Advertisement

ಗಡಿಕೇಶ್ವಾರ: ಬಾಲಕರ ವಸತಿ ನಿಲಯಕ್ಕಿಲ್ಲ ಮೂಲ ಸೌಕರ್ಯ

11:20 AM Sep 01, 2017 | |

ಚಿಂಚೋಳಿ: ಸೇಡಂ ವಿಧಾನಸಭಾ ಮತಕ್ಷೇತ್ರಕ್ಕೆ ಒಳಪಟ್ಟಿರುವ ಚಿಂಚೋಳಿ ತಾಲೂಕಿನ ಗಡಿಕೇಶ್ವಾರ ಗ್ರಾಮದಲ್ಲಿ ಇರುವ ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಸರಕಾರಿ ಮೆಟ್ರಿಕ್‌ ಪೂರ್ವ ಬಾಲಕರ ವಸತಿ ನಿಲಯಕ್ಕೆ ಮೂಲಭೂತ ಸೌಕರ್ಯಗಳಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

Advertisement

ತಾಲೂಕಿನ ಗಡಿಕೇಶ್ವಾರ, ತೇಗಲತಿಪ್ಪಿ, ಕೆರೋಳಿ, ಭಂಟನಳ್ಳಿ, ಕುಪನೂರ, ಹಲಚೇರಾ, ಹೊಡೇಬೀರನಳ್ಳಿ ಗ್ರಾಮಗಳಲ್ಲಿ ಮೆಟ್ರಿಕ್‌ ಪೂರ್ವ ಶಾಲೆಯಲ್ಲಿ ಓದುತ್ತಿರುವ ಬಡ ವಿದ್ಯಾರ್ಥಿಗಳಿಗೆ ವಸತಿ ನಿಲಯವನ್ನು 2001-02ರಲ್ಲಿ ಪ್ರಾರಂಭಿಸಲಾಗಿದೆ. ಗಡಿಕೇಶ್ವಾರ ಸರಕಾರಿ ಪ್ರೌಢಶಾಲೆ
ಪಕ್ಕದಲ್ಲಿಯೇ ಇರುವ ವಸತಿ ನಿಲಯಕ್ಕೆ ಮೂಲ ಸೌಕರ್ಯಗಳೇ ಇಲ್ಲದಿರುವುದರಿಂದ ವಿದ್ಯಾರ್ಥಿಗಳು
ತೊಂದರೆ ಪಡುವಂತಾಗಿದೆ. ವಸತಿ ನಿಲಯದಲ್ಲಿ ಪ್ರಾರಂಭದಲ್ಲಿಯೇ ಶುದ್ಧ ಕುಡಿಯುವ ನೀರು ಪೊರೈಕೆ ಇಲ್ಲ. ಸ್ನಾನಕ್ಕಾಗಿ ಬಿಸಿ ನೀರಿನ ವ್ಯವಸ್ಥೆ ಇಲ್ಲದಿರುವುದರಿಂದ ಮಕ್ಕಳು ದಿನನಿತ್ಯ ತಣ್ಣೀರಿನಿಂದಲೇ ಸ್ನಾನ ಮಾಡುತ್ತಿದ್ದಾರೆ. ಅಲ್ಲದೇ ಮಕ್ಕಳಿಗೆ ಶೌಚಾಲಯ ನಿರ್ಮಿಸಿಕೊಟ್ಟಿಲ್ಲ. ಹೀಗಾಗಿ ಬಯಲು ಬಹಿರ್ದೆಸೆಗೆ ಹೊರಗೆ ಹೋಗಬೇಕಾಗಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

ಜಿಪಂ ವತಿಯಿಂದ ಮಂಚ, ಹಾಸಿಗೆ ಸರಬರಾಜು ಮಾಡಲಾಗಿದೆ. ಇವುಗಳೆಲ್ಲ ಕಳಪೆಮಟ್ಟದಿಂದ ಕೂಡಿವೆ. ಬೆಡ್‌ ಗಳು ಹರಿದಿವೆ. ನಿಲಯದಲ್ಲಿ ವಿದ್ಯುತ್‌ ದೀಪ, ಫ್ಯಾನ್‌ಗಳಿಲ್ಲ. ವಿಪರೀತ ಸೊಳ್ಳೆ ಕಾಟವೂ ಇದೆ. ಇದರಿಂದ ರಾತ್ರಿ ಮಲಗಲೂ ಸಾಧ್ಯವಾಗುತ್ತಿಲ್ಲ. ಬೆಳಗಿನ ಉಪಹಾರದೊಂದಿಗೆ ಬಾಳೆಹಣ್ಣು, ತತ್ತಿಯನ್ನು ಕೊಡುತ್ತಿಲ್ಲ. ಮೇಲ್ವಿಚಾರಕರಿಗೆ ಕೇಳಿದರೆ ಇನ್ನು ಗುತ್ತಿಗೆದಾರ ಸರಬರಾಜು ಮಾಡಿಲ್ಲವೆಂದು ಬೆದರಿಸುತ್ತಾರೆ. ಬಾಗಿಲು ಕಿಟಕಿ ಮುರಿದು ಹೋಗಿವೆ, ಮಳೆ-ಚಳಿ ಎನ್ನದೇ
ಹಾಗೆಯೇ ಮಲಗಬೇಕಾಗಿದೆ ಎಂದು ದೂರಿದ್ದಾರೆ.

ವಸತಿ ನಿಲಯದ ಮಕ್ಕಳಿಗೆ ತಿಳಿ ಬೇಳೆ ಸಾರು, ಅರೆ ಬೆಂದ ರೊಟ್ಟಿ, ಕೊಳೆತ ತರಕಾರಿಗಳಿಂದ ಮಾಡಿದ ತರಕಾರಿ ಊಟಕ್ಕೆ ನೀಡಲಾಗುತ್ತಿದೆ. ನಮಗೆ ಇಲ್ಲಿ ವಾಸವಾಗಲು ಮನಸ್ಸಿಲ್ಲ. ರಾತ್ರಿ ಕಾವಲುಗಾರ ಇಲ್ಲದೇ ತುಂಬ ಭಯವಾಗುತ್ತಿದೆ. ಈ ಕುರಿತು ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳಿಗೆ ಕಳೆದ ವಾರ ದೂರು ಸಲ್ಲಿಸಲಾಗಿದೆ. ಆದರೂ ಯಾವುದೇ  ಯೋಜನವಾಗಿಲ್ಲ. ಆದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವ ಡಾ|ಶರಣಪ್ರಕಾಶಪಾಟೀಲ ಅವರಿಗೆ ದೂರು ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ವಿದ್ಯಾರ್ಥಿಗಳು ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next