Advertisement

Gadag: ಗದಗ- ಬೆಟಗೇರಿಯಲ್ಲಿ ಥರ್ಡ್‌ ಐ ತಂತ್ರಜ್ಞಾನ ಬಳಕೆ

06:28 PM Nov 22, 2023 | Team Udayavani |

ಗದಗ: ಗದಗ ಜಿಲ್ಲೆ ಹೊಸ ತಾಂತ್ರಿಕತೆಗೆ ತೆರೆದುಕೊಳ್ಳುತ್ತಿದೆ. ಮೊದಲನೆ ಭಾಗವಾಗಿ ಗದಗ-ಬೆಟಗೇರಿ ಅವಳಿ ನಗರದಲ್ಲಿ “ಥರ್ಡ್‌ ಐ’ ಪ್ರೊಜೆಕ್ಟ್ ಕಾರ್ಯಾರಂಭ ಮಾಡಿದ್ದು, ಸಂಚಾರಿ ನಿಯಮಗಳ ಪಾಲನೆಗೆ ಹದ್ದಿನ ಕಣ್ಣಿಟ್ಟಿದೆ.

Advertisement

ಬೈಕ್‌ ಸವಾರರು ಹೆಲ್ಮೆಟ್‌ ಧರಿಸದೆ ಚಾಲನೆ ಮಾಡುವುದು, ತ್ರಿಬಲ್‌ ರೈಡಿಂಗ್‌, ಅಡ್ಡಾದಿಡ್ಡಿ ಚಲಿಸುವುದು, ರ್ಯಾಶ್‌ ಡ್ರೈವಿಂಗ್‌, ವಾಹನ ಸವಾರರು ಸೀಟ್‌ ಬೆಲ್ಟ್ ಧರಿಸದಿರುವುದು, ಆಟೋ ಚಾಲಕರು ಖಾಕಿ ಬಟ್ಟೆ ಧರಿಸದಿರುವುದು ಸೇರಿ ಸಂಚಾರಿ ನಿಯಮಗಳ ಉಲ್ಲಂಘನೆಗೆ ದಂಡದ ನೋಟಿಸ್‌ ನೇರವಾಗಿ ಮನೆಗೆ ಸೇರುತ್ತಿದೆ.

ಈಗಾಗಲೇ “ಥರ್ಡ್‌ ಐ’ ಮೂಲಕ ಅಕ್ಟೋಬರ್‌ ಆರಂಭದಿಂದ ನವೆಂಬರ್‌ 15ರವರೆಗೆ ಒಟ್ಟಾರೆ 4,100 ಪ್ರಕರಣಗಳು ದಾಖಲಾಗಿದ್ದು, 7 ಲಕ್ಷಕ್ಕೂ ಅ ಧಿಕ ದಂಡ ವಸೂಲು ಮಾಡಲಾಗಿದೆ. ಇದರಿಂದ ಎಚ್ಚೆತ್ತ ವಾಹನ ಸವಾರರು ಹೆಲ್ಮೆಟ್‌ ಧರಿಸುವುದು ಸೇರಿ ಸಂಚಾರಿ ನಿಯಮಗಳ ಪಾಲನೆಯಲ್ಲಿ ಆಸಕ್ತಿ ವಹಿಸಿರುವುದು ಗಮನಾರ್ಹ ಸಂಗತಿ.

ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ. ಪಾಟೀಲ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎಸ್‌. ನೇಮಗೌಡ ಅವರು ವಿಶೇಷ ಆಸಕ್ತಿ ವಹಿಸಿ ಜಿಲ್ಲಾಡಳಿತ ಹಾಗೂ ಗದಗ-ಬೆಟಗೇರಿ ನಗರಸಭೆ ಸಹಯೋಗದಲ್ಲಿ ಅಮೃತ ಸಿಟಿ, ನಗರೋತ್ಥಾನ 4ನೇ ಹಂತದ ಯೋಜನೆಯಡಿ ಅಂದಾಜು 3 ಕೋಟಿ ರೂ. ವೆಚ್ಚದಲ್ಲಿ ನಗರದ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ.

ಗದಗ-ಬೆಟಗೇರಿ ಅವಳಿ ನಗರಕ್ಕೆ ಪ್ರವೇಶಿಸುವ, ಹೊರ ಹೋಗುವ ಮಾರ್ಗಗಳಲ್ಲಿ, ಜನದಟ್ಟಣೆ ಪ್ರದೇಶಗಳಲ್ಲಿ, ಪ್ರಮುಖ ವೃತ್ತ ಹಾಗೂ ಸೂಕ್ಷ್ಮಪ್ರದೇಶಗಳಲ್ಲಿ ಮೂರು ವಿಧದ ವಿಶೇಷ ಕ್ಯಾಮೆರಾ ಅಳವಡಿಸಲಾಗಿದೆ. 15 ಎಎನ್‌ಪಿಆರ್‌, 6 ಪಿಟಿಜೆಡ್‌, 45 ಸಾಮಾನ್ಯ ಕ್ಯಾಮೆರಾ ಸೇರಿ ಒಟ್ಟು 114 ಕ್ಯಾಮೆರಾಗಳು ಗದಗ-ಬೆಟಗೇರಿ ಅವಳಿ ನಗರದ ಕಣ್ಗಾವಲಾಗಿವೆ. ಈ ಎಲ್ಲ ಕ್ಯಾಮೆರಾಗಳ ನಿರ್ವಹಣೆಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿ ಕಾರಿ ಕಚೇರಿಯಲ್ಲಿ ವಿಶೇಷ ಕಮಾಂಡಿಂಗ್‌ ಸೆಂಟರ್‌ ತೆರೆಯಲಾಗಿದೆ. ದಿನದ 24 ಗಂಟೆಗಳ ಕಾಲವೂ ಸಿಸಿ ಕ್ಯಾಮೆರಾಗಳ ಮಾನಿಟರಿಂಗ್‌ ಮಾಡಲಾಗುತ್ತಿದೆ.

Advertisement

ಎಎನ್‌ಪಿಆರ್‌ ಕ್ಯಾಮೆರಾ: ಗದಗ-ಬೆಟಗೇರಿ ಅವಳಿ ನಗರ ಪ್ರವೇಶಿಸುವ, ಹೊರಹೋಗುವ ಪ್ರಮುಖ ಸ್ಥಳಗಳಲ್ಲಿ 16 ಎಎನ್‌
ಪಿಆರ್‌(ಆಟೋಮ್ಯಾಟಿಕ್‌ ನಂಬರ್‌ ಪ್ಲೇಟ್‌ ರೆಕಗ್ನೆಜೇಶನ್‌) ಹೆಸರೇ ಸೂಚಿಸುವಂತೆ ವಾಹನಗಳ ನಂಬರ್‌ ಪ್ಲೇಟ್‌ ಗುರುತಿಸುವ ಕ್ಯಾಮೆರಾ ಅಳವಡಿಸಲಾಗಿದೆ. ಈ ಕ್ಯಾಮೆರಾಗಳು 24 ಗಂಟೆಗಳು ಕಾರ್ಯ ನಿರ್ವಹಿಸಲಿದ್ದು, ನಗರಸಭೆ ಪ್ರವೇಶಿಸುವ, ಹೊರ ಹೋಗುವ ವಾಹನಗಳ ಮೇಲೆ ಹದ್ದಿನ ಕಣ್ಣಿಡಲಿವೆ. ಈ ಕ್ಯಾಮೆರಾಗಳು ವಾಹನದ ನಂಬರ್‌ ಪ್ಲೇಟ್‌ ನ ಚಿತ್ರ ತೆಗೆದುಕೊಳ್ಳುತ್ತದೆ.

ಪಿಟಿಜೆಡ್‌ ಕ್ಯಾಮೆರಾ: ಗದಗ-ಬೆಟಗೇರಿ ಅವಳಿ ನಗರದಲ್ಲಿ ಜನದಟ್ಟಣೆಯಾಗುವಂತಹ ಪ್ರದೇಶಗಳಲ್ಲಿ 6 ಪಿಟಿಜೆಡ್‌ (ಪಾನ್‌
ಟಿಲ್ಟ್ ಜೂಮ್‌) ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಪಿಟಿಜೆಡ್‌ ಕ್ಯಾಮೆರಾಗಳು ಜನದಟ್ಟಣೆ ಪ್ರದೇಶಗಳಲ್ಲಿ 100 ಮೀಟರ್‌ನಷ್ಟು ದೂರದ ದೃಶ್ಯಗಳನ್ನು ಇಲ್ಲವೇ ವ್ಯಕ್ತಿಯನ್ನು ಜೂಮ್‌ ಮಾಡುವ ಮೂಲಕ ನೋಡಬಹುದಾಗಿದೆ.

ಸಾಮಾನ್ಯ ಕ್ಯಾಮೆರಾಗಳು: ಗದಗ-ಬೆಟಗೇರಿ ಅವಳಿ ನಗರದ ಮುಳಗುಂದ ನಾಕಾ, ಭೂಮರಡ್ಡಿ ಸರ್ಕಲ್‌, ಮಹಾತ್ಮ ಗಾಂಧಿ ಸರ್ಕಲ್‌ ಸೇರಿ ವಿವಿಧೆಡೆ ಈಗಾಗಲೇ 48 ಸಿಸಿ ಕ್ಯಾಮೆರಾಗಳು ಕಾರ್ಯ ನಿರ್ವಹಿಸುತ್ತಿವೆ. ಪ್ರಸ್ತುತ ಹೊಸದಾಗಿ ಬೆಟಗೇರಿ ಬಸ್‌ ನಿಲ್ದಾಣ, ಹುಯಿಲಗೋಳ ಕ್ರಾಸ್‌, ಜರ್ಮನ್‌ ಆಸ್ಪತ್ರೆ, ಅಂಭಾಭವಾನಿ ಸರ್ಕಲ್‌, ಹೆಲ್ತ್‌ಕ್ಯಾಂಪ್‌, ಕುಷ್ಟಗಿ ಚಾಳ, ಝಂಡಾ ಸರ್ಕಲ್‌, ಮಹೇಂದ್ರಕರ್‌ ಸರ್ಕಲ್‌, ಹಳೇ ಡಿಸಿ ಆಫೀಸ್‌ ಸರ್ಕಲ್‌, ಹುಡ್ಕೊ, ಹಾತಲಗೇರಿ ನಾಕಾ, ಡಂಬಳ ನಾಕಾ ಸೇರಿ ವಿವಿಧೆಡೆ ಹೆಚ್ಚುವರಿಯಾಗಿ 45 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಗದಗ-ಬೆಟಗೇರಿ ಅವಳಿ ನಗರದ ಸುರಕ್ಷತೆ ಹಾಗೂ ಭದ್ರತೆಗೆ ವಿಶೇಷ ಕ್ರಮ ಜರುಗಿಸಲಾಗಿದೆ. ಕಳ್ಳತನ, ಗಲಾಟೆ, ಅಪಘಾತ ಸೇರಿ ವಿವಿಧ ಪ್ರಕರಣಗಳ ಪತ್ತೆಗೆ ಥರ್ಡ್‌ ಐ ಸಹಕಾರಿಯಾಗಿದೆ. ಪಾರದರ್ಶಕ ಆಡಳಿತ ವ್ಯವಸ್ಥೆಗೆ ಥರ್ಡ್‌ ಐ ಉಪಯುಕ್ತ ಯೋಜನೆಯಾಗಿದ್ದು, ಆಡಳಿತ ವ್ಯವಸ್ಥೆ ಸುಧಾರಣೆಗೆ ಸಾರ್ವಜನಿಕರು ಇಲಾಖೆಯೊಂದಿಗೆ ಕೈ ಜೋಡಿಸಬೇಕು. ಸಂಚಾರ
ನಿಯಮ ಪಾಲಿಸಬೇಕು ಎಂಬುದೇ ಥರ್ಡ್‌ ಐ ಉದ್ದೇಶ.
*ಬಿ.ಎಸ್‌. ನೇಮಗೌಡ
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಗದಗ

ನಮ್ಮ ಜೀವನಶೈಲಿ ಸರಿ ದಾರಿಯಲ್ಲಿ ಹೋಗಲು ಮೊದಲನೇ ಪ್ರಯತ್ನವಾಗಿ ಥರ್ಡ್‌ ಐ ಕೆಲಸ ಮಾಡುತ್ತಿದೆ. ಈಗಾಗಲೇ
ಗದಗ-ಬೆಟಗೇರಿ ಅವಳಿ ನಗರದ ವಾಹನ ಸವಾರರು ಜಾಗೃತಗೊಂಡಿದ್ದು, ಸಂಚಾರಿ ನಿಯಮಗಳನ್ನು ಕಾನೂನಾತ್ಮಕವಾಗಿ
ಪಾಲಿಸುವಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ಮುಂದೆಯೂ ಜಿಲ್ಲಾದ್ಯಂತ ಥರ್ಡ್‌ ಐ ವಿಸ್ತರಣೆಗೆ ಚಿಂತಿಸಲಾಗುತ್ತಿದೆ.
*ಎಚ್‌.ಕೆ. ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವರು, ಗದಗ

*ಅರುಣಕುಮಾರ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next