ಬೆಳಗಾವಿ: ಗಣೇಶೋತ್ಸವಕ್ಕೆ ಇನ್ನೂ 39 ದಿನಗಳು ಬಾಕಿ ಇರುವಾಗಲೇ ಬೆಳಗಾವಿ ನಗರದ ಗಣೇಶ ಯುವಕ ಮಂಡಳದವರು ಶ್ರೀ ಗಣೇಶನನ್ನು ಪ್ರತಿಷ್ಠಾಪಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ನಗರದ ಮಹಾದ್ವಾರ ರಸ್ತೆಯ ಮರಾಠಾ ಗಲ್ಲಿ ಮೂರನೇ ಕ್ರಾಸ್ ನ ಯುವಕ ಮಂಡಳದವರು ವಾದ್ಯ ಮೇಳದೊಂದಿಗೆ ಶನಿವಾರ ಗಣೇಶ ಮೂರ್ತಿಯ ಮೆರವಣಿಗೆ ನಡೆಸಿ ಪ್ರತಿಷ್ಠಾಪಿಸಿದ್ದಾರೆ. ಸುಮಾರು ಮೂರು ಗಂಟೆಗಳ ಕಾಲ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.
39 ದಿನಗಳ ಮೊದಲೇ ಬೆಳಗಾವಿಯಲ್ಲಿ ಗಣೇಶ ಪ್ರತಿಷ್ಠಾಪನೆ ಆಗುತ್ತಿರುವುದು ನಾಗರಿಕರಲ್ಲಿ ಕುತೂಹಲ ಹಾಗೂ ಅಚ್ಚರಿ ಮೂಡಿಸಿದೆ. ಮಹಾದ್ವಾರ ರಸ್ತೆಯ ಮರಾಠಾ ಗಲ್ಲಿ ಗಣೇಶ ಮಂಡಳ ಈ ಬಾರಿ 11 ನೇ ವಸಂತಕ್ಕೆ ಕಾಲಿಟ್ಟಿದೆ. ಹೀಗಾಗಿ ಇನ್ಫಿನಿಟಿ ಪ್ರೋಡಕ್ಷನ್ ಗ್ರುಪ್‌ದಿಂದ ಈ ಬಾರಿ ಗಣೇಶನ ವಿಡಿಯೋ ಚಿತ್ರೀಕರಣ ಮಾಡಲಿದೆ. ಈ ವಿಡಿಯೋ ತಯಾರಿಸಲು ಆಗಸ್ಟ್ 15ರ ವರೆಗೆ ಕಾಲಾವಕಾಶ ನೀಡಲಾಗಿದೆ. ಈ ಅವಧಿಯೊಳಗೆ ವಿಡಿಯೋ ಎಡಿಟಿಂಗ್ ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ 39 ದಿನಗಳ ಮುಂಚೆಯೇ ಗಣೇಶನನ್ನು ಪ್ರತಿಷ್ಠಾಪಿಸಲಾಗಿದೆ.
ಆ. 5ರಿಂದ ಚಿತ್ರೀಕರಣ ಆರಂಭವಾಗಲಿದ್ದು, ಅದರಂತೆ ಮಂಟಪದಲ್ಲಿಯೇ ಗಣೇಶ ಮೂರ್ತಿಯನ್ನು ಇಡಲಾಗಿದೆ. ವಿಡಿಯೋ ಚಿತ್ರೀಕರಣ ಮುಗಿದ ಬಳಿಕ ಮತ್ತೆ ಮೂರ್ತಿಯನ್ನು ಅಲ್ಲಿಂದ ತೆಗೆದು ಸೆ.13ರಂದು ಗಣೇಶೋತ್ಸವ ದಿನ ಗಣೇಶ ಮೂರ್ತಿಯನ್ನು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಪುನಃ ಪ್ರತಿಷ್ಠಾಪನೆ ಮಾಡುವ ಬಗ್ಗೆ ಮಂಡಳದವರು ನಿರ್ಧರಿಸಿದ್ದಾರೆ. ಬಾಪಟ ಗಲ್ಲಿಯ ಮೂರ್ತಿಕಾರ ಸಂಜಯ ಕಿಲ್ಲೇಕರ ಮೂರ್ತಿ ತಯಾರಿಸಿದ್ದಾರೆ. ಶನಿವಾರ ಮೂರ್ತಿಯ ಮೆರವಣಿಗೆ ಸಮಾದೇವಿ ಗಲ್ಲಿ, ಯಂದೇಖೂಟ, ಕಾಲೇಜು ರಸ್ತೆ, ಧರ್ಮವೀರ ಸಂಬಾಜಿ ವೃತ್ತ, ಟಿಳಕ ಚೌಕ ಮೂಲಕ ಮುಜಾವರ ಗಲ್ಲಿ, ಪಾಟೀಲ ಗಲ್ಲಿ, ಶನಿಮಂದಿರ, ಕಪಿಲೇಶ್ವರ ರೇಲ್ವೆ ಮೇಲ್ಸೇತುವೆ ಮಾರ್ಗದಿಂದ ಮಹಾದ್ವಾರ ರಸ್ತೆಯ ಮರಾಠಾ ಗಲ್ಲಿವರೆಗೆ ಮೆರವಣಿಗೆ ನಡೆಸಲಾಯಿತು. ಈ ಮುನ್ನ ಗಣೇಶನಿಗೆ ಪೂಜೆ ಸಲ್ಲಿಸಲಾಯಿತು.
ಮಂಡಳದ ಅಧ್ಯಕ್ಷ ನರೇಂದ್ರ ಜಾಧವ, ಕಾರ್ಯಕರ್ತರಾದ ಸಂದೀಪ ಭಾತಖಾಂಡೆ, ವಿವೇಕ ಪಾಟೀಲ, ರಾಜು ಭಾತಖಾಂಡೆ, ಅಶೋಕ ಖವರೆ, ದೌಲತ್ ಜಾಧವ, ವೃಷಬ್ ಚಿಖಲಕರ, ಕೃಷ್ಣಾ ಪ್ರಧಾನ ಸೇರಿದಂತೆ ಇತರರು ಇದ್ದರು.