Advertisement

ಮೇವು ಬೇಕ್ರಪ್ಪೋ..ಮೇವು..!

11:13 AM Feb 14, 2019 | |

ಗಜೇಂದ್ರಗಡ: ಸತತ ಬರದ ಬವಣೆಗೆ ಸಿಲುಕಿ ಒಂದಿಲ್ಲೊಂದು ಸಮಸ್ಯೆಗೆ ಸಿಲುಕಿರುವ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರು ತಮ್ಮ ಉದರ ತುಂಬಿಕೊಳ್ಳುವುದರ ಜತೆಗೆ ತಮ್ಮ ಜೀವನದ ಒಡನಾಡಿ ಜಾನುವಾರುಗಳಿಗೆ ಮೇವು ಒದಗಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ.

Advertisement

ಕಳೆದ ನಾಲ್ಕು ವರ್ಷಗಳಿಂದ ಮಳೆ ಪ್ರಮಾಣ ವಾಡಿಕೆಗಿಂತ ಕಡಿಮೆಯಾಗುತ್ತಿರುವುದು ಈ ಭಾಗದ ರೈತರನ್ನು ಚಿಂತೆಗೀಡು ಮಾಡಿದೆ. ಬಹುತೇಕ ರೈತರು ಮಳೆಯಾಶ್ರಿತ ಭೂಮಿ ಹೊಂದಿದ್ದಾರೆ. ಮಳೆ ಸುರಿಯುವ ಪ್ರಮಾಣದ ಆಧಾರದ ಮೇಲೆ ಪಾರಂಪರಿಕ ಬೆಳೆಗಳಾದ ಶೇಂಗಾ, ಜೋಳ, ಬದಲಾಗಿ ಸೂರ್ಯಕಾಂತಿ, ಈರುಳ್ಳಿ, ಮೆಣಸಿನಕಾಯಿ, ಹತ್ತಿ, ಮೆಕ್ಕೆಜೋಳದಂತಹ ವಾಣಿಜ್ಯ ಬೆಳೆ ಬೆಳೆಯಲು ಆರಂಭಿಸಿದ್ದಾರೆ. ಇದರ ಪರಿಣಾಮ ಜಾನುವಾರುಗಳಿಗೆ ಮೇವಿನ ಸಮಸ್ಯೆ ತಲೆದೋರಿದೆ. ಇದರ ಪರಿಣಾಮ ಶೇಂಗಾ ಹೊಟ್ಟು, ಜೋಳದ ಸೊಪ್ಪಿ, ಭತ್ತದ ಹುಲ್ಲಿಗೆ ಬೆಲೆ ಹೆಚ್ಚಳವಾಗಿರುವುದು ರೈತರನ್ನು ಕಂಗೆಡಿಸಿದೆ.

ಈಗಾಗಲೇ ತಾಲೂಕಿನಾದ್ಯಂತ ಬಿಸಿಲಿನ ಪ್ರಖರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜಾನುವಾರುಗಳಿಗೆ ಮೇವಿನ ಕೊರತೆ ಜತೆ ನೀರಿನ ತಾಪತ್ರಾಯವೂ   ಎದುರಾಗಿದೆ. ಈ
ಹಿನ್ನೆಲೆಯಲ್ಲಿ ¸ಬೆಲೆ  ಎಷ್ಟೇ ಆದರೂ ಸರಿ ಜಾನುವಾರುಗಳಿಗೆ ಹೊಟ್ಟು, ಮೇವು ಸಂಗ್ರಹಿಸುವಲ್ಲಿ ರೈತರು ನಿರತರಾಗಿದ್ದಾರೆ. ಕಳೆದ ವರ್ಷ ಶೇಂಗಾ ಹೊಟ್ಟು ಟ್ರ್ಯಾಕ್ಟರ್‌ ಒಂದಕ್ಕೆ 4 ಸಾವಿರ ರೂ. ಇತ್ತು. ಆದರೆ, ಪ್ರಸಕ್ತ ವರ್ಷ 6 ರಿಂದ 7 ಸಾವಿರ ರೂ. ಆಗಿದೆ. ಅದರಂತೆ ಜೋಳದ ಮೇವು ಟ್ರ್ಯಾಕ್ಟರ್‌ ಒಂದಕ್ಕೆ 3 ರಿಂದ 4 ಸಾವಿರ ರೂ. ಇತ್ತು. ಆದರೆ, ಈ ವರ್ಷ 5 ರಿಂದ 6 ಸಾವಿರ ರೂ. ಆಗಿದೆ. ಕೆಲ ನೀರಾವರಿ ಆಶ್ರಿತ ಜಮೀನಿನಲ್ಲಿ ಬೆಳೆದ ಜೋಳದ ಮೇವಿಗೆ ಭಾರೀ ಬೇಡಿಕೆ ಬಂದಿದೆ. ಪರಿಣಾಮ ರೈತ ದಿನ ಬೆಳಗಾದರೆ ಯಾವ ಹೊಲದಲ್ಲಿ ಜೋಳ, ಶೇಂಗಾ, ಗೋಧಿ, ಕಡಲೆ ರಾಶಿ ನಡೆದಿದೆ ಎಂದು ಹೊಲದಿಂದ ಹೊಲಕ್ಕೆ ಅಲೆದಾಡಿ ಹೊಟ್ಟು, ಮೇವು ಖರೀದಿಸಿ ಸಂಗ್ರಹಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಶಾಶ್ವತ ಮೇವು ಬ್ಯಾಂಕ್‌ ತೆರೆಯಲಿ
ಬರ ಪೀಡಿತ ಪ್ರದೇಶ ಗಜೇಂದ್ರಗಡ ತಾಲೂಕಿನಲ್ಲಿ ಜಾನುವಾರುಗಳ ರಕ್ಷಣೆಗೆ ಶಾಶ್ವತ ಮೇವು ಬ್ಯಾಂಕ್‌ ಸ್ಥಾಪಿಸಬೇಕು. ಆ ಮೂಲಕ ಹೊಟ್ಟು, ಮೇವು ಸಂಗ್ರಹಿಸಿ ಪ್ರಕೃತಿ ವಿಕೋಪ ಸಂದರ್ಭದಲ್ಲೂ ಪೂರೈಸಬೇಕು. ಸರ್ಕಾರ ಮುಂದಾಲೋಚನೆ ಇಲ್ಲದೆ ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡಿದರೆಂಬಂತೆ ಬರದ ಭೀಕರತೆ ಎದುರಾದಾಗಲೇ ಎಲ್ಲವನ್ನೂ ಹುಡುಕಲು ಹೊರಡುವುದು ಅವೈಜ್ಞಾನಿಕ. ಇನ್ನಾದ್ರೂ ಸರ್ಕಾರ ಇಂತಹ ಮುಂದಾಲೋಚನೆ ಮಾಡಿ ಜಾನುವಾರುಗಳ ರಕ್ಷಣೆಗೆ ಮುಂದಾಗುವುದು ಸೂಕ್ತ ಎಂಬುದು ಕೃಷಿ ತಜ್ಞರ ಅಭಿಪ್ರಾಯವಾಗಿದೆ.

ನಾವು ಮನುಷ್ಯರು, ಹೊಟ್ಟೆ ಪಾಡಿಗೆ ಎಲ್ಲಾದ್ರೂ ಹೋಗಿ ಬದುಕಿಕೊಳ್ತೀವಿ ಆದರೆ, ನಮ್ಮ ಭೂಮಿ ಹದಾ ಮಾಡೋ ಬಸವಣ್ಣಗ ಹೊಟ್ಟು, ಮೇವಿಲ್ಲಂದ್ರ ಬದುಕೋದು ಕಷ್ಟ ಆಕ್ಕೈತಿ. ಹಿಂಗಾಗಿ ಹೆಚ್ಚು ರೊಕ್ಕಾ ಕೊಟ್ಟಾದ್ರೂ ಸರಿ ಜೋಳದ ಕಣಕಿ(ಮೇವು) ಖರೀದಿಸೂದು ಅನಿವಾರ್ಯ ಆಗೈತಿ.
 ಮಲ್ಲಪ್ಪ ತಳವಾರ, ರೈತ

Advertisement

ನಾವು ಎಲ್ಲಾದ್ರೂ ತಿಂದು ಬದುಕತೀವಿ. ಆದ್ರ ಭೂತಾಯಿ ಸೇವಾ ಮಾಡೋ ಬಸವಣ್ಣಗ ಹೊಟ್ಟು ಮೇವು ಇಲ್ಲಂದ್ರ ಹ್ಯಾಂಗ ಬದಕ್ತಾವು. ಅದಕ್ಕ ದುಬಾರಿ ರೊಕ್ಕಾ ಕೊಟ್ಟು ಹೊಟ್ಟು ಮೇವು ಖರೀದಿಸೀವಿ.
ಬಸಪ್ಪ ನಡುವಿನಮನಿ, ರೈತ

ಬರ ನಿರ್ವಹಣೆಗೆ ಜಿಲ್ಲಾಧಿಕಾರಿಗಳು ಈಗಾಗಲೇ ಸೂಕ್ತ ನಿರ್ದೇಶನ ನೀಡಿದ್ದಾರೆ. ಅದರ ಭಾಗವಾಗಿ ಜಾನುವಾರುಗಳಿಗೆ ಮೇವೊದಗಿಸಲು ಗಜೇಂದ್ರಗಡ ತಾಲೂಕಿನಲ್ಲಿ ಮೇವು ಬ್ಯಾಂಕ್‌ ತೆರೆಯಲು ಸ್ಥಳಗಳ ಹುಡುಕಾಟದಲ್ಲಿ ತಾಲೂಕಾಡಳಿತ ನಿರತವಾಗಿದೆ.
ಗುರುಸಿದ್ದಯ್ಯ ಹಿರೇಮಠ, ತಹಶೀಲ್ದಾರ್‌

„ಡಿ.ಜಿ ಮೋಮಿನ್‌

Advertisement

Udayavani is now on Telegram. Click here to join our channel and stay updated with the latest news.

Next