ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗಾಳಿಪಟ-2 ಚಿತ್ರತಂಡ ಈಗ ತನ್ನ ಶೂಟಿಂಗ್ ಪ್ಲಾನ್‌ನಲ್ಲಿ ಬದಲಾವಣೆ ಮಾಡಿಕೊಂಡಿದೆ. ಅದು ಫಾರಿನ್ ಟ್ರಿಪ್ ಅನ್ನು ಕೈ ಬಿಟ್ಟಿದೆ. ಆರಂಭದಲ್ಲಿ ಗಾಳಿಪಟ-2 ಚಿತ್ರದ ಚಿತ್ರೀಕರಣ ವಿದೇಶಗಳಲ್ಲಿ ನಡೆಯಲಿದೆ ಎಂದು ಹೇಳಲಾಗಿತ್ತು. ಚಿತ್ರತಂಡ ಕೂಡಾ ಆ ಬಗ್ಗೆ ತಯಾರಿ ನಡೆಸಿತ್ತು. ಆದರೆ, ಕೊರೊನಾ ಎಫೆಕ್ಟ್ನಿಂದಾಗಿ ವಿದೇಶ ಯಾತ್ರೆ ಕೈ ಬಿಟ್ಟಿದೆ. ಹಾಗಾದರೆ ವಿದೇಶ ಬದಲು ಎಲ್ಲಿ ಚಿತ್ರೀಕರಣ ಮಾಡುತ್ತಾರೆ ಎಂದು ನೀವು ಕೇಳಬಹುದು.
ಅದಕ್ಕೆ ಉತ್ತರ ಹಿಮಾಚಲ ಪ್ರದೇಶ. ಹೌದು, ಲಾಕ್ ಡೌನ್ ಕ್ಲಿಯರ್ ಆಗಿ ಚಿತ್ರೀಕರಣಕ್ಕೆ ಅನುಮತಿ ಸಿಕ್ಕ ನಂತರ ಚಿತ್ರತಂಡ ಹಿಮಾಚಲ ಪ್ರದೇಶದತ್ತ ಪ್ರಯಾಣ ಬೆಳೆಸಲಿದೆ. ಆರಂಭದಲ್ಲಿ ಚಿತ್ರತಂಡದವರು ಇದೇ ಲೊಕೇಶನ್ ಇಷ್ಟಪಟ್ಟಿದ್ದರಂತೆ. ಆದರೆ, ಆ ನಂತರ ಆದ ಬದಲಾವಣೆಯಲ್ಲಿ ವಿದೇಶ ಸೇರಿಕೊಂಡಿತ್ತು. ಈಗ ಮತ್ತೆ ಮತ್ತೆ ಹಿಮಾಚಲ ಪ್ರದೇಶವೇ ಸೇರಿ ಕೊಂಡಿದೆ. ಸದ್ಯ ನಿರ್ದೇಶಕ ಯೋಗರಾಜ್ ಭಟ್ ತಮ್ಮ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಆರಂಭಿಸಿದ್ದದಾರೆ.
ಈ ಬಗ್ಗೆ ಮಾತನಾಡುವ ಯೋಗರಾಜ್ ಭಟ್, ಗಾಳಿಪಟ 2 ಚಿತ್ರದ ಡಬ್ಬಿಂಗ್ ಕೆಲಸ ಶುರುವಾಗಿದೆ. ಈಗಾಗಲೇ ಚಿತ್ರದ ಪೂರ್ಣಗೊಂಡ ಭಾಗಗಳನ್ನು ಡಬ್ ಮಾಡಲು ಪ್ಲಾನ್ ಮಾಡಿಕೊಂಡಿದ್ದು, ಚಿತ್ರದ ಕಲಾವಿದರು ಒಬ್ಬೊಬ್ಬರಾಗಿ ಡಬ್ಬಿಂಗ್ ಮಾಡುತ್ತಿದ್ದಾರೆ. ಇನ್ನು ರೋಮ್ಯಾಂಟಿಕ್ ಕಾಮಿಡಿ ಕಥಾಹಂದರ ಹೊಂದಿರುವ ಗಾಳಿಪಟ 2 ಚಿತ್ರವನ್ನು ಸೂರಜ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ರಮೇಶ್ ರೆಡ್ಡಿ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಗಣೇಶ್, ದಿಗಂತ್ ಮತ್ತು ಪವನ್ ಕುಮಾರ್ ಮುಖ್ಯ ಪಾತ್ರದಲ್ಲಿದ್ದಾರೆ.
ಉಳಿದಂತೆ ವೈಭವಿ ಶಾಂಡಿಲ್ಯ, ಸಂಯುಕ್ತ ಮೆನನ್, ಶರ್ಮೀಲಾ ಮಾಂಡ್ರೆ ಮತ್ತು ನಿಶ್ವಿಕ ನಾಯ್ಡು ಮತ್ತಿತರರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ, ಸಂತೋಷ್ ರೈ ಪತಾಜೆ ಛಾಯಾಗ್ರಹಣವಿದೆ. ಇತ್ತೀಚೆಗೆ ಸುxಡಿಯೋದಲ್ಲಿ ದಿಗಂತ್, ಗಣೇಶ್, ಜಗ್ಗೇಶ್ ಹಾಗೂ ಯೋಗರಾಜ್ ಭಟ್ ಇರುವ ಫೋಟೋ ಹರಿದಾಡುವ ಮೂಲಕ ಚಿತ್ರದ ಕೆಲಸಗಳಿಗೆ ಚಾಲನೆ ನೀಡಿದ್ದನ್ನು ಹೇಳಿಕೊಂಡಿತ್ತು ಚಿತ್ರತಂಡ.