Advertisement

ಗಾಲೆ ಟೆಸ್ಟ್‌: ಲಂಕೆಗೆ 462 ರನ್‌ ಸವಾಲು

01:11 PM Nov 09, 2018 | |

ಗಾಲೆ: ರಂಗನ ಹೆರಾತ್‌ ಅವರ ವಿದಾಯ ಟೆಸ್ಟ್‌ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ಗೆಲುವಿಗಾಗಿ 462 ರನ್ನುಗಳ ಕಠಿನ ಗುರಿ ಪಡೆದಿದೆ. ಪ್ರವಾಸಿ ಇಂಗ್ಲೆಂಡ್‌ ಎದುರಿನ ಈ ಮುಖಾಮುಖೀ ಇನ್ನೂ 2 ದಿನ ಕಾಣಲಿಕ್ಕಿದ್ದು, ಹೆರಾತ್‌ ಅವರಿಗೆ ಲಂಕಾ ಗೆಲುವಿನ ಉಡುಗೊರೆ ನೀಡೀತೇ ಎಂಬುದೊಂದು ಕುತೂಹಲ.

Advertisement

ಆರಂಭಕಾರ ಕೀಟನ್‌ ಜೆನ್ನಿಂಗ್ಸ್‌ ಅವರ ಜೀವನಶ್ರೇಷ್ಠ ಬ್ಯಾಟಿಂಗ್‌ ಸಾಹಸದಿಂದ ಇಂಗ್ಲೆಂಡ್‌ 6ಕ್ಕೆ 322 ರನ್‌ ಗಳಿಸಿ ದ್ವಿತೀಯ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿತು. ಗುರುವಾರದ ಕೊನೆಯ ಅವಧಿಯಲ್ಲಿ 7 ಓವರ್‌ಗಳ ಬ್ಯಾಟಿಂಗ್‌ ನಡೆಸಿದ ಶ್ರೀಲಂಕಾ ವಿಕೆಟ್‌ ನಷ್ಟವಿಲ್ಲದೆ 15 ರನ್‌ ಮಾಡಿದೆ.

ಜೆನ್ನಿಂಗ್ಸ್‌ ಅಜೇಯ 146
13ನೇ ಟೆಸ್ಟ್‌ ಆಡುತ್ತಿರುವ ಎಡಗೈ ಆರಂಭಕಾರ ಕೀಟನ್‌ ಜೆನ್ನಿಂಗ್ಸ್‌ ಅಜೇಯ 146 ರನ್‌ ಬಾರಿಸಿದರು. ಇದು ಅವರ 2ನೇ ಶತಕ ಹಾಗೂ ಅತ್ಯುತ್ತಮ ಬ್ಯಾಟಿಂಗ್‌ ಸಾಧನೆ. 280 ಎಸೆತ ಎದುರಿಸಿದ ಜೆನ್ನಿಂಗ್ಸ್‌ 9 ಬೌಂಡರಿ ಹೊಡೆದರು. ಬೆನ್‌ ಸ್ಟೋಕ್ಸ್‌ 62, ಜಾಸ್‌ ಬಟ್ಲರ್‌ 35 ಹಾಗೂ ಬೆನ್‌ ಫೋಕ್ಸ್‌ 37 ರನ್‌ ಹೊಡೆದರು. ಜೆನ್ನಿಂಗ್ಸ್‌- ಸ್ಟೋಕ್ಸ್‌ 4ನೇ ವಿಕೆಟ್‌ ಜತೆಯಾಟದಲ್ಲಿ 107 ರನ್‌ ಒಟ್ಟುಗೂಡಿಸಿದರು.

ವಿಕೆಟ್‌ ನಷ್ಟವಿಲ್ಲದೆ 38 ರನ್‌ ಮಾಡಿದಲ್ಲಿಂದ ಇಂಗ್ಲೆಂಡ್‌ 3ನೇ ದಿನನಾಟ ಮುಂದುವರಿಸಿತ್ತು. ಮೊಯಿನ್‌ ಅಲಿ ಮತ್ತು ನಾಯಕ ಜೋ ರೂಟ್‌ ತಲಾ 3 ರನ್‌ ಗಳಿಸಿ ಬೇಗನೇ ಪೆವಿಲಿಯನ್‌ ಸೇರಿಕೊಂಡ ಬಳಿಕ ಕ್ರೀಸಿಗೆ ಅಂಟಿಕೊಂಡ ಜೆನ್ನಿಂಗ್ಸ್‌ ಜಬರ್ದಸ್ತ್ ಬ್ಯಾಟಿಂಗ್‌ ಪ್ರದರ್ಶನವಿತ್ತರು. 231 ಎಸೆತಗಳಲ್ಲಿ ಅವರ ಶತಕ ಪೂರ್ತಿಗೊಂಡಿತು. ಶ್ರೀಲಂಕಾ ಪರ ದಿಲ್ರುವಾನ್‌ ಪೆರೆರ ಮತ್ತು ರಂಗನ ಹೆರಾತ್‌ ತಲಾ 2 ವಿಕೆಟ್‌ ಉರುಳಿಸಿದರು.

ಸಂಕ್ಷಿಪ್ತ ಸ್ಕೋರ್‌
ಇಂಗ್ಲೆಂಡ್‌-342 ಮತ್ತು 6 ವಿಕೆಟಿಗೆ ಡಿಕ್ಲೇರ್‌ 322 (ಜೆನ್ನಿಂಗ್ಸ್‌ ಔಟಾಗದೆ 146, ಸ್ಟೋಕ್ಸ್‌ 62, ಫೋಕ್ಸ್‌ 37, ಬಟ್ಲರ್‌ 35, ಹೆರಾತ್‌ 59ಕ್ಕೆ 2, ಪೆರೆರ 94ಕ್ಕೆ 2). ಶ್ರೀಲಂಕಾ-203 ಮತ್ತು ವಿಕೆಟ್‌ ನಷ್ಟವಿಲ್ಲದೆ 15 ರನ್‌ 

Advertisement
Advertisement

Udayavani is now on Telegram. Click here to join our channel and stay updated with the latest news.

Next