Advertisement

ಮಕ್ಕಳು ಆರಂಭಿಸಿದ ಗಣಪನಿಗೆ 8ರ ಹರೆಯ!

10:45 AM Sep 15, 2018 | Team Udayavani |

ಸುಳ್ಯ : ಮಕ್ಕಳೇ ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಿ, ಜಲಸ್ತಂಭನ ಮಾಡುವ ಗಣಪತಿ ದುಗಲಡ್ಕ ಸಮೀಪದ ಕೊಯಿಕುಳಿ ನೀರಬಿದಿರೆಯಲ್ಲಿ ಇದ್ದಾನೆ. ಎಂಟು ವರ್ಷಗಳ ಹಿಂದೆ ಆಟದ ರೂಪದಲ್ಲಿ ಆರಂಭಿಸಿದ ಈ ಆಚರಣೆ ಈಗ ಊರಿನ ಸಂಭ್ರಮದ ಹಬ್ಬ. ಅಂದು ಚೌತಿ ಸಂದರ್ಭ ಮಣ್ಣಿನ ಗಣಪ ತಯಾರಿಸಿ, ಕೈಗಾಡಿ ಮೂಲಕ ಕೊಂಡೊಯ್ದು ಸಂಭ್ರಮಿಸುತ್ತಿದ್ದ ಮಕ್ಕಳಾಟ ಮರೆಗೆ ಸರಿದಿಲ್ಲ. ಆ ಮಕ್ಕಳು ಈಗ ಹೈಸ್ಕೂಲು, ಕಾಲೇಜು ಹಂತದಲ್ಲಿದ್ದಾರೆ. ಅಂದಿನ ಸಂಭ್ರಮವನ್ನು ಈಗಲೂ ಮುಂದುವರಿಸಿದ್ದಾರೆ. ದಿನವಿಡಿ ಸಾಗುವ ಕಾರ್ಯಕ್ರಮದ ಎಲ್ಲ ಹಂತಗಳಲ್ಲಿ ಮಕ್ಕಳೇ ನೇತೃತ್ವ ವಹಿಸಿರುತ್ತಾರೆ.

Advertisement

ಬಾಲಕರ ತಂಡ
ಕೊಯಿಕುಳಿ, ನೀರಬಿದಿರೆ ಪರಿಸರದ ಹರಿಪ್ರಸಾದ್‌, ಶಿವಪ್ರಸಾದ್‌, ಯತಿನ್‌, ಧರ್ಮಪಾಲ, ಪ್ರಸಾದ್‌ ಎನ್‌. ಮೊದಲಾದ ಬಾಲಕರು ಎಂಟು ವರ್ಷಗಳ ಹಿಂದೆ ಗಣೇಶನ ವಿಶಿಷ್ಟ ಆರಾಧನೆ ಆರಂಭಿಸಿದರು. ಈಗ ಶ್ರೀದುರ್ಗಾ ಗೆಳೆಯರ ಬಳಗ ಎಂಬ ಸಮಿತಿ ರಚಿಸಿಕೊಂಡು, ಸ್ಥಳೀಯರ ಸಹಕಾರ ಪಡೆದು, ಆಮಂತ್ರಣ ಮುದ್ರಿಸಿ ಆಹ್ವಾನ ನೀಡುತ್ತಾರೆ. ಮಾವಿನ ಮರದ ಕೆಳಗೆ ಪುಟ್ಟ ಚಪ್ಪರ ರಚಿಸಿ, ತಳಿರು ತೋರಣಗಳಿಂದ ಶೃಂಗರಿಸುತ್ತಾರೆ. ಗಣಪತಿ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ನಡೆಯುತ್ತದೆ. ನೀರಬಿದಿರೆ ಅಖಿಲೇಶ್‌ ಪೂಜಾ ವಿಧಿ- ವಿಧಾನದ ನೇತೃತ್ವ ವಹಿಸುತ್ತಾರೆ. ಅವರು ಒಂದನೇ ತರಗತಿಯಲ್ಲಿದ್ದಾಗ ಈ ಆಚರಣೆ ಪ್ರಾರಂಭವಾಯಿತು. 

ಈಗ 9ನೇ ತರಗತಿ ವಿದ್ಯಾರ್ಥಿ. ಉಳಿದವರು ಪಿಯುಸಿ, ಡಿಗ್ರಿ ಹಂತದಲ್ಲಿ ಇದ್ದಾರೆ. ಕೆಲವರು ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದಾರೆ. ಚೌತಿ ದಿನ ಎಲ್ಲರೂ ಜತೆಗೂಡುತ್ತಾರೆ.

ಆರಾಧನೆ ಹೀಗೆ…
ಬೆಳಗ್ಗೆ 6.30ಕ್ಕೆ ಗಣಪತಿಯ ಪ್ರತಿಷ್ಠೆ ನಡೆಯುತ್ತದೆ. ಪೂಜೆ, ನೈವೇದ್ಯ ಅರ್ಪಿಸಲಾಗುತ್ತದೆ. ವಠಾರದ ಮಕ್ಕಳು ಸೇರಿ ಭಜನೆ ಮಾಡುತ್ತಾರೆ. ಮಧ್ಯಾಹ್ನದ ಪೂಜೆ ನಡೆಯುತ್ತದೆ. ಸ್ಥಳೀಯ ಮನೆಯೊಂದರಲ್ಲಿ ತಯಾರಿಸಿದ ಪಾಯಸ, ಅವಲಕ್ಕಿ, ಶರಬತ್ತನ್ನು ಭಕ್ತರಿಗೆ ನೀಡಲಾಗುತ್ತದೆ. ಮಧ್ಯಾಹ್ನದ ಬಳಿಕ ಮಕ್ಕಳಿಗೆ ಆಟೋಟ ಸ್ಪರ್ಧೆ ನಡೆಸಿ, ಬಹುಮಾನ ವಿತರಿಸುತ್ತಾರೆ. ಸಾಯಂಕಲ 6ಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆ ಆರಂಭಗೊಳ್ಳುತ್ತದೆ. ರಸ್ತೆಯ ಎರಡು ಬದಿಯಲ್ಲಿ ಸಾಗಿ, ಅಶ್ವತ್ಥ ಗಿಡಕ್ಕೆ ಸುತ್ತು ಹೊಡೆದು ಅನಂತರ ನೀರಬಿದಿರೆ ವಿಷ್ಣು ಕಿರಣ್‌ ಭಟ್‌ ಅವರ ತೋಟದ ಕೆರೆಯಲ್ಲಿ ವಿರ್ಸಜನ ಕಾರ್ಯ ನಡೆಯುತ್ತದೆ. ಮೆರವಣಿಗೆ ಒಟ್ಟು 1 ಕಿ.ಮೀ.ನಷ್ಟು ದೂರ ಶೋಭಾಯಾತ್ರೆ ಸಂಚರಿಸುತ್ತದೆ.

ಮಕ್ಕಳ ಗಣಪ 
ಸುಮಾರು 50ಕ್ಕೂ ಅಧಿಕ ಮಕ್ಕಳು ಇಲ್ಲಿ ಸೇರುತ್ತಾರೆ. ಈಗ ಈ ಆಚರಣೆ ಪ್ರಚಾರ ಪಡೆದು ಹೊರಗಿನಿಂದಲೂ ಜನರು ಬರುತ್ತಾರೆ. 150ಕ್ಕೂ ಅಧಿಕ ಮಂದಿ ಸೇರುತ್ತಾರೆ. ಈ ಕಾರ್ಯಕ್ರಮಕ್ಕೆ ತಿಂಗಳ ಹಿಂದಿನಿಂದಲೇ ಪೂರ್ವಸಿದ್ಧತೆ ನಡೆಯುತ್ತದೆ. 

Advertisement

ವಿಶಿಷ್ಟ ಆಚರಣೆ
ನನ್ನ ಮಗ ಅಖಿ ಲೇಶ್‌ 1ನೇ ತರಗತಿಯಲ್ಲಿ ಇರುವ ಸಂದರ್ಭ ಊರಿನ ಕೆಲ ಮಕ್ಕಳು ಜತೆಗೂಡಿ ಚೌತಿ ದಿನ ಗಣೇಶನನ್ನು ವಿಶಿಷ್ಟ ರೀತಿಯಲ್ಲಿ ಆರಾಧಿಸಿದ್ದರು. ಅದು ಈಗಲೂ ಮುಂದುವರಿದಿದೆ. ಪೂಜೆ, ಮೆರವಣಿಗೆ ಎಲ್ಲವೂ ನಡೆಯುತ್ತದೆ.
– ವಿಷ್ಣು ಕಿರಣ್‌ ಭಟ್‌,
ನೀರಬಿದಿರೆ 

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next