ವರದಿ: ವೀರೇಂದ್ರ ನಾಗಲದಿನ್ನಿ
ಗದಗ: ಕೊರೊನಾ ಹೊಡೆತದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಬಿಂಕದಕಟ್ಟಿ ಸಣ್ಣ ಮೃಗಾಲಯದ ಸ್ಥಿತಿಗೆ ವನ್ಯಜೀವಿ ಪ್ರಿಯರ ಮನ ಮಿಡಿದಿದೆ. ಇದೇ ವೇಳೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಕರೆ ನೀಡುತ್ತಿದ್ದಂತೆ ಸಾವಿರಾರು ಜನರು ದೇಣಿಗೆ ನೀಡಲು ಮತ್ತು ವನ್ಯಜೀವಿಗಳನ್ನು ದತ್ತು ಪಡೆಯಲು ಮುಂದಾಗುತ್ತಿದ್ದಾರೆ.
ಕಳೆದ 6 ದಿನಗಳಲ್ಲಿ ಬಿಂಕದಕಟ್ಟಿ ಸಣ್ಣ ಮೃಗಾಲಯಕ್ಕೆ ಬರೋಬ್ಬರಿ 2.66 ಲಕ್ಷ ರೂ. ಸಂಗ್ರಹವಾಗಿದೆ. ಅರಣ್ಯ ಇಲಾಖೆಯಿಂದ 1976ರಲ್ಲಿ ಸುಮಾರು 40 ಎಕರೆ ಪ್ರದೇಶದಲ್ಲಿ ಕಿರು ವನ್ಯಜೀವಿ ಸಂರಕ್ಷಣಾ ಕೇಂದ್ರವನ್ನು ಸ್ಥಾಪಿಸಿತ್ತು. ಇತ್ತೀಚಿನ ವರ್ಷಗಳಲ್ಲಿ ಹತ್ತು ಹಲವು ಅಭಿವೃದ್ಧಿ ಕಾರ್ಯಗಳೊಂದಿಗೆ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸುವುದರ ಜತೆಗೆ ಪ್ರವಾಸಿಗರ ಕೇಂದ್ರವಾಗಿದೆ. ಹೀಗಾಗಿ, ಭಾರತ ಸರಕಾರದ ಮೃಗಾಲಯ ಪ್ರಾಧಿಕಾರದಿಂದ ಸಣ್ಣ ಮೃಗಾಲಯ ಎಂಬ ಪಟ್ಟಕ್ಕೂ ಪಾತ್ರವಾಗಿದೆ.
ಮೃಗಾಲಯದಲ್ಲಿ ಸದ್ಯ 37 ಪ್ರಭೇದದ 399 ಪ್ರಾಣಿ ಪಕ್ಷಿಗಳಿವೆ. ಸದ್ಯ ಎರಡು ಸಿಂಹ, ಎರಡು ಹುಲಿ, ನಾಲ್ಕು ಚಿರತೆ ಮತ್ತು ಹೈನಾ, ಜಿಂಕೆ, ಕೃಷ್ಣಮೃಗ, ನೀಲಗಾಯಿ, ಕಡವೆ, ಕರಡಿ, ನರಿ, ಮೊಸಳೆ, ಆಮೆ, ಹೆಬ್ಟಾವು ಹಾಗೂ ವಿವಿಧ ಜಾತಿಯ 90 ಪಕ್ಷಿಗಳು ಸಂರಕ್ಷಿಸಲಾಗುತ್ತಿದೆ. ಈ ಪೈಕಿ ಸಿಂಹ, ಹುಲಿ ಮತ್ತು ಹೈನಾಗಳಿಗೆ ಗಾಜಿನ ಪಂಜರ ಅಳವಡಿಸಿರುವುದು ಮತ್ತು ಮಕ್ಕಳ ಉದ್ಯಾನ, ಪಕ್ಷಿ ಪಥ ಪ್ರವಾಸಿಗರ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಿತ್ತು. ಕೋವಿಡ್ ಲಾಕ್‌ಡೌನ್‌ಗೂ ಮುನ್ನ ಪ್ರತಿನಿತ್ಯ 100 ರಿಂದ 150, ವಾರಾಂತ್ಯದಲ್ಲಿ 300 ರಿಂದ 350 ಜನರು ಭೇಟಿ ನೀಡುತ್ತಿದ್ದಾರೆ. ಹಬ್ಬ-ಹರಿದಿನಗಳು, ರಾಷ್ಟ್ರೀಯ ಹಬ್ಬಗಳಂದು ಪ್ರವಾಸಿಗರ ಸಂಖ್ಯೆ 800ರ ಗಡಿ ದಾಟುತ್ತಿತ್ತು.
ಮೃಗಾಲಯಕ್ಕೆ ಲಾಕ್‌ಡೌನ್ ಬರೆ: ಮಹಾಮಾರಿ ಕೊರೊನಾ ಸೋಂಕಿನಿಂದಾಗಿ ಮೃಗಾಲಯಕ್ಕೆ ಪ್ರವಾಸಿಗರ ಭೇಟಿಯನ್ನು ಸಂಪೂರ್ಣವಾಗಿ ನಿರ್ಬಂಧಿಸಿದೆ. ಆಧುನಿಕತೆಯ ಅಳವಡಿಸಿಕೊಳ್ಳುತ್ತಾ ಪ್ರವಾಸಿಗರನ್ನು ಸೆಳೆಯುವ ಮೃಗಾಲಯ ಕಳೆದ ಒಂದೂವರೆ ವರ್ಷದಿಂದ ಬಣಗುಡುತ್ತಿದೆ. ಸಾರ್ವಜನಿಕರ ಪ್ರವೇಶ ಶುಲ್ಕದಿಂದ ಬರುತ್ತಿದ್ದ ಆದಾಯ ಕೈತಪ್ಪಿದ್ದರಿಂದ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತಗೊಂಡಿದೆ. ವನ್ಯಜೀವಿಗಳ ಪೋಷಣೆಗೂ ಕೋವಿಡ್ ನಿರ್ಬಂಧ ಪರಿಣಾಮ ಬೀರಿದೆ ಎನ್ನಲಾಗಿದೆ.
ಬಿಂಕದಕಟ್ಟಿಗೆ ಪ್ರಾಣಿಪ್ರಿಯರ ಬೆಂಬಲ: ಈ ನಡುವೆ ರಾಜ್ಯದ ಮೃಗಾಲಯಗಳಿಗೆ ನೆರವಾಗಬೇಕು ಎಂಬ ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್ ಸ್ಟಾರ್ ದರ್ಶನ ಅವರು ಮಾಡಿದ ಮನವಿ ವಿಶೇಷ ಅಭಿಯಾನದ ರೂಪ ಪಡೆದಿದೆ. ಪ್ರಾಣಿಗಳ ದತ್ತು ಮತ್ತು ದೇಣಿಗೆಗೆ ನೀಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಉತ್ತರ ಕರ್ನಾಟಕದ ಪುಟ್ಟ ಜಿಲ್ಲೆ ಗದಗಿನ ಮೃಗಾಲಯಕ್ಕೂ ಹೆಚ್ಚಿನ ಒಲವು ತೋರಿದ್ದಾರೆ. ಜೂ.5 ರಿಂದ 10ನೇ ತಾರೀಖೀನವರೆಗೆ ಒಟ್ಟು 183 ಜನರು ದೇಣಿಗೆ ಮತ್ತು ಪ್ರಾಣಿಗಳನ್ನು ದತ್ತು ಪಡೆದು ವನ್ಯಜೀವಿಗಳ ಮೇಲಿನ ಪ್ರೀತಿ ತೋರಿದ್ದರೆ. ಅದರಿಂದ 2.66 ಲಕ್ಷ ರೂ. ಧನ ಸಹಾಯ ಹರಿದು ಬಂದಿದೆ. ದತ್ತು ಮತ್ತು ದೇಣಿಗೆ ವಿಶೇಷ ಅಭಿಯಾನದಲ್ಲಿ ರಾಜ್ಯದ 9 ಮೃಗಾಲಯಗಳ ಪೈಕಿ ಬಿಂಕದಕಟ್ಟಿ 4ನೇ ಸ್ಥಾನದಲ್ಲಿದೆ.
ಈ ಪೈಕಿ ಜಿಲ್ಲೆಯವರಷ್ಟೇ ಅಲ್ಲದೇ, ಅಕ್ಕಪಕ್ಕದ ಹುಬ್ಬಳ್ಳಿ, ಧಾರವಾಡ, ಕೊಪ್ಪಳ, ಬೆಳಗಾವಿ, ಹಾವೇರಿ ಮತ್ತು ಬಾಗಲ ಕೋಟೆ ಜನರ ಹೆಚ್ಚಿನ ಸಂಖ್ಯೆಯಲ್ಲಿ ದೇಣಿಗೆ ನೀಡಿದ್ದಾರೆ. ಜತೆಗೆ ದೂರದ ಮೈಸೂರು, ಬೆಂಗಳೂರು, ದಾವಣಗೆರೆ ಸೇರಿದಂತೆ ಹೊರ ರಾಜ್ಯದವರೂ ಸಹ ಬಿಂಕದಕಟ್ಟಿಗೆ ನೆರವು ನೀಡಿ, ಬೆಂಬಲ ಸೂಚಿಸಿರುವುದು ಗುಣಾತ್ಮಕ ಬದಲಾವಣೆಗೆ ಸಾಕ್ಷಿಯಾಗಿದೆ.