ಗದಗ: ಕಬ್ಬು ಬೆಳೆಗಾರರ ಬಾಕಿ ಹಣ ಪಾವತಿಗೆ ಒತ್ತಾಯಿಸುತ್ತಿರುವ ರೈತರನ್ನು ಗೂಂಡಾಗಳೆಂದೂ, ರೈತ ಮಹಿಳೆಯನ್ನು ಅಗೌರವವಾಗಿ ಜರಿದಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ನಡೆ ಖಂಡಿಸಿ ಬುಧವಾರ ಇಲ್ಲಿನ ಗಾಂಧಿ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮಹಾತ್ಮಗಾಂಧಿ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಪ್ರಮುಖರು ಹಾಗೂ ಕಾರ್ಯಕರ್ತರು, ರಾಜ್ಯ ಸರಕಾರದ ಬೇಜವಾಬ್ದಾರಿ ಹಾಗೂ ರೈತ ವಿರೋಧಿ ಧೋರಣೆ ಖಂಡಿಸಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಕಳೆದ ಮೂರ್‍ನಾಲ್ಕು ವರ್ಷಗಳಿಂದ ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳಿಂದ ಹಣ ಬಂದಿಲ್ಲ. ಇದರಿಂದಾಗಿ ರೈತರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಕ್ಕರೆ ಕಾರ್ಖಾನೆಗಳಿಂದ ಆಗುತ್ತಿರುವ ವಂಚನೆಯಿಂದ ರಕ್ಷಿಸುವಂತೆ ಕೋರಿ ಸರಕಾರದ ಗಮನ ಸೆಳೆಯಲು ಬೀದಿಗಿಳಿದ ಅನ್ನದಾತನ ಬಗ್ಗೆ ಸಿಎಂ ಹಗುರವಾಗಿ ಮಾತನಾಡಿರುವುದು ಸರಿಯಲ್ಲ ಎಂದರು.
ತಮ್ಮ ಸರಕಾರ ಅಧಿಕಾರಕ್ಕೆ ಬಂದ ಮರು ಕ್ಷಣವೇ ರಾಜ್ಯದ ಎಲ್ಲ ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದ ಜೆಡಿಎಸ್, ಈವರೆಗೂ ಯಾವೊಬ್ಬ ರೈತನದ್ದೂ ನಯಾಪೈಸೆ ಸಾಲ ಮನ್ನಾ ಆಗಿಲ್ಲ. ಕೇವಲ ಭರವಸೆಯ ಮಾತುಗಳಿಂದಲೇ ಕಾಲಹರಣ ಮಾಡುತ್ತಿದ್ದಾರೆ ಎಂದು ಹೇಳಿದರು. ರಾಜ್ಯದಲ್ಲಿ ಮಳೆ ಅಭಾವದಿಂದ ಸುಮಾರು 104ಕ್ಕೂ ಅಧಿಕ ತಾಲೂಕುಗಳು ಬರಗಾಲಕ್ಕೆ ತುತ್ತಾಗಿವೆ. ಆಯಾ ತಾಲೂಕುಗಳನ್ನು ಬರಪೀಡಿತವೆಂದು ಘೊಷಣೆ ಮಾಡಿದ್ದು, ಬಿಟ್ಟರೆ ಪರಿಹಾರ ಕಾಮಗಾರಿಗಳನ್ನೇ ಕೈಗೆತ್ತಿಕೊಂಡಿಲ್ಲ ಎಂದು ವಾಗ್ಧಾಳಿ ನಡೆಸಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ಕುರಡಗಿ, ಮೋಹನ ಮಾಳಶೆಟ್ಟಿ ಹಾಗೂ ಮಾಜಿ ಜಿಲ್ಲಾಧ್ಯಕ್ಷ ಎಂ.ಎಂ.ಹಿರೇಮಠ ಮಾತನಾಡಿ, ಕಳೆದ ನಾಲ್ಕೈದು ವರ್ಷಗಳಿಂದ ಜಿಲ್ಲೆಯಲ್ಲಿ ಬರಗಾಲ ಆವರಿಸಿದೆ. ಈ ಬಾರಿಯೂ ಬರಲಾಗದಿಂದ ಗ್ರಾಮೀಣ ಜನರು ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದಾರೆ. ಈ ಬಗ್ಗೆ ರಾಜ್ಯದ ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರಕಾರ ಗಮನಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಎಲ್ಲ ಬೆಳೆಗಳಿಗೆ ಕೇಂದ್ರ ಸರ್ಕಾರ ಕನಿಷ್ಟ ಬೆಂಬಲ ಬೆಲೆ ಘೊಷಿಸಿದ್ದರೂ, ರಾಜ್ಯ ಸರಕಾರ ಬೆಂಬಲ ಬೆಲೆಯಲ್ಲಿ ಈರುಳ್ಳಿ ಖರೀದಿ ಕೇಂದ್ರಗಳನ್ನು ಆರಂಭಿಸುತ್ತಿಲ್ಲ. ಪರಿಣಾಮ ಈರುಳ್ಳಿ ಬೆಳೆಗಾರರು ಬೀದಿಗೆ ಬರುವಂತಾಗಿದೆ ಎಂದು ದೂರಿದರು. ಪ್ರತಿಭಟನೆಯಲ್ಲಿ ಬಿಜೆಪಿ ಶಹರ ಅಧ್ಯಕ್ಷ ಜಗನ್ನಾಥಸಾ ಭಾಂಡ್ಗೆ, ಮಹಿಳಾ ಮೋರ್ಚಾ ಅಧ್ಯಕ್ಷ ಅಶ್ವಿನಿ ಜಗತಾಪ, ರೈತ ಸಂಘದ ಅಧ್ಯಕ್ಷ ನಿಂಗಪ್ಪ ಮಣ್ಣೂರು, ಪ್ರಮುಖರಾದ ಅಶೋಕ ನವಲಗುಂದ, ಭದ್ರೇಶ ಕುಸ್ಲಾಪೂರ, ಕಾಂತೀಲಾಲ ಬನ್ಸಾಲಿ, ಅಶೋಕ ಸಂಕಣ್ಣವರ, ಬಿ.ಎಸ್. ಚಿಂಚಲಿ, ಶಾರದಾ ಹಿರೇಮಠ, ರತ್ನಾ ದಾಸರ, ರಾಜು ಕುಲಕರ್ಣಿ, ಮಹಾಂತೇಶ ನಾಲ್ವಾಡ, ಸಿ.ಜಿ. ಸೊನ್ನದ, ಪ್ರೇಮನಾಥ ಬಣ್ಣದ, ಅನಿಲ ಅಬ್ಬಿಗೇರಿ, ಗುರುಶಾಂತಗೌಡ ಮರೀಗೌಡ್ರ, ಸುರೇಶ ಚಿತ್ತರಗಿ ಇದ್ದರು.
ಈಗಾಗಲೇ ರಾಜ್ಯದಲ್ಲಿ ಈರುಳ್ಳಿ ಬೆಲೆ ನೆಲಕ್ಕಚ್ಚಿದೆ. ಪ್ರತಿ ಕ್ವಿಂಟಲ್ 70 ರಿಂದ 100 ರೂ. ದರಲ್ಲಿ ಮಾರಾಟಗೊಳ್ಳುತ್ತಿದ್ದು, ಈರುಳ್ಳಿ ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ. ಈ ಕೂಡಲೇ ರಾಜ್ಯಾದ್ಯಂತ ಕನಿಷ್ಠ ಬೆಂಬಲ ಬೆಲೆಯಲ್ಲಿ ಈರುಳ್ಳಿ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು.
ಎಸ್.ವಿ.ಸಂಕನೂರ, ವಿಧಾನ
ಪರಿಷತ್ ಸದಸ್ಯ.