ನಿರ್ದೇಶಕ ನಾಗಶೇಖರ್ ಈ ಹಿಂದೆ “ಗಡಿಯಾರ’ ಎಂಬ ಚಿತ್ರ ಮಾಡುವ ಬಗ್ಗೆ ಹೇಳಿಕೊಂಡಿದ್ದರು. ಇದೇ “ಬಾಲ್ಕನಿ’ಯಲ್ಲಿ ಅದು ಸುದ್ದಿಯೂ ಆಗಿತ್ತು. ಆಮೇಲೆ “ಗಡಿಯಾರ’ ಸದ್ದು ಮಾಡಲಿಲ್ಲ. ಈಗ ಮತ್ತೆ “ಗಡಿಯಾರ’ ಸದ್ದು ಮಾಡುತ್ತಿದೆ. ಹಾಗಂತ, ನಾಗಶೇಖರ್ ಗಡಿಯಾರವಲ್ಲ. ಇದು ಸಂಪೂರ್ಣ ಹೊಸಬರೇ ಸೇರಿ ಮಾಡುತ್ತಿರುವ ಹೊಸ “ಗಡಿಯಾರ’. ಹೌದು, ಈಗಾಗಲೇ ಸದ್ದಿಲ್ಲದೆಯೇ “ಗಡಿಯಾರ’ ಶೇ.50 ರಷ್ಟು ಮುಗಿದಿದೆ.
ಈ ಹಿಂದೆ “ನಾಗವಲ್ಲಿ ವರ್ಸಸ್ ಆಪ್ತಮಿತ್ರರು’ ಎಂಬ ಚಿತ್ರಕ್ಕೆ ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದ ಪ್ರಬೀಕ್ ಮೊಗವೀರ್ ಈಗ “ಗಡಿಯಾರ’ ಚಿತ್ರದ ನಿರ್ದೇಶಕರು. ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ವಸ್ತ್ರವಿನ್ಯಾಸ ಸೇರಿದಂತೆ ನಿರ್ಮಾಪಕರೂ ಅವರೇ. ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ, ಹಿಂದಿ, ಮರಾಠಿ, ಭೋಜಪುರಿ ಭಾಷೆಯಲ್ಲೂ “ಗಡಿಯಾರ’ ತಯಾರಾಗುತ್ತಿದೆ ಎಂಬುದು ನಿರ್ದೇಶಕರ ಮಾತು.
ಸಮಯ ಎಲ್ಲರಿಗೂ ಮುಖ್ಯ. ಕಳೆದು ಹೋದ ಸಮಯ ಮತ್ತೆಂದೂ ಸಿಗುವುದಿಲ್ಲ. ಎಷ್ಟೋ ಸಲ ಸಮಯ ಹತ್ತಿರ ಬಂದಾಗ, ತಳಮಳ, ಒದ್ದಾಟ, ಖುಷಿ, ದುಃಖ ಎಲ್ಲವೂ ಆಗುವುದುಂಟು. ಹಾಗಾದರೆ, ಇಲ್ಲಿರುವ “ಗಡಿಯಾರ’ದಲ್ಲಿ ಇವೆಲ್ಲವೂ ಇದೆಯಾ? ಅದೆಷ್ಟರ ಮಟ್ಟಿಗೆ ಇವೆಲ್ಲ ಅಂಶಗಳಿವೆಯೋ ಗೊತ್ತಿಲ್ಲ. ಆದರೆ, ಇಲ್ಲಿ ಲವ್ ಇದೆ, ಕಾಮಿಡಿ ಇದೆ ಎಲ್ಲದ್ದಕ್ಕೂ ಜೊತೆಯಾಗಿ ಇತಿಹಾಸದ ಕಥೆಯೂ ಇದೆ.
ಒಂದಷ್ಟು ಸೈಕಲಾಜಿಕಲ್ ವಿಷಯ ಮತ್ತು ಹಾರರ್ ಫೀಲ್ ಕೊಡುವ ಅಂಶಗಳೂ ಇಲ್ಲಿವೆ. ಇಲ್ಲಿ ಹೆಚ್ಚು ಹಾಸ್ಯಕ್ಕೆ ಒತ್ತು ಕೊಡಲಾಗಿದೆ. ಇನ್ನು, “ಗಡಿಯಾರ’ದಲ್ಲಿ ಇತಿಹಾಸ ವಿಷಯವೂ ಅಡಕವಾಗಿದೆ. ಕದಂಬರು, ಹೊಯ್ಸಳರು, ರಜಪೂತರು, ಚಾಲುಕ್ಯರ ಇತಿಹಾಸದ ಕೆಲ ಘಟನೆಗಳು ಇಲ್ಲಿ ಬರಲಿವೆ. ಆ ರಾಜಮನೆತನದ ಅಂಶಗಳು ಯಾಕೆ ಎಂಬುದಕ್ಕೆ ಚಿತ್ರ ನೋಡಬೇಕು ರಾಜಮನೆತನದ ತಲೆಮಾರಿನವರಿಗೂ ಗೊತ್ತಾಗದ ಕೆಲ ಸೂಕ್ಷ್ಮ ವಿಷಯಗಳನ್ನು ಇಲ್ಲಿ ಹೇಳಹೊರಟಿದ್ದಾರಂತೆ ನಿರ್ದೇಶಕರು.
ಚಿತ್ರದಲ್ಲಿ ಎಸ್.ಪಿ.ಸಾಂಗ್ಲಿಯಾನ, ವಿಶೇಷ ಪಾತ್ರ ಮಾಡುತ್ತಿದ್ದು, ಮಲಯಾಳಂ ಹಾಗು ತಮಿಳು ನಟ ರಿಹಾಜ್, ಮರಾಠಿ ಮತ್ತು ಹಿಂದಿ ನಟ ಗೌರಿಶಂಕರ್ ನಾಯಕರಾದರೆ, ಚಿತ್ರದಲ್ಲಿ ಪ್ರದೀಪ್ ಪೂಜಾರಿ, ಮನ್‌ದೀಪ್ ರಾಯ್, ಡಿಸಿಬಿ ಛಬ್ಬಿ, ಅವಿನಾಶ್, ಶೀತಲ್‌ಶೆಟ್ಟಿ, ಪ್ರಕಾಶ್ ಬೆಳವಾಡಿ, ರಾಧಮ್ಮ, ರಾಜ್ ದೀಪಕ್ ಶೆಟ್ಟಿ ಇತರರು ನಟಿಸುತ್ತಿದ್ದಾರೆ. ಚಿತ್ರಕ್ಕೆ ರಾಘವ್ ಸುಭಾಷ್ ಸಂಗೀತವಿದೆ. ಶ್ಯಾಮ್ ಸಿಂಧನೂರು ಛಾಯಾಗ್ರಹಣವಿದೆ. ಜಾಗ್ವಾರ್ ಸಣ್ಣಪ್ಪ ಮತ್ತು ಅಲ್ಟಿಮೇಟ್ ಶಿವು ಅವರ ಸಾಹಸವಿದೆ. ಚಿತ್ರದಲ್ಲಿ ಮೂರು ಹಾಡುಗಳು ಮತ್ತು ನಾಲ್ಕು ಫೈಟ್‌ಗಳಿವೆ. ಬಹುತೇಕ ಬೆಂಗಳೂರಲ್ಲೇ ಚಿತ್ರೀಕರಣ ನಡೆಯಲಿದೆ.