ಗದಗ: ಟ್ರ್ಯಾಕ್ಟರ್ ಸಾಲ ಮರು ಪಾವತಿ ವಿಷಯದಲ್ಲಿ ಉಂಟಾದ ಕಲಹ ವಿಕೋಪಕ್ಕೆ ಹೋಗಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಲಕ್ಷ್ಮೇಶ್ವರ ಸಮೀಪದ ಯಲವಗಿ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೋನಾಳ ಗ್ರಾಮದ ತಾಯಿ ಸಾವಕ್ಕೆ ತೇಲಿ (45), ಮಗ ಮಂಜುನಾಥ್ (25) ಹಾಗೂ ಸಾವಕ್ಕನ ಸಹೋದರಿ ರೇಣವ್ವ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು.
ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಯಲವಿಗಿ ಗ್ರಾಮದ ಬಳಿಯ ರೈಲ್ವೆ ಹಳಿಗೆ ಬಿದ್ದು ಮಗ ಮಂಜುನಾಥ್, ತಾಯಿ ರೇಣವ್ವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾಯಿ-ಮಗನ ಆತ್ಮಹತ್ಯೆ ಸುದ್ದಿ ತಿಳಿದ ಸಾವಕ್ಕ, ಗೋನಾಳ ಗ್ರಾಮದ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಇದನ್ನೂ ಓದಿ:Kadaba; ಪ್ರೀತಿ ನಿರಾಕರಿಸಿದ್ದೆ ಕೃತ್ಯಕ್ಕೆ ಕಾರಣ?; ಯುನಿಫಾರ್ಮ್ ಧರಿಸಿ ಬಂದಿದ್ದ ಆರೋಪಿ!
ಟ್ರ್ಯಾಕ್ಟರ್ ಸಾಲ ಕಟ್ಟುವ ವಿಷಯಕ್ಕೆ ಸಂಬಂಧಿಸಿದಂತೆ ಮನೆಯಲ್ಲಿ ಮಂಜುನಾಥ್ ಗಲಾಟೆ ಮಾಡಿಕೊಂಡಿದ್ದ ಎನ್ನಲಾಗಿದೆ. ಘಟನೆಯ ಸುದ್ದಿ ತಿಳಿದ ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.
ಲಕ್ಷ್ಮೇಶ್ವರ ಪೊಲೀಸರು ಗೋನಾಳ ಗ್ರಾಮಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.