Advertisement

18, 19ರಂದು ಗಗನಚುಕ್ಕಿ ಜಲಪಾತೋತ್ಸವ

09:54 PM Jan 11, 2020 | Lakshmi GovindaRaj |

ಮಳವಳ್ಳಿ: ತಾಲೂಕಿನ ಶಿವನಸಮುದ್ರದ ಗಗನಚುಕ್ಕಿ ಜಲಪಾತೋತ್ಸವ ಜ.18 ಮತ್ತು 19ರಂದು ನಡೆಯಲಿದೆ ಎಂದು ಶಾಸಕ ಡಾ.ಕೆ.ಅನ್ನದಾನಿ ತಿಳಿಸಿದರು. ಜಿಲ್ಲಾಡಳಿತ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಜೊತೆ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

Advertisement

ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 2006ರಲ್ಲಿ ಮೊದಲ ಬಾರಿಗೆ ಜಲಪಾತೋತ್ಸವ ಕಾರ್ಯಕ್ರಮ ನಡೆಸಲಾಗಿತ್ತು. ಮಳೆ ಅಭಾವದಿಂದ ಹಲವು ವರ್ಷಗಳಿಂದ ಜಲಪಾತೋತ್ಸವ ನಡೆಸಲು ಸಾಧ್ಯವಾಗಿರಲಿಲ್ಲ. ಪ್ರಸಕ್ತ ವರ್ಷ ಸಮೃದ್ಧ ಮಳೆಯಾಗಿರುವ ಹಿನ್ನೆಲೆಯಲ್ಲಿ ಅದ್ಧೂರಿಯಾಗಿ ಜಲಪಾತೋತ್ಸವ ಆಚರಿಸಲು ಭರ್ಜರಿ ಸಿದ್ಧತೆ ನಡೆಸಲಾಗಿದೆ ಎಂದು ಹೇಳಿದರು.

ಕಳೆದ ವರ್ಷ ನ. 9 ಮತ್ತು 10ರಂದು ಜಲಪಾತೋತ್ಸವ ನಡೆಯಬೇಕಿತ್ತು. ಆದರೆ, ಉಪ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಮುಂದೂಡಿಕೆಯಾಗಿದ್ದ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್‌. ಆಶೋಕ್‌ರವರ ನೇತೃತ್ವದಲ್ಲಿ ಹಾಗೂ ಪ್ರವಾಸೋಧ್ಯಮ ಸಚಿವ ಸಿ.ಟಿ.ರವಿ ಮಾರ್ಗದರ್ಶನದಲ್ಲಿ ಜ.18, 19ರಂದು ನಡೆಯಲಿದೆ ಎಂದರು.

ಕಾರ್ಯಕ್ರಮದ ಯಶಸ್ವಿಗೆ ವಿವಿಧ ಸಮಿತಿಗಳನ್ನು ರಚಿಸಿ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಲಾಗಿದೆ. ಪ್ರವಾಸೋದ್ಯಮ ಇಲಾಖೆ ಸಹಕಾರದೊಂದಿಗೆ ವೇದಿಕೆ ನಿರ್ಮಾಣವನ್ನು ಲೋಕೋಪಯೋಗಿ ಇಲಾಖೆ, ಕುಡಿಯುವ ನೀರಿನ ವ್ಯವಸ್ಥೆಯನ್ನು ತಾಲೂಕು ಪಂಚಾಯಿತಿಗೆ, ಭದ್ರತಾ ಉಸ್ತುವಾರಿಯನ್ನು ಪೊಲೀಸ್‌ ಇಲಾಖೆಗೆ ವಹಿಸಲಾಗಿದೆ. ಕಾರ್ಯಕ್ರಮವನ್ನು ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಯಶಸ್ವಿಗೆ ಶ್ರಮಿಸಬೇಕು ಎಂದು ಸಭೆಯಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಉಪ ವಿಭಾಗಾಧಿಕಾರಿ ಸೂರಜ್‌ ಮಾತನಾಡಿ, ಕಾರ್ಯಕ್ರಮದ ವೇಳಾಪಟ್ಟಿಯನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು. ಹವ್ಯಾಸಿ ಕಲಾವಿದರು ಹಾಗೂ ಸ್ಥಳೀಯ ಜನಪದ ಕಲಾವಿದರಿಗೆ ಅವಕಾಶ ಕಲ್ಪಿಸುವ ಉದ್ದೇಶ ಹೊಂದಲಾಗಿದೆ. ಪೂರ್ಣ ಪ್ರಮಾಣದ ಮುಖ್ಯ ಅತಿಥಿಗಳು ಮತ್ತು ಆಹ್ವಾನ ಪತ್ರಿಕೆಯನ್ನು ಸದ್ಯದಲ್ಲೇ ತಿಳಿಸುವುದಾಗಿ ಹೇಳಿದರು.

Advertisement

ಗಗನಚುಕ್ಕಿ ಜಲಪಾತೋತ್ಸವ ಪ್ರಚಾರದ ಹಿನ್ನಲೆಯಲ್ಲಿ ಜಲಕ್ರೀಡೆ, ಯೋಗ, ಬೈಕ್‌ ರ್ಯಾಲಿ ಮತ್ತು ಗಾಳಿಪಟ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ. ತಾಲೂಕಿನ ವಿವಿಧ ಶಾಲೆಗಳ ಮಕ್ಕಳಿಗೆ ವಸ್ತು ಪ್ರದರ್ಶನ ಆಯೋಜಿಸಿ ಪ್ರತಿಭೆ ಅನಾವರಣಗೊಳಿಸಲು ಆಹ್ವಾನ ನೀಡಲಾಗುವುದು. ಅಲ್ಲದೆ ಎರಡೂ ದಿನಗಳ ಕಾಲ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.

ಗಗನಚುಕ್ಕಿಯಲ್ಲಿ ಪ್ರಕೃತಿಯ ಸೌಂದರ್ಯದ ನಡುವೆ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಸಾರ್ವಜನಿಕರಿಗೆ ಮನರಂಜನೆಯನ್ನು ಉಣಬಡಿಸುವ ನಿಟ್ಟಿನಲ್ಲಿ ಗಗನಚುಕ್ಕಿ ಜಲಪಾತೋತ್ಸವವನ್ನು ವಿಶಿಷ್ಟ ಹಾಗೂ ವಿನೂತನವಾಗಿ ಆಯೋಜಿಸಲು ಸಿದ್ಧತೆ ನಡೆಸಲಾಗಿದೆ. ಕಾರ್ಯಕ್ರಮದ ಪೋಸ್ಟರ್‌ನ್ನು ಶಾಸಕ ಡಾ.ಕೆ.ಅನ್ನದಾನಿ, ಜಿಲ್ಲಾ ಉಪ ವಿಭಾಗಾಧಿಕಾರಿ ಸೂರಜ್‌, ತಹಶೀಲ್ದಾರ್‌ ಚಂದ್ರಮೌಳಿ ಮತ್ತು ಡಿವೈಎಸ್‌ಪಿ ಎಂ.ಕೆ. ಪೃಥ್ವಿ ಬಿಡುಗಡೆ ಮಾಡಿದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಹಕಾಧಿಕಾರಿ ಸತೀಶ್‌, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಟಿ.ಶಿವಲಿಂಗಯ್ಯ, ಪುರಸಭೆ ಮುಖ್ಯಾಧಿಕಾರಿ ಗಂಗಾಧರ್‌, ತಾಲೂಕು ವೈಧ್ಯಾಧಿಕಾರಿ ವೀರಭದ್ರಪ್ಪ, ಪುರಸಭೆ ಸದಸ್ಯ ನಂದಕುಮಾರ್‌, ಬಿಜೆಪಿ ಮುಖಂಡ ಆಶೋಕ್‌ ಕುಮಾರ್‌, ಹಲಗೂರು ಹೋಬಳಿ ಜೆಡಿಎಸ್‌ ಘಟಕದ ಅಧ್ಯಕ್ಷ ತಮ್ಮಣ್ಣ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next