ಹ್ಯೂಸ್ಟನ್: ಆಂಧ್ರಪ್ರದೇಶದ ಗುಂಟೂರು ಮೂಲದ ಸಿರಿಷಾ ಬಾಂದ್ಲಾ (34) ಜು.11ರಂದು ಗಗನಯಾತ್ರೆ ಕೈಗೊಳ್ಳಲಿದ್ದಾರೆ. ಅವರು ಅಮೆರಿಕದ ಹ್ಯೂಸ್ಟನ್‌ನಲ್ಲಿಯೇ ಹುಟ್ಟಿ ಬೆಳೆದಿದ್ದಾರೆ. ವರ್ಜಿನ್ ಗ್ರೂಪ್ ಸಂಸ್ಥಾಪಕ ರಿಚರ್ಡ್ ಬ್ರಾನ್ಸನ್ ಪ್ರವರ್ತಿತ ಅಮೆರಿಕದ ಗಗನಯಾತ್ರೆಯ ಸಂಸ್ಥೆ ಕೈಗೊಳ್ಳಲಿರುವ ಬಾಹ್ಯಾಕಾಶ ಯಾತ್ರೆಯಲ್ಲಿ ಸಿರಿಷಾ ಬಾಂದ್ಲಾ ಕೂಡ ಒಬ್ಬರಾಗಿದ್ದಾರೆ. ಈ ಯಾತ್ರೆಯಲ್ಲಿ ಖುದ್ದು ರಿಚರ್ಡ್ ಬ್ರ್ಯಾನ್ಸನ್ ಕೂಡ ಭಾಗಿಯಾಗಲಿದ್ದಾರೆ. ಜೂ.20ರಂದು ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಕೂಡ ಗಗನಯಾತ್ರೆ ಕೈಗೊಳ್ಳಲಿದ್ದಾರೆ. ಹೀಗಾಗಿ, ಜಗತ್ತಿನ ಅತೀ ಸಿರಿವಂತರಿಬ್ಬರ ನಡುವೆ ಬಾಹ್ಯಾ ಕಾಶ ಲಂಘನೆಗೆ ಪೈಪೋಟಿ ನಡೆದಿದೆ. ಅದಕ್ಕಿಂತ ಮೊದಲೇ ವರ್ಜಿನ್ ಗ್ರೂಪ್ ಸಂಸ್ಥಾಪಕರು ಗಗನಯಾತ್ರೆ ಕೈಗೊಳ್ಳಲಿದ್ದಾರೆ.
ಹರಿಯಾಣದ ಕರ್ನಾಲ್ ಮೂಲದ ಕಲ್ಪನಾ ಚಾವ್ಲಾ ಗಗನ ಯಾತ್ರೆ ನಡೆಸಿದ ಬಳಿಕ ಇಂಥ ಸಾಹಸ ಕೈಗೊಳ್ಳಲಿರುವ ಭಾರತದ ಮೂಲದ ಎರಡನೇ ಮಹಿಳೆ ಸಿರಿಷಾ ಆಗಲಿದ್ದಾರೆ. ರಾಕೇಶ್ ಶರ್ಮಾ, ಸುನಿತಾ ವಿಲಿಯಮ್ಸ್ ಈ ಸಾಹಸ ಮಾಡಿದ ಇನ್ನಿಬ್ಬರು ಭಾರತೀಯ ಮೂಲದವರು.
ಪದ್ಯು ವಿವಿಯಿಂದ ಏರೋನಾಟಿಕಲ್ ಎಂಜಿನಿಯರ್ ಪದವಿ ಪಡೆದಿರುವ ಬಾಂದ್ಲಾ “ವಿಎಸ್‌ಎಸ್ ಯುನಿಟಿ’ ಗಗನ ನೌಕೆಯಲ್ಲಿ ಸಂಶೋಧನ ಅನುಭವ ಪಡೆಯುವ ನಿಟ್ಟಿನಲ್ಲಿ ಪ್ರಯಾಣಿಸಲಿದ್ದಾರೆ. ಅವರು ವರ್ಜಿನ್ ಅಟ್ಲಾಂಟಿಕ್ ಕಂಪೆನಿಯಲ್ಲಿ ಸಂಶೋ ಧನ ವಿಭಾಗ ಮತ್ತು ಅಮೆರಿಕ ಸರಕಾರದ ಜತೆಗಿನ ವ್ಯವಹಾರಗಳನ್ನು ನೋಡಿಕೊಳ್ಳುವ ವಿಭಾಗದ ಉಪಾ ಧ್ಯಕ್ಷರಾಗಿದ್ದಾರೆ. ಕೃಷಿ ವಿಜ್ಞಾನಿಯಾಗಿರುವ ಡಾ| ಮುರಳಿ ಮತ್ತು ಅನುರಾಧ ಸಿರಿಷಾ ಅವರ ಹೆತ್ತವರು.