ಗದಗ: ಪಂಪ್ ಹೌಸ್ ಹಾಗೂ ಸಂಪ್ ಹೌಸ್ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರಿಗೆ ಹಣ ಪಾವತಿಸದ ಹಿನ್ನೆಲೆಯಲ್ಲಿ ಕೋರ್ಟ್ ಆದೇಶದ ಅನ್ವಯ ಶನಿವಾರ ಸಂಜೆ ಇಲ್ಲಿನ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಚೇರಿಯ ಕಂಪ್ಯೂಟರ್ ಹಾಗೂ ಪೀಠೊಪಕರಣ ಜಪ್ತಿ ಮಾಡಲಾಯಿತು.
ಗದಗ-ಬೆಟಗೇರಿ ಅವಳಿ ನಗರಕ್ಕೆ ನದಿ ನೀರು ಪೂರೈಕೆ ಮಾಡಲು ಮುಂಡರಗಿ-ಡಂಬಳ, ಡಂಬಳ- ಗದಗನಲ್ಲಿ ಪಂಪ್ ಹಾಗೂ ಸಂಪ್ ಹೌಸ್ ಕಾಮಗಾರಿ ಮಾಡಲಾಗಿತ್ತು. ಆದರೆ ಕಾಮಗಾರಿಗೆ ಸಂಬಂಧಿಸಿ ಗುತಿಗೆದಾರರಿಗೆ ಪಾವತಿಸಬೇಕಿದ್ದ 43 ಲಕ್ಷ ರೂ. ಬಿಡುಗಡೆ ಮಾಡಿರಲಿಲ್ಲ.
ಅಧಿಕಾರಿಗಳ ಈ ಧೋರಣೆ ಖಂಡಿಸಿ ಗುತ್ತಿಗೆದಾರ ಎಸ್.ವಿ. ಪಟ್ಟಣಶೆಟ್ಟಿ ಎಂಬುವವರು 1992ರಲ್ಲಿ ಕೋರ್ಟ್ ಮೊರೆ ಹೋಗಿದ್ದರು. ಈ ಕುರಿತು ಸಮಗ್ರ ವಿಚಾರಣೆ ನಡೆಸಿದ್ದ ಗದುಗಿನ ಪ್ರಧಾನ ದಿವಾಣಿ ನ್ಯಾಯಾಲಯ, ಗುತ್ತಿಗೆದಾರರಿಗೆ 43 ಲಕ್ಷ ರೂ. ಬಿಲ್ ಹಾಗೂ ಅದಕ್ಕೆ ಸಂಬಂಧಿಸಿ 8 ವರ್ಷದ ಬಡ್ಡಿಯನ್ನೂ ಸೇರಿಸಿ ಒಟ್ಟು 52 ಲಕ್ಷ ರೂ. ಪಾವತಿಸುವಂತೆ 2010ರಲ್ಲಿ ತೀರ್ಪು ನೀಡಿ, 15 ದಿನಗಳ ಕಾಲಾವಕಾಶ ನೀಡಿತ್ತು.
ಆದರೆ, ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿ, ಕೆಳ ಹಂತದ ಕೋರ್ಟ್ ತೀರ್ಪಿಗೆ ಸರಕಾರ ತಡೆಯಾಜ್ಞೆಯನ್ನೂ ತಂದಿತ್ತು. ಆದರೆ, ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ತೆರೆವುಗೊಂಡಿದ್ದರಿಂದ ಗದುಗಿನ ಪ್ರಧಾನ ದಿವಾಣಿ ನ್ಯಾಯಾಲಯದ ಆದೇಶದ ಮೇರೆಗೆ ಕಚೇರಿಯ ಪೀಠೊಪಕರಣ, ಕಂಪ್ಯೂಟರ್, ಝೆರಾಕ್ಸ್ ಮಷಿನ್, ಪ್ರಿಂಟರ್, ಟೇಬಲ್ ಸೇರಿದಂತೆ ಅನೇಕ ವಸ್ತುಗಳನ್ನು ಜಪ್ತಿ ಮಾಡಲಾಯಿತು.