ಹುಬ್ಬಳ್ಳಿ: ಹು-ಧಾ ಮಹಾನಗರದಲ್ಲಿ ಹದಗೆಟ್ಟಿರುವ ರಸ್ತೆ ದುರಸ್ತಿಗೆ ಒತ್ತಾಯಿಸಿ ಸೋಮವಾರ ಕೊಪ್ಪಿಕರ ರಸ್ತೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಕಲ್ಪ ಗಣಹೋಮ ಮಾಡುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು.
ಕಳೆದ ಕೆಲವು ವರ್ಷಗಳಿಂದ ಅವಳಿನಗರದಲ್ಲಿ ರಸ್ತೆಗಳೆಲ್ಲ ಅಧೋಗತಿಗೆ ಸಿಲುಕಿದ್ದು, ತಗ್ಗು ಗುಂಡಿಗಳದ್ದೇ ದರ್ಶನ ಎನ್ನುವಂತಾಗಿದೆ. ಕಳೆದ ಮೂರು ಅವಧಿಗಳಿಂದ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು, ಸ್ಥಳೀಯವಾಗಿ ಮಾಜಿ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಇದ್ದರೂ ರಸ್ತೆಗಳ ದುರಸ್ತಿ ಇಲ್ಲವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ ಮಾತನಾಡಿ, ಅವಳಿ ನಗರದಲ್ಲಿನ ಬಹುತೇಕ ರಸ್ತೆಗಳ ಕಾಮಗಾರಿ ವರ್ಷಗಳೇ ಉರುಳಿದ್ದರೂ ಪೂರ್ಣಗೊಂಡಿಲ್ಲ. ಬಿಜೆಪಿ ಮುಖಂಡರ ಕುಟುಂಬದ ಮದುವೆ, ಕಾರ್ಯಕಾರಣಿ ಸೇರಿದಂತೆ ಹಲವು ಕಾರ್ಯಕ್ರಮಗಳು ತಿಂಗಳಿಗೊಂದರಂತೆ ನಡೆದರೆ ಅವಳಿನಗರ ರಸ್ತೆ ಸುಧಾರಣೆ ಕಾಣಬಹುದು ಎಂದು ವ್ಯಂಗ್ಯವಾಡಿದರು. ಮಹಾನಗರದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಣಿ ನಡೆಯುತ್ತಿದ್ದು, ರಸ್ತೆಗಳಿಗೆ ತೇಪೆ ಹಚ್ಚುವ ಕೆಲಸ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ ಮಾತನಾಡಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಬಿಜೆಪಿ ಪ್ರಮುಖ ಪದಾಧಿಕಾರಿಗಳು ನಗರದವರೇ ಇದ್ದಾರೆ. ಆದರೂ ರಸ್ತೆ ಸರಿಪಡಿಸಲು ಸಾಧ್ಯವಾಗಿಲ್ಲ. ಕೂಡಲೇ ಗುಂಡಿ ಹಾಗೂ ಧೂಳು ಮುಕ್ತ ನಗರವಾಗಬೇಕು ಎಂದು ಆಗ್ರಹಿಸಿದರು. ಚಂದ್ರಶೇಖರ ಹಿರೇಮಠ, ಸತೀಶ ಇಟಗಿಮಠ ಸ್ವಾಮೀಜಿ ಹೋಮ ಕಾರ್ಯ ನಡೆಸಿಕೊಟ್ಟರು.
ಪಾಲಿಕೆ ಸದಸ್ಯರಾದ ಸಂದೀಲ ಕುಮಾರ, ಪ್ರಕಾಶ ಕುರಹಟ್ಟಿ, ಇಕ್ಬಾಲ್ ನವಲೂರ, ಆರಿಫ ಭದ್ರಾಪುರ, ಸುವರ್ಣಾ ಕಲ್ಲಕುಂಟ್ಲ, ಬಸವರಾಜ ಕಿತ್ತೂರ, ರಫೀಕ್ ದರ್ಗಾದ, ಮೋಹನ ಹಿರೇಮನಿ ಇನ್ನಿತರರಿದ್ದರು.