾಕೃತಿಗಳನ್ನು ರಚಿಸಿದ್ದಾರೆ. ಮೃಣ್ಮಯ ಕಲೆಯಲ್ಲಿ ಹೆಸರುವಾಸಿಯಾದ ವೆಂಕಿ ಪಲಿಮಾರ್‌ ಗಣೇಶನ ವಿವಿಧ ಭಂಗಿಯ ಟೆರಾಕೊಟಾ ಕಲಾಕೃತಿಗಳನ್ನು ರಚಿಸಿ ಕಲಾಭಿಮಾನಿಗಳ ಮನಮುಟ್ಟಿದ್ದಾರೆ. ಹೀಗೆ ಪ್ರತಿಯೊಬ್ಬರ ಕಲಾಕೃತಿಗಳಲ್ಲಿಯೂ ಗಣೇಶ ಒಂದಲ್ಲ ಒಂದು ವಿಶೇಷತೆಯಿಂದ ಕಂಡುಬರುತ್ತಿದ್ದಾನೆ. ಕಲಾವಿದರನ್ನೆಲ್ಲ ಹರಸುತ್ತಿದ್ದಾನೆ.

Advertisement

ಉಪಾಧ್ಯಾಯ ಮೂಡುಬೆಳ್ಳೆ
 

Advertisement

Udayavani is now on Telegram. Click here to join our channel and stay updated with the latest news.

Next