Advertisement

ವಿಶ್ವವಿಖ್ಯಾತ ದಸರೆಗೆ ಇಂದು ಅದ್ಧೂರಿ ಗಜಪಯಣ

09:21 PM Aug 21, 2019 | Lakshmi GovindaRaj |

ಹುಣಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಆಕರ್ಷಣೆಯ ಮುನ್ನುಡಿಯಾದ ಗಜಪಯಣ ಆರಂಭಗೊಳ್ಳುವ ನಾಗರಹೊಳೆ ಉದ್ಯಾನದ ಹೆಬ್ಟಾಗಿಲು ಬಳಿಯ ವೀರನಹೊಸಳ್ಳಿ ಗೇಟ್‌ ಹಾಗೂ ಕಾರ್ಯಕ್ರಮ ನಡೆಯುವ ಜಮೀನೊಂದರಲ್ಲಿ ಬೃಹತ್‌ ವೇದಿಕೆ ಸಿದ್ಧಗೊಂಡಿದೆ.

Advertisement

ಗುರುವಾರ ಬೆಳಗ್ಗೆ 11ಗಂಟೆಗೆ ನಡೆಯಲಿರುವ ಗಜಪಯಣಕ್ಕೆ ಚಾಲನೆ ದೊರೆಯುವ ವೀರನಹೊಸಳ್ಳಿ ಗೇಟ್‌ ಬಳಿ ಆಕರ್ಷಕ ಆರ್ಚ್‌ ಹಾಗೂ ವೇದಿಕೆ ಕಾರ್ಯಕ್ರಮ ನಡೆಯುವ ಬಳಿ ಸ್ವಾಗತ ಕಮಾನು ನಿರ್ಮಿಸಲಾಗಿದೆ. ವೇದಿಕೆಗಾಗಿ ವೀರನಹೊಸಹಳ್ಳಿ ಗೇಟ್‌ನಿಂದ ಅರ್ಧ ಕಿ.ಮೀ. ದೂರದ ಜಮೀನಿನೊಂದರಲ್ಲಿ ನೀರು ನಿರೋಧಕ ಭವ್ಯ ವೇದಿಕೆ ಹಾಗೂ ಸಭಿಕರಿಗಾಗಿ ಎರಡು ಸಾವಿರ ಆಸನ ವ್ಯವಸ್ಥೆಯ ಬೃಹತ್‌ ಶಾಮಿಯಾನ ಹಾಕಲಾಗಿದೆ.

ಸಾಂಸ್ಕೃತಿಕ ಕಲರವ: ವೀರನಹೊಸಹಳ್ಳಿ ಗೇಟ್‌ನಿಂದ ಹೊರಡುವ ಗಜಪಯಣಕ್ಕಾಗಿ ನಾಗಸ್ವರ, ವೀರಗಾಸೆ, ಪೂಜಾಕುಣಿತ, ಕಂಸಾಳೆ, ಡೊಳ್ಳುಕುಣಿತ ಸೇರಿದಂತೆ ಸಾಂಸ್ಕೃತಿಕ ಕಲಾತಂಡಗಳು ಹಾಗೂ ಪಕ್ಷಿರಾಜಪುರದ ಪೂರ್ಣಕುಂಭ ಕಳಶಹೊತ್ತ ಮಹಿಳೆಯರ ತಂಡ ಗಜಪಯಣಕ್ಕೆ ಮೆರಗು ನೀಡಲಿದೆ.

ಆದಿವಾಸಿ ಮಕ್ಕಳ ನೃತ್ಯ: ಗಜಪಯಣದ ವೇದಿಕೆಯಲ್ಲಿ ಸ್ಥಳೀಯ ವೀರನಹೊಸಳ್ಳಿ, ನಾಗಾಪುರ ಆಶ್ರಮ ಶಾಲೆಯ ಆದಿವಾಸಿ ಮಕ್ಕಳು ಹಾಗೂ ಗುರುಪುರ ಕೇಂದ್ರೀಯ ವಿದ್ಯಾಲಯದ ಟಿಬೇಟ್‌ ವಿದ್ಯಾರ್ಥಿಗಳು ಒಟ್ಟು ಐದು ತಂಡ ಆಕರ್ಷಕ ಸಾಂಸ್ಕೃತಿಕ ನೃತ್ಯ ಪ್ರದರ್ಶಿಸಲಿದೆ.

ಊಟದ ವ್ಯವಸ್ಥೆ: 2000ಕ್ಕೂ ಹೆಚ್ಚು ಮಂದಿಗೆ ಊಟದ ಪ್ಯಾಕೇಟ್‌ ಹಾಗೂ ಸಾವಿರ ಮಂದಿ ವಿಐಪಿಗಳಿಗೆ ವೀರನಹೊಸಳ್ಳಿ ಆಶ್ರಮ ಶಾಲೆಯಲ್ಲಿ ಪ್ರತ್ಯೇಕವಾಗಿ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ವಾಹನಗಳ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಗಜಪಯಣದ ಸಿದ್ಧತೆ ಬಗ್ಗೆ ಉಸ್ತುವಾರಿ ಡಿಸಿಎಫ್‌ ಅಲೆಗ್ಸಾಂಡರ್‌ ಹಾಗೂ ಆರ್‌ಎಫ್‌ಒ ಸುರೇಂದ್ರ ಮಾಹಿತಿ ನೀಡಿದರು.

Advertisement

ಗಜಪಡೆ ಆಗಮನ: ಗಜಪಯಣದ ಮೊದಲ ಹಂತದಲ್ಲಿ ಪಾಲ್ಗೊಳ್ಳುವ ಅಂಬಾರಿ ಹೊರುವ 59 ವರ್ಷದ ಅರ್ಜುನ ಬಳ್ಳೇಕ್ಯಾಂಪಿನಿಂದಲೂ, ಮತ್ತಿಗೋಡು ಆನೆ ಶಿಬಿರದ 53 ವರ್ಷದ ಅಭಿಮನ್ಯು, 63 ವರ್ಷದ ವರಲಕ್ಷ್ಮೀ, ದುಬಾರೆ ಆನೆ ಶಿಬಿರದ 36 ವರ್ಷದ ಧನಂಜಯ, 49 ವರ್ಷದ ಈಶ್ವರ, 62 ವರ್ಷದ ವಿಜಯ ಆನೆಗಳು ಈಗಾಗಲೇ ವೀರನಹೊಸಹಳ್ಳಿಯಲ್ಲಿ ಬೀಡು ಬಿಟ್ಟಿದ್ದು, ಗುರುವಾರ ಬೆಳಗ್ಗೆ ಅಲಂಕಾರ ಮಾಡಿಸಿಕೊಂಡು ಗಜಪಯಣಕ್ಕೆ ರೆಡಿಯಾಗಲಿವೆ.

ಉಸ್ತುವಾರಿ ಸಚಿವರು ಹಾಗೂ ಹುಣಸೂರು ಶಾಸಕರು ಇಲ್ಲದ ಪ್ರಯುಕ್ತ ಸಚಿವ ಆರ್‌.ಅಶೋಕ್‌, ದೊಡ್ಡ ಹೆಜ್ಜೂರು ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮೀ, ಜಿಲ್ಲೆಯ ವಿವಿಧ ತಾಲೂಕುಗಳ ಶಾಸಕರು, ಇತರೆ ಜನಪ್ರತಿನಿಧಿಗಳು, ನಗರ ಪಾಲಿಕೆ ಮೇಯರ್‌, ಹುಣಸೂರು ತಾಲೂಕು ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಗಜಪಯಣ ಸಮಾರಂಭದಲ್ಲಿ ಭಾಗವಹಿಸುವರು.

ಅರಮನೆ ಪುರೋಹಿತರಿಂದ ಪೂಜೆ: ಸಂಪ್ರದಾಯದಂತೆ ಗಜಪಯಣದ ಹಿಂದಿನ ದಿನ ಮೈಸೂರು ಅರಮನೆಯ ಕಡೆಯಿಂದ ಅರಮನೆ ಪುರೋಹಿತರಾದ ನರೇಂದ್ರ ಅವರು ವೀರನಹೊಸಳ್ಳಿ ಗೇಟ್‌ ಬಳಿಯ ಆಂಜನೇಯಸ್ವಾಮಿ ದೇವಾಲಯದಲ್ಲಿ ಬುಧವಾರ ದೇವರಿಗೆ ಕ್ಷೀರಾಭಿಷೇಕ, ಅಷ್ಟೋತ್ತರ, ಪೂಜಾವಿಧಿವಿಧಾನ ನಡೆಸಿದ್ದು, ಅರಮನೆಯಲ್ಲಿ ಯದುವಂಶಸ್ಥರಾದ ಯದುವೀರ್‌ ಒಡೆಯರ್‌ ಪತ್ನಿ ತ್ರಿಶಿಕ ಹಾಗೂ ರಾಜಮಾತೆ ಪ್ರಮೋದಾದೇವಿ ಒಡೆಯರ್‌ಗೆ ತೀರ್ಥಪ್ರಸಾದ ನೀಡುವರು.

ಸಿದ್ಧತೆ ಪರಿಶೀಲಿಸಿದ ಡೀಸಿ, ಸಕಲ ವ್ಯವಸ್ಥೆಗೆ ತಾಕೀತು
ಹುಣಸೂರು: ವೀರನಹೊಸಹಳ್ಳಿಗೆ ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್‌ ಭೇಟಿ ನೀಡಿ ಗಜಪಯಣದ ಸಿದ್ಧತೆ ಪರಿಶೀಲಿಸಿದರು. ಗಜಪಯಣ ಆರಂಭವಾಗುವ ವೀರನಹೊಸಹಳ್ಳಿ ಗೇಟ್‌, ಸಮಾರಂಭ ನಡೆಯುವ ವೇದಿಕೆ, ಸಭಿಕರು ಕೂರುವ ಸ್ಥಳ, ಊಟದ ವ್ಯವಸ್ಥೆಯ ಸ್ಥಳ, ವಾಹನ ನಿಲುಗಡೆ ಜಾಗವನ್ನು ಉಪ ವಿಭಾಗಾಧಿಕಾರಿ ಬಿ.ಎನ್‌.ವೀಣಾ, ತಹಶೀಲ್ದಾರ್‌ ಬಸವರಾಜು, ಆರ್‌.ಎಫ್‌.ಓ.ಸುರೇಂದ್ರ ಅವರ ಜೊತೆ ಪರಿಶೀಲಿಸಿದರು.

ವೇದಿಕೆ ಹಾಗೂ ಸಭಿಕರು ಕೂರುವ ಸ್ಥಳದಲ್ಲಿ ಹಾಕಿದ್ದ ಶಾಮಿಯಾನ ನೀರು ನಿರೋಧಕವಾಗಿರಬೇಕು, ವಾಹನ ನಿಲುಗಡೆ ಸುವ್ಯವಸ್ಥಿತವಾಗಿರಬೇಕು ಹಾಗೂ ಎಂಜಿನಿಯರ್‌ಗಳಿಂದ ಪರಿಶೀಲನೆ ನಡೆಸಬೇಕು, ಊಟ ವಿತರಣೆ ಸಮರ್ಪಕವಾಗಿರಬೇಕು, ಯಾವುದೇ ಗೊಂದಲಕ್ಕೆ ಅವಕಾಶ ಮಾಡಿಕೊಡದೆ ಕಾರ್ಯಕ್ರಮಗಳು ಸುಸೂತ್ರವಾಗಿ ನಡೆಯಬೇಕೆಂದು ಆರ್‌ಎಫ್‌ಒ ಸುರೇಂದ್ರ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಎಇಇಗೆ ತರಾಟೆ: ಗಜಪಯಣ ಆರಂಭಗೊಳ್ಳುವ ನಾಗರಹೊಳೆ ರಸ್ತೆಯ ಎರಡೂ ಬದಿಯಲ್ಲಿ ಬೆಳೆದಿರುವ ಗಿಡಗಳನ್ನು ತೆರವುಗೊಳಿಸದಿರುವ ಬಗ್ಗೆ ಅಸಮಧಾನಗೊಂಡ ಜಿಲ್ಲಾಧಿಕಾರಿಗಳು, ಲೋಕೋಪಯೋಗಿ ಇಲಾಖೆಯ ಎಇಇ ಕೃಷ್ಣ ಅವರನ್ನು ತರಾಟೆಗೆ ತೆಗೆದುಕೊಂಡರು. ಟೆಂಡರ್‌ ಕರೆಯಲಾಗಿದೆ ಎಂದು ಸಬೂಬು ಹೇಳುತ್ತಿದ್ದಂತೆ, ಗಜಪಯಣ ಮುಗಿದ ಮೇಲೆ ತೆಗಿಸುತ್ತೀರಾ, ಇಂದೇ ಗಿಡಗುಂಟೆಗಳನ್ನು ತೆರವುಗೊಳಿಸಬೇಕೆಂದು ತಾಕೀತು ಮಾಡಿದರು.

ಹಾಡಿಗೆ ವಿದ್ಯುತ್‌ ಕಲ್ಪಿಸಿ: ವೀರನಹೊಸಹಳ್ಳಿ ಹಾಡಿಯ ವಿದ್ಯುತ್‌ ಸಮಸ್ಯೆ ತಕ್ಷಣವೇ ಪರಿಹರಿಸಬೇಕೆಂದು ಸೆಸ್ಕ್ ಎಇಇ ಸಿದ್ದಪ್ಪರಿಗೆ ಸೂಚಿಸಿದರೆ, ಸಮರ್ಪಕ ನೀರಿನ ವ್ಯವಸ್ಥೆ ಕಲ್ಪಿಸಲು ಕ್ರಮವಹಿಸಬೇಕೆಂದು ತಾಪಂ ಇಒ ಗಿರೀಶ್‌ಗೆ ಆದೇಶಿಸಿದರು.

ಮಳೆ ಆತಂಕ: ಕಳೆದ ಎರಡು ದಿನಗಳಿಂದ ಬಿಟ್ಟು ಬಿಟ್ಟು ಬರುತ್ತಿದ್ದ ಮಳೆ ಬುಧವಾರ ಮಧ್ಯಾಹ್ನದವರೆಗೂ ಜಡಿಮಳೆ ಸುರಿಯಿತು. ಇದರಿಂದ ಗುರುವಾರ ನಡೆಯುವ ಗಜಪಯಣದ ವೇಳೆ ಮಳೆ ಕಾಡುವ ಆತಂಕ ಇದೆ.

Advertisement

Udayavani is now on Telegram. Click here to join our channel and stay updated with the latest news.

Next