ಗದಗ: ತಾಲೂಕಿನ ಹುಲಕೋಟಿ ಕೈಲಾಸಾಶ್ರಮದಲ್ಲಿ ವಾರ್ಷಿಕೋತ್ಸವ ಅಂಗವಾಗಿ ಕೃಷಿ, ತೋಟಗಾರಿಕೆ ಇಲಾಖೆಯ ಆತ್ಮಾ ಯೋಜನೆ ಮತ್ತು ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರಗಳ ಸಹಯೋಗದಲ್ಲಿ ಏರ್ಪಡಿಸಿದ್ದ ‘ಕೃಷಿ ತಂತ್ರಜ್ಞಾನ ಪ್ರದರ್ಶನ’ ಮೇಳ ಹೊಚ್ಚ ಹೊಸ ಮಾಹಿತಿಗಳಿಂದಾಗಿ ರೈತರ ಮನ ಸೆಳೆಯಿತು.
ಹುಲಕೋಟಿ ಕೈಲಾಸ ಆಶ್ರಮದಲ್ಲಿ ನಡೆದ 27ನೇ ವಾರ್ಷಿಕೋತ್ಸವ ಹಾಗೂ ಜಾತ್ರಾ ಮಹೋತ್ಸವ ಧಾರ್ಮಿಕ ಕಾರ್ಯಕ್ರಮಗಳಿಗೆ ಸೀಮಿತವಾಗಿರದೇ ಗ್ರಾಮೀಣ ಭಾಗದ ರೈತಾಪಿ ಜನರಿಗೆ ಕೃಷಿಯಲ್ಲಿ ಆಗಿರುವ ಬದಲಾವಣೆ ಕುರಿತು ಮಾಹಿತಿ ಒದಗಿಸಿತು. ಪ್ರಮುಖವಾಗಿ ಸಾವಯವ ಕೃಷಿ, ಸಿರಿಧಾನ್ಯ ಬೆಳೆಗಳು ಮತ್ತು ಸಿರಿಧಾನ್ಯಗಳಿಂದ ತಯಾರಿಸುವ ಖಾದ್ಯಗಳ ಪ್ರಚಾರಕ್ಕೆ ಹೆಚ್ಚಿನ ಒತ್ತು ನೀಡಿರುವುದು ಕಂಡುಬಂದಿತು.
ಸಾವಯವ ಕೃಷಿಗೆ ಒತ್ತು: ಮೇಳದಲ್ಲಿ ಸಾವಯವ ಕೃಷಿ ಪದ್ಧತಿ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಅದರೊಂದಿಗೆ ಸಮಗ್ರ ಕೃಷಿ ಪದ್ಧತಿ ಪ್ರಾತ್ಯಕ್ಷಿಕೆ ನೋಡುಗರ ಗಮನ ಸೆಳೆಯಿತು. ಸಾವಯವ ಕೃಷಿ ಪದ್ಧತಿಯಂತೆ ಬೆಳೆಗಳಿಗೆ ಕೀಟ ಬಾಧೆ ನಿವಾರಣೆ, ರೋಗ ನಿರೋಧಕ ಶಕ್ತಿ ವೃದ್ಧಿಸಲು ಬೀಜಾಮೃತ, ಜೀವಾಮೃತ, ಪಂಚಗವ್ಯ ಹಾಗೂ ತರಕಾರಿ ಬೆಳೆಗಳಿಗೆ ರೋಗ, ಕೀಟ ನಾಶಕಕ್ಕೆ ಸಿಂಪಡಿಸುವ ಬೆಳ್ಳುಳ್ಳಿ ಮತ್ತು ಮೆಣಸಿನಕಾಯಿ ಕಷಾಯ, ಬೇವಿನ ಬೀಜದ ಎಣ್ಣೆ ಸೇರಿದಂತೆ ಇತರೆ ಎಲೆಗಳಿಂದ ತಯಾರಿಸಬಹುದಾದ ಕ್ರಿಮಿನಾಶಕ ತಯಾರಿಸುವ ವಿಧಾನನಗಳನ್ನು ಪ್ರಾತ್ಯಕ್ಷಿಕೆ ಮೂಲಕ ರೈತರಿಗೆ ಮನಮುಟ್ಟುವಂತೆ ವಿವರಿಸಲಾಯಿತು.
ಇತ್ತೀಚಿನ ದಿನಗಳಲ್ಲಿ ಕೃಷಿ ಕೆಲಸ-ಕಾರ್ಯಗಳಿಗೆ ಕೂಲಿಕಾರರ ಸಮಸ್ಯೆಯನ್ನು ನಿವಾರಿಸಲು, ಸರಳ ಯಂತ್ರೋಪಕರಣಗಳ ತಯಾರಿಕೆ ಮತ್ತು ವಿಧಾನಗಳನ್ನು ಪ್ರದರ್ಶಿಸಲಾಯಿತು. ಸೈಕಲ್ ಬಿಡಿ ಭಾಗಗಳಿಂದ ಕಳೆ ತೆಗೆಯುವುದು, ತೇವಾಂಶ ಕಾಪಾಡುವ ಎಡೆಹೊಡೆಯುವ ಕುಂಟೆ, ಕಾಳು ಸ್ವಚ್ಛಗೊಳ್ಳಿಸುವ, ಗಾತ್ರಕ್ಕೆ ತಕ್ಕಂತೆ ವಿಂಗಡಿಸುವ ಯಂತ್ರಗಳು ಗಮನ ಸೆಳೆದವು.
ಕೃಷಿಯ ಹೊಸ ಹೊಸ ತಂತ್ರಜ್ಞಾನ ಜೊತೆಗೆ ಪುಸ್ತಕ, ಫಲ-ಪುಷ್ಪ ಪ್ರದರ್ಶನ, ಸಿರಿ ಧಾನ್ಯಗಳಿಂದ ತಯಾರಿಸಿದ್ದ ವಿವಿಧ ಬಗೆಯ ತಿನಿಸುಗಳ ಪ್ರದರ್ಶನ ಮತ್ತು ಮಾರಾಟ ಭರ್ಜರಿಯಾಗಿ ನಡೆಯಿತು.
ಸಾವಯವ ಕೃಷಿ, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ, ಸಿರಿಧಾನ್ಯಗಳ ಮಹತ್ವ, ಹೈನುಗಾರಿಕೆಯಲ್ಲಿ ತಂತ್ರಜ್ಞಾನ ಬಳಕೆ ಕುರಿತು ಈ ಮೇಳದಲ್ಲಿ ವಿವರಿಸಿರುವುದು ಎಲ್ಲರ ಗಮನ ಸೆಳೆಯಿತು. ಪ್ರತಿ ವರ್ಷವೂ ಕೈಲಾಸ ಆಶ್ರಮದ ಜಾತ್ರೆ-ವಾರ್ಷಿಕೋತ್ಸವದಲ್ಲಿ ಕೃಷಿ ಮೇಳ ಆಯೋಜಿಸುವುದರಿಂದ ರೈತರಿಗೆ ಹೆಚ್ಚಿನ ಮಾಹಿತಿ ಒದಗಿಸಲಾಗುತ್ತದೆ.
•ಸಂಗನಗೌಡ,
ಕೃಷಿ ವಿಜ್ಞಾನ ಕೇಂದ್ರ ನಿರ್ದೇಶಕರು