ಗಜೇಂದ್ರಗಡ: ಕೋಟೆ ನಾಡಿನ ಹೃದಯ ಭಾಗದ ವೃತ್ತದಲ್ಲಿ ಅಳವಡಿಸಿದ ಲೋಹದ ಕುದುರೆಗಳು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ತಳಮಟ್ಟದಿಂದ 18 ಅಡಿ ಎತ್ತರದಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿರುವ ನಾಲ್ಕು ಲೋಹದ ಕುದುರೆ ವಾಹನ ಸವಾರರಿಗೆ ಯಮಧೂತರಂತೆ ನಿಂತಿವೆ.
ಪಟ್ಟಣದ ಕಾಲಕಾಲೇಶ್ವರ ವೃತ್ತದ ಬಳಿ 2013 ಏ. 15ರಂದು ರಾತ್ರೋರಾತ್ರಿ ತಲೆ ಎತ್ತಿರುವ ಹಿತ್ತಾಳೆ, ತಾಮ್ರ ಮತ್ತು ಲೋಹದಿಂದ ನಿರ್ಮಿಸಿರುವ ನಾಲ್ಕು ಕುದುರೆಗಳ ಸ್ಥಾಪನೆ ಸಂಪೂರ್ಣ ಅವೈಜ್ಞಾನಿಕವಾಗಿದೆ. ಪರಿಣಾಮ ನಿತ್ಯ ವಾಹನ ಸವಾರರು ಕಿರಿ ಕಿರಿ ಅನುಭವಿಸುವಂತಾಗಿದೆ. ಕೈಯಲ್ಲಿ ಜೀವ ಹಿಡಿದುಕೊಂಡು ಸಂಚರಿಸಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.
ಅವೈಜ್ಞಾನಿಕ ಕುದುರೆ ಅಳವಡಿಕೆ: ಕಾಲಕಾಲೇಶ್ವರ ವೃತ್ತದಲ್ಲಿ ನಾಲ್ಕು ಲೋಹದ ಕುದರೆಗಳಿಂದಾಗಿ ಎದುರು ಬದಿರು ಸಂಚರಿಸುವ ವಾಹನ ಸವಾರರಿಗೆ ಅಪಘಾತಕ್ಕೆ ಎಡೆಮಾಡಿಕೊಡಲಿದೆ. ಈ ಕುದುರೆಗಳನ್ನು ವೃತ್ತದ ತಳ ಭಾಗದಿಂದ 18 ಅಡಿ ಎತ್ತರದಲ್ಲಿ ನಿರ್ಮಿಸಿರುವುದು ಅವೈಜ್ಞಾನಿಕ. ಇದು ಸಂಚಾರಕ್ಕೆ ಅಡೆತಡೆ ಉಂಟು ಮಾಡಿದೆ ಎಂಬುದು ಸಾರ್ವಜನಿಕರ ದೂರಾಗಿದೆ.
ಟ್ರಾಫಿಕ್ ಸಿಗ್ನಲ್ ಸ್ಥಗಿತ: ಸದಾ ಜನದಟ್ಟಣೆ, ವಾಹನದಟ್ಟನೆ ಇರುವ ಕಾಲಕಾಲೇಶ್ವರ ವೃತ್ತದಲ್ಲಿ ಅಳವಡಿಸಿದ ಟ್ರಾಫಿಕ್ ಸಿಗ್ನಲ್ ದೀಪಗಳು ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸದೆ ಸ್ಥಗಿತಗೊಂಡಿವೆ. ಜೊತೆಗೆ ವೃತ್ತದಲ್ಲಿ ಸಂಚಾರ ವ್ಯವಸ್ಥೆ ಸುಗಮಗೊಳಿಸುವ ಪೊಲೀಸ್ ಸಿಬ್ಬಂದಿ ಸರಿಯಾಗಿ ಕೆಲಸ ನಿರ್ವಹಿಸುವುದಿಲ್ಲ. ಇದರಿಂದ ವಾಹನ ಸವಾರರು ಸಂಚಾರಿ ನಿಯಮ ಗಾಳಿಗೆ ತೂರಿ ಬೇಕಾಬಿಟ್ಟಿ ಚಲಾಯಿಸುತ್ತಾರೆ. ಇದೂ ಕೂಡಾ ಅಪಘಾತ ಹೆಚ್ಚಳಕ್ಕೆ ಕಾರಣವಾಗಿದೆ.
ಅಪಘಾತಕ್ಕೆ ಆಹ್ವಾನಿಸುವ ಕುದುರೆ: ಜೋಡು ರಸ್ತೆಯಿಂದ ಬಸ್ ನಿಲ್ದಾಣಕ್ಕೆ ತೆರಳುವ ವಾಹನಗಳಿಗೆ ಎದುರು-ಬದಿರು ಆಗಮಿಸುವ ವಾಹನಗಳು ಗೋಚರಿಸುವುದಿಲ್ಲ. ಇನ್ನು ರೋಣ ರಸ್ತೆಯಿಂದ ಕುಷ್ಠಗಿ ರಸ್ತೆ ಮಾರ್ಗಕ್ಕೆ ತೆರಳುವ ವಾಹನಗಳಿಗೆ ಎದುರಿನ ಸಂಚರಕ್ಕೆ ವೃತ್ತ ಮಧ್ಯಭಾಗದ ಭೂಮಿಯಿಂದ 18 ಅಡಿರಷ್ಟು ಎತ್ತರದಲ್ಲಿ ಬೃಹದಾಕಾರದಲ್ಲಿ ಪೂರ್ವಾಭಿಮುಖವಾಗಿ ನಿಂತಿರುವ ನಾಲ್ಕು ಲೋಹದ ಕುದುರೆಗಳಿಂದ ವಾಹನ ಸವಾರರ ಕಣ್ ಕಟ್ಟುವಂತೆಯಾಗಿದೆ. ಇದು ಅಪಘಾತಕ್ಕೆ ಕಾರಣವಾಗುತ್ತಿದೆ.
ಸುಗಮ ಸಂಚಾರದ ದೃಷ್ಟಿಯಿಂದ ಕಾಲಕಾಲೇಶ್ವರ ವೃತ್ತವನ್ನು ಹಿರಿದು ಮಾಡುವುದಲ್ಲದೇ ನಾಲ್ಕು ದಿಕ್ಕಿನಿಂದ ಬರುವ ವಾಹನಗಳನ್ನು ಕಾಣುವಂತೆ ವೃತ್ತವನ್ನು ಪುನರ್ ನಿರ್ಮಾಣಕ್ಕೆ ಮುಂದಾಗಬೇಕು. ಇದನ್ನು ಯಾರೂ ಪ್ರತಿಷ್ಠೆಯನ್ನಾಗಿ ಪಡೆಯದೇ ಜನಸಾಮಾನ್ಯರ ಜೀವ ರಕ್ಷಣೆಗೆ ಆದ್ಯತೆ ನೀಡಬೇಕು.
ಎಂ.ಎಸ್. ಹಡಪದ,
ಸಿಪಿಐ(ಎಂ) ಮುಖಂಡ
ಜನದಟ್ಟಣೆಯ ಕೇಂದ್ರ ಸ್ಥಳವಾದ ಗಜೇಂದ್ರಗಡದ ಕಾಲಕಾಲೇಶ್ವರ ವೃತ್ತದಲ್ಲಿ ಪಾದಾಚಾರಿಗಳು ರಸ್ತೆ ದಾಟಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಟ್ರಾಫಿಕ್ ಸಿಗ್ನಲ್ ಆರಂಭಕ್ಕೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು.
ಭೀಮಣ್ಣ ಇಂಗಳೆ, ಜಯ ಕರ್ನಾಟಕ ಸಂಘಟನೆ ತಾಲೂಕಾಧ್ಯಕ್ಷ
ಡಿ.ಜಿ. ಮೋಮಿನ್