ಗದಗ: ಸರಕಾರಿ ನೌಕರರ ಸಂಘದಿಂದ 7ನೇ ವೇತನ ಆಯೋಗ ಅನುಷ್ಠಾನಗೊಳಿಸುವುದು ಸೇರಿ ಪ್ರಮುಖ ಮೂರು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜು. 11ರಂದು ಜಿಲ್ಲಾಧಿಕಾರಿಗಳ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ರವಿ ಗುಂಜೀಕರ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಹಂತದಲ್ಲಿ ಪ್ರತಿ ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ತಹಶಿಲ್ದಾರ, ಜಿಲ್ಲಾಧಿಕಾರಿ ಹಾಗೂ ಶಾಸಕರಿಗೆ ಮನವಿ ಸಲ್ಲಿಸಲಾಗುವುದು. ಮುಂದಿನ ದಿನಗಳಲ್ಲಿ ಅಧಿವೇಶನ ಸಂದರ್ಭದಲ್ಲಿ ಚರ್ಚೆ ಮಾಡಿ ಬೇಡಿಕೆಗಳನ್ನು ಬೇಡಿಕೆ ಈಡೇರದಿದ್ದಲ್ಲಿ ಎರಡನೇ ಹಂತದಲ್ಲಿ ಸರಕಾರಿ ಕಚೇರಿಗೆ ಗೂರಾಗುವ ಮೂಲಕ ಜು. 29ರಿಂದ ಅನಿರ್ದಿಷ್ಟ ಮುಷ್ಕರ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾ ಕೇಂದ್ರದಲ್ಲಿ 3,500 ಸೇರಿ ಜಿಲ್ಲಾದ್ಯಂತ 9,000ಕ್ಕೂ ಹೆಚ್ಚು ಸರಕಾರಿ ನೌಕರರಿದ್ದು, ಆರೋಗ್ಯ ಇಲಾಖೆಯ ತುರ್ತು ಚಿಕಿತ್ಸಾ ಸಿಬ್ಬಂದಿ ಹೊರತುಪಡಿಸಿ ಎಲ್ಲ ಸರಕಾರಿ ನೌಕರರು ಜು. 29ರಿಂದ ಕರ್ತವ್ಯಕ್ಕೆ ಗೈರಾಗುವ ಮೂಲಕ ಅನಿರ್ದಿಷ್ಟ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ 2.60 ಲಕ್ಷ ಖಾಲಿ ಹುದ್ದೆಗಳಿದ್ದು, ಹಾಲಿ ಸರಕಾರ ನೌಕರರು ಖಾಲಿ ಹುದ್ದೆಗಳ ಕಾರ್ಯಭಾರವನ್ನು ಸಹ ನಿರ್ವಹಿಸುತ್ತಿರುವುದರಿಂದ ನೌಕೃಉ ಒತ್ತಡಕ್ಕೆ ಸಿಲುಕಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಅವಶ್ಯವಿರುವ ಚಿಕಿತ್ಸೆ ಪಡೆಯುವಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ 7ನೇ ವೇತನ ಆಯೋಗ ಅನುಷ್ಠಾನಗೊಳಿಸುವುದರಿಂದ ಆರ್ಥಿಕ ಸಂಕಷ್ಟದಿಂದ ಪಾರಾಗಬಹುದಾಗಿದೆ ಎಂದು ಮನವಿ ಮಾಡಿದರು.
ರಾಜ್ಯ 7ನೇ ವೇತನ ಆಯೋಗವು ಸರಕಾರಕ್ಕೆ ಸಲ್ಲಿಸಿರುವ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಿ ಸರಕಾರಿ ಆದೇಶ ಹೊರೆಇಸಬೇಕು. NPS ರದ್ದುಪಡಿಸಿ ಹಳೇ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸಬೇಕು. ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆ(ಕೆಎಎಸ್ಎಸ್) ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು.
ಸರಕಾರಿ ನೌಕರರ ಸಂಘದ ಪದಾಧಿಕಾರಿಗಳಾದ ಪಿ.ಎಚ್. ಕಡಿವಾಲ, ಎಸ್.ಎನ್. ಬಳ್ಳಾರಿ, ಕೆ.ಬಿ. ಕೊಣ್ಣೂರ, ಎಸ್.ಆರ್. ಕಟ್ಟಿಮನಿ, ವಿ.ಎಂ. ಹಿರೇಮಠ, ಬಿ.ಎಂ. ಪೂಜಾರ ಸೇರಿ ಅನೇಕರು ಇದ್ದರು.