Advertisement
ಕೆಲವು ದಿನಗಳ ಹಿಂದೆ ಪಶ್ಚಿಮ ಬಂಗಾಲದ ಬಕ್ಸಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗುವ ರೈಲು ಮಾರ್ಗದಲ್ಲಿ ಆನೆಗಳ ಹಿಂಡೊಂದು ರೈಲು ಹಳಿಯನ್ನು ದಾಟುತ್ತಿದ್ದ ವೇಳೆ ರೈಲು ಢಿಕ್ಕಿಯಾದ ಪರಿಣಾಮ ಮೂರು ಆನೆಗಳು ಸಾವನ್ನಪ್ಪಿದ್ದವು. ಅದೃಷ್ಟವಶಾತ್ ಈ ಅವಘಡದ ವೇಳೆ ರೈಲಿನಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರಿಗಾಗಲೀ, ರೈಲಿಗಾಗಲೀ ಯಾವುದೇ ಹಾನಿಯಾಗಿರಲಿಲ್ಲ. ಈ ದುರ್ಘಟನೆಯ ಬೆನ್ನಲ್ಲೇ ದೇಶಾದ್ಯಂತ ಮತ್ತೂಮ್ಮೆ ವನ್ಯಜೀವಿ ಸಂರಕ್ಷಿತ ಪ್ರದೇಶಗಳಲ್ಲಿ ಹಾದುಹೋಗುವ ರೈಲು ಮಾರ್ಗಗಳಲ್ಲಿ ಅಮಾಯಕ ವನ್ಯಜೀವಿಗಳು ಸಾವನ್ನಪ್ಪುತ್ತಿರುವ ಬಗೆಗೆ ಪ್ರಾಣಿಪ್ರಿಯರು ಗಂಭೀರ ಕಳವಳ ವ್ಯಕ್ತಪಡಿಸಿದ್ದೇ ಇಂತಹ ಅವಘಡಗಳಿಂದ ಆನೆಗಳ ಸಹಿತ ವನ್ಯಜೀವಿಗಳನ್ನು ರಕ್ಷಿಸಬೇಕೆಂದು ಸರಕಾರವನ್ನು ಬಲವಾಗಿ ಆಗ್ರಹಿಸಿದ್ದರು. ಇಂತಹ ದುರ್ಘಟನೆ ಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಈ ಹಿಂದಿನಿಂದಲೂ ತಲೆಕೆಡಿಸಿಕೊಳ್ಳುತ್ತಲೇ ಬಂದಿರುವ ಭಾರತೀಯ ರೈಲ್ವೇ ಈಗ ವಿನೂತನ ಸುರಕ್ಷ ಯೋಜನೆಯನ್ನು ಅನುಷ್ಠಾನಗೊಳಿಸಲು ಮುಂದಾಗಿದೆ.
ಅರಣ್ಯ ಪ್ರದೇಶಗಳಲ್ಲಿ ಹಾದುಹೋಗುವ ರೈಲು ಮಾರ್ಗಗಳಲ್ಲಿ ಸಂಚರಿಸುವ ರೈಲುಗಳಿಗೆ ಪದೇಪದೆ ಆನೆಗಳು ಢಿಕ್ಕಿ ಹೊಡೆದು ಸಾವನ್ನಪ್ಪುವ ಪ್ರಕರಣಗಳಿಗೆ ಕಡಿವಾಣ ಹಾಕಲು “ಗಜರಾಜ ಸುರಕ್ಷ ವ್ಯವಸ್ಥೆ’ಯನ್ನು ಅಭಿವೃದ್ಧಿಗೊಳಿಸಲಾಗಿದೆ. ತಂತ್ರಜ್ಞಾನ ಆಧರಿತ ಈ ವ್ಯವಸ್ಥೆಯು ಈಗಾಗಲೇ ಪರೀಕ್ಷಾ ಹಂತದಲ್ಲಿ ಯಶಸನ್ನು ಕಂಡಿದೆ. ಸದ್ಯ ಪ್ರಾಯೋಗಿಕ ಹಂತದಲ್ಲಿರುವ ಈ ವ್ಯವಸ್ಥೆಯಲ್ಲಿ ಇನ್ನಷ್ಟು ಸುಧಾರಣೆಗಳನ್ನು ತಂದು ಹಂತಹಂತವಾಗಿ ಈ ವ್ಯವಸ್ಥೆಯನ್ನು ವಿವಿಧ ರಾಜ್ಯಗಳ ಅರಣ್ಯ ಪ್ರದೇಶಗಳಲ್ಲಿ ಹಾದುಹೋಗುವ ರೈಲು ಮಾರ್ಗಗಳಲ್ಲಿ ಅಳವಡಿಸಲು ತಯಾರಿ ನಡೆಸಲಾಗುತ್ತಿದೆ. ಎಐ ಆಧಾರಿತ ತಂತ್ರಜ್ಞಾನ
ಗಜರಾಜ ಸುರಕ್ಷ ವ್ಯವಸ್ಥೆಯನ್ನು ಕೃತಕ ಬುದ್ಧಿಮತ್ತೆ ಆಧಾರಿತ ತಂತಜ್ಞಾನದಿಂದ ಅಭಿವೃದ್ಧಿಗೊಳಿಸಲಾಗಿದೆ. ಈ ಸುಧಾರಿತ ವ್ಯವಸ್ಥೆಯು ಸಂಭವನೀಯ ಅಪಘಾತ ಸಾಧ್ಯತೆಯನ್ನು ಮೊದಲೇ ಪತ್ತೆ ಹಚ್ಚಲು ಸಹಕಾರಿಯಾಗಿದೆ. ಈ ವ್ಯವಸ್ಥೆಯಿಂದ ಶೇ.99.5ರಷ್ಟು ಸಂಭಾವ್ಯ ಅಪಘಾತವನ್ನು ಪತ್ತೆ ಹಚ್ಚಬಹುದಾಗಿದೆ ಎಂದು ತಜ್ಞರು ತಿಳಿಸಿದ್ದಾರೆ. ಈ ವ್ಯವಸ್ಥೆಯಲ್ಲಿ ಸಿಗ್ನಲ್‌ಗಳ ರವಾನೆಗಾಗಿ ಆಪ್ಟಿಕಲ್ ಕೇಬಲ್ ಫೈಬರ್ಗಳನ್ನು ಬಳಸಿಕೊಳ್ಳಲಾಗುತ್ತದೆ.
Related Articles
ಕೃತಕ ಬುದ್ಧಿಮತ್ತೆ ಆಧಾರಿತ ಈ ತಂತ್ರಜ್ಞಾನ ವ್ಯವಸ್ಥೆಯನ್ನು ಪಶ್ಚಿಮ ಬಂಗಾಲ, ಒಡಿಶಾ, ಝಾರ್ಖಂಡ್, ಅಸ್ಸಾಂ, ಕೇರಳ ಹಾಗೂ ಛತ್ತೀಸ್‌ಗಢ ಮತ್ತು ತಮಿಳುನಾಡಿನ ಕೆಲವು ಪ್ರದೇಶಗಳಲ್ಲಿ ಮೊದಲ ಹಂತದಲ್ಲಿ ಅಳವಡಿಸಲಾಗುವುದು. ಮುಂದಿನ ಕೆಲವು ತಿಂಗಳುಗಳ ಒಳಗಾಗಿ ಆನೆಗಳ ಓಡಾಟ ಹೆಚ್ಚಿರುವ ರೈಲು ಮಾರ್ಗಗಳಲ್ಲಿ ಸುಮಾರು 700 ಕಿ.ಮೀ. ಗಳಷ್ಟು ರೈಲು ಹಳಿಗಳಲ್ಲಿ ಈ ಹೊಸ ವ್ಯವಸ್ಥೆಯನ್ನು ಅಳವಡಿಸಲು ರೈಲ್ವೇ ಇಲಾಖೆ ಉದ್ದೇಶಿಸಿದೆ.
Advertisement
ಹೇಗೆ ಕಾರ್ಯನಿರ್ವಹಿಸುತ್ತದೆ?ರೈಲು ಹಳಿಗಳ ಮೇಲೆ ಆನೆಗಳು ಚಲಿಸುವಾಗ ಉಂಟಾಗುವ ಕಂಪನವನ್ನು ಈ ವ್ಯವಸ್ಥೆಯು ಒತ್ತಡ ತರಂಗ (ಪ್ರಶರ್ ವೇವ್)ಗಳ ಮೂಲಕ ಗ್ರಹಿಸಿಕೊಂಡಾಗ ಅದು ಆಪ್ಟಿಕಲ್ ಫೈಬರ್ ನೆಟ್‌ವರ್ಕ್‌ನಲ್ಲಿ ಸಿಗ್ನಲ್‌ಗಳನ್ನು ಪ್ರಚೋದಿಸುತ್ತವೆ. ಅನಂತರ ರೈಲು ನಿಲ್ದಾಣದ ಅಧಿಕಾರಿಗಳಿಗೆ ಸೂಚನೆಯನ್ನು ರವಾನಿಸುತ್ತದೆ. ರೈಲ್ವೇ ಅಧಿಕಾರಿಗಳು ರೈಲಿನ ಲೋಕೋ ಪೈಲಟ್‌ಗಳಿಗೆ ಸೂಚನೆಯನ್ನು ನೀಡುತ್ತಾರೆ. ರೈಲ್ವೇ ಹಳಿಗಳ 200 ಮೀಟರ್ ದೂರದವರೆಗಿನ ವ್ಯಾಪ್ತಿಗೆ ಆನೆಗಳು ಬಂದರೆ ಈ ವ್ಯವಸ್ಥೆ ಸೂಚನೆಯನ್ನು ರವಾನಿಸುವ ಸಾಮರ್ಥ್ಯವನ್ನು ಹೊಂದಿವೆ. ವೆಚ್ಚದಾಯಕವಾದರೂ ಪರಿಣಾಮಕಾರಿ
700 ಕಿ.ಮೀ. ದೂರದ ರೈಲು ಹಳಿಗಳಲ್ಲಿ ಈ ವ್ಯವಸ್ಥೆಯ ಅಳವಡಿಕೆಗೆ 181 ಕೋಟಿ ರೂ. ಗಳಷ್ಟು ವೆಚ್ಚವನ್ನು ಅಂದಾಜಿಸಲಾಗಿದೆ. ಈ ಹೊಸ ವ್ಯವಸ್ಥೆಯು ಅಪಘಾತ ಸಂಖ್ಯೆಯನ್ನು ಕಡಿಮೆ ಮಾಡಲಿದೆ ಹಾಗೂ ಆನೆಗಳನ್ನು ರಕ್ಷಿಸುವಲ್ಲಿ ಪರಿಣಾಮಕಾರಿಯಾಗಲಿದೆ. ಈ ವ್ಯವಸ್ಥೆಯು ಈಗಾಗಲೇ ಈಶಾನ್ಯ ಗಡಿ ರೈಲ್ವೇ ವ್ಯಾಪ್ತಿಯಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ.