ಗದಗ: ಉತ್ತರ ಕರ್ನಾಟಕ ಅದರಲ್ಲೂ ಗದಗ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಬೆಳೆಯುವ ಪ್ರಮುಖ ಬೆಳೆ ಹೆಸರು. ಪ್ರಸಕ್ತ ವರ್ಷ ಮುಂಗಾರಿನಲ್ಲಿ ಜಿಲ್ಲೆಯ ರೈತರು ಅಧಿಕ ಪ್ರಮಾಣದಲ್ಲಿ ಹೆಸರು ಬೆಳೆದಿದ್ದು, ಇಳುವರಿ ಉತ್ತಮವಾಗಿದೆ. ಆದರೆ ಹೆಸರು ಬೆಳೆದ ರೈತರು ಬೆಲೆ ಇರದ ಕಾರಣ ತೊಂದರೆ ಅನುಭವಿಸುವಂತಾಗಿದೆ.
ಕಳೆದ ಕೆಲ ದಿನಗಳಿಂದ ಹೆಸರು ಕಟಾವು ಆರಂಭವಾಗಿದ್ದು, ಮಾರುಕಟ್ಟೆಗೆ ಹೆಸರು ಧಾವಿಸುತ್ತಿದೆ. ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕನಿಷ್ಟ 3,000 ರೂ.ದಿಂದ ಗರಿಷ್ಠ 6,000 ರೂ. ನಿಗದಿಯಾಗಿದೆ. ಹೆಸರು ಬೆಳೆಗೆ ಉತ್ತಮ ಬೆಲೆ ನಿಗದಿಯಾಗದ ಕಾರಣ ರೈತರು ಸಂಕಷ್ಟ ಎದುರಿಸುವಂತಾಗಿದೆ. ಸರಕಾರ ಈಗಾಗಲೇ ಹೆಸರು ಬೆಳೆಗೆ ಪ್ರತಿ ಕ್ವಿಂಟಲ್ಗೆ 8,682 ರೂ. ಬೆಂಬಲ ಬೆಲೆ ಘೋಷಿಸಿದೆ. ಆದರೆ ಜಿಲ್ಲಾಡಳಿತ ಹೆಸರು ಖರೀದಿ ಕೇಂದ್ರ ತೆರೆಯಲು ಮುಂದಾಗುತ್ತಿಲ್ಲ. ಕೂಡಲೇ ಬೆಂಬಲ ಬೆಲೆ ಯೋಜನೆಯಡಿ ಹೆಸರು ಕಾಳು ಖರೀದಿ ಕೇಂದ್ರ ತೆರೆಯಬೇಕಿದೆ.
ಹಲ್ಲು ಇದ್ದವನಿಗೆ ಕಡಲೆ ಇಲ್ಲ, ಕಡಲೆ ಇದ್ದವನಿಗೆ ಹಲ್ಲಿಲ್ಲ ಎಂಬಂತಾಗಿದೆ ಜಿಲ್ಲೆಯ ರೈತರ ಪರಿಸ್ಥಿತಿ. ಕಳೆದ ವರ್ಷ ಭೀಕರ ಬರಗಾಲದಿಂದ ಮುಂಗಾರು ಜತೆಗೆ ಹಿಂಗಾರು ಸಂಪೂರ್ಣ ಕೈಕೊಟ್ಟಿತ್ತು. ಪ್ರಸಕ್ತ ವರ್ಷ ಮುಂಗಾರು ಹಂಗಾಮಿನಲ್ಲಿ ಸುರಿದ ಮಳೆಯಿಂದ ಜಿಲ್ಲೆಯಲ್ಲಿ ಹೆಸರು ಇಳುವರಿ ಉತ್ತಮವಾಗಿದೆ. ಆದರೆ ಮಾರುಕಟ್ಟೆಯಲ್ಲಿ ನಿರೀಕ್ಷಿತ ಬೆಲೆ ದೊರೆಯದೇ ಹೆಸರು ಬೆಳೆಗಾರರು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.
ಗುರಿ ಮೀರಿ ಹೆಸರು ಬಿತ್ತನೆ: ಪ್ರಸಕ್ತ ವರ್ಷ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ಜಿಲ್ಲೆಯಲ್ಲಿ ಕೃಷಿ ಇಲಾಖೆಯ 1.25 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಪೈಕಿ 1.31 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತನೆಯಾಗಿದೆ. ಶೇ.104.60 ಬಿತ್ತನೆಯಾಗುವ ಮೂಲಕ ಕೃಷಿ ಇಲಾಖೆ ಗುರಿ ಮೀರಿ ಶೇ. 4.60 ಹೆಚ್ಚಿನ ಪ್ರಮಾಣದಲ್ಲಿ ಹೆಸರು ಬಿತ್ತನೆಯಾಗಿದೆ.
ಬೆಲೆ ಇಲ್ಲದೇ ರೈತರ ಪರದಾಟ: ರೈತರು ಈ ಬಾರಿ ಮುಂಗಾರಿನಲ್ಲಿ ಸಾಲ ಮಾಡಿ ಹೆಸರು ಬಿತ್ತಿದ್ದಾರೆ. ಬಳಿಕ ಕಳೆ ತೆಗೆಯುವುದು, ಕ್ರಿಮಿನಾಶಕ ಸಿಂಪರಿಸುವುದು ಸೇರಿದಂತೆ ಬೆಳೆ ಕಟಾವು ಆಗಿ ಮಾರುಕಟ್ಟೆಗೆ ಸಾಗಿಸುವುದರೊಳಗೆ ಸುಮಾರು 13ರಿಂದ 15 ಸಾವಿರ ರೂ. ಖರ್ಚು ಬರುತ್ತದೆ. ಪ್ರತಿ ಎಕರೆಗೆ ಐದರಿಂದ ಆರು ಚೀಲ ಹೆಸರು ಇಳುವರಿ ಬಂದಿದೆ. ಆದರೆ ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ 4ರಿಂದ 6 ಸಾವಿರ ರೂ. ದರ ನಿಗದಿಯಾಗಿದೆ. ಅದರಲ್ಲೂ ಬಹುತೇಕ ರೈತರಿಗೆ ಪ್ರತಿ ಕ್ವಿಂಟಲ್ಗೆ ಸರಾಸರಿ 3,500 ರೂ.ಕೈಗೆ ಬರುತ್ತಿದ್ದು, ಬೆಳೆಗೆ ಖರ್ಚು ಮಾಡಿದ ಕೂಲಿಯೂ ಮರಳುತ್ತಿಲ್ಲ ಎಂಬುದು ರೈತರ ಅಳಲಾಗಿದೆ.
ಕಳೆದೊಂದು ವಾರದಿಂದ ನಗರದ ಎಪಿಎಂಸಿ ಮಾರುಕಟ್ಟೆಗೆ 10 ಸಾವಿರ ಕ್ವಿಂಟಲ್ ಗೂ ಅಧಿಕ ಹೆಸರು ಆವಕವಾಗಿದೆ. ಸುಮಾರು ದಿನಗಳಲ್ಲಿ ಜಿಲ್ಲೆಯ ಬಹುತೇಕ ಹೆಸರು ಕಟಾವು ಮುಗಿಯುತ್ತದೆ. ಆದರೆ ಹೆಸರು ಬೆಲೆ ಮಾತ್ರ ಚೇತರಿಕೆ ಕಂಡಿಲ್ಲ. ಮಾರುಕಟ್ಟೆಯಲ್ಲಿ ಮಾತ್ರ ದಿನದಿಂದ ದಿನಕ್ಕೆ ಬೆಲೆ ಕುಸಿಯುತ್ತದೆ. ಈ ಹಿನ್ನೆಲೆಯಲ್ಲಿ ಹೆಸರು ಬೆಳೆಗಾರರ ರಕ್ಷಣೆಗಾಗಿ ತಕ್ಷಣವೇ ಬೆಂಬಲ ಬೆಲೆಯಲ್ಲಿ ಹೆಸರು ಖರೀದಿ ಕೇಂದ್ರ ಆರಂಭಿಸಬೇಕು.
– ಮುತ್ತನಗೌಡ ಚೌಡರಡ್ಡಿ, ಜಿಲ್ಲಾ ರೈತ ಸಂಘದ ಅಧ್ಯಕ್ಷ.
ಮುಂದಿನ ಒಂದು ವಾರದೊಳಗೆ ಬೆಂಬಲ ಬೆಲೆ ಯೋಜನೆಯಡಿ ಹೆಸರು ಕಾಳು ಖರೀದಿ ಕೇಂದ್ರ ತೆರೆಯದಿದ್ದಲ್ಲಿ ಜಿಲ್ಲೆಯ ಎಲ್ಲ ತಾಲೂಕು ಹಾಗೂ ಜಿಲ್ಲಾ ಎಪಿಎಂಸಿ ಗೇಟುಗಳಿಗೆ ಬೀಗ ಹಾಕಿ, ವಹಿವಾಟು ಬಂದ್ ಮಾಡಿ ಖರೀದಿ ಕೇಂದ್ರ ತೆರೆಯುವರೆಗೆ ಚಳವಳಿ ಮಾಡಲಾಗುವುದು. ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಇದರ ಹೊಣೆಯನ್ನು ಹೊರಬೇಕಾಗುತ್ತದೆ.
-ಮಹಾದೇವಗೌಡ ಪಾಟೀಲ, ಜಿಲ್ಲಾ ರೈತ ಸಂಘದ ಗೌರವಾಧಕ್ಷ.
-ಅರುಣಕುಮಾರ ಹಿರೇಮಠ