Advertisement

ಕಳೆಗುಂದಿದ ಗದಗ ಸ್ಟೇಷನ್‌ ರಸ್ತೆ!

09:53 AM Feb 11, 2019 | |

ಗದಗ: ನಗರದ ಸೌಂದರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಇಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಝೇಂಡಾ ಸರ್ಕಲ್‌ ವರೆಗೆ ರಸ್ತೆ ಅಕ್ಕಪಕ್ಕದ ಮರಗಳಿಗೆ ಅಳವಡಿಸಿದ್ದ ವರ್ಣರಂಜಿತ ವಿದ್ಯುತ್‌ ದೀಪಗಳ ನಿರ್ವಹಣೆ ಕೊರತೆಯಿಂದ ಬಹುತೇಕ ಹಾಳಾಗಿವೆ. ಹೀಗಾಗಿ ಇಲ್ಲಿನ ಮುನ್ಸಿಪಲ್‌ ಮುಂಭಾಗದ ಸ್ಟೇಷನ್‌ ರಸ್ತೆ ಕಳೆಗುಂದಿದೆ.

Advertisement

ಬ್ರಿಟಿಷ್‌ ಕಾಲಾವಧಿಯಲ್ಲೇ ನಿರ್ಮಾಣಗೊಂಡಿರುವ ನಗರದ ಐತಿಹಾಸಿಕ ದ್ವ್ವಿಪಥ ಮಾರ್ಗದ ಕಳೆ ಹೆಚ್ಚಿಸಲು ನಗರಸಭೆಯಿಂದ 2017ರಲ್ಲಿ ರಸ್ತೆ ಎರಡೂ ಮಗ್ಗುಲಲ್ಲಿರುವ ಮರಗಳಿಗೆ ವಿದ್ಯುತ್‌ ಬೆಳಕಿನ ವ್ಯವಸ್ಥೆ ಮಾಡಲಾಗಿತ್ತು. ನಗರಸಭೆ ಅನುದಾನಡಿ ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ಒಟ್ಟು 46 ಮರಗಳಿಗೆ ಬುಡದಿಂದ ಕೊಂಬೆಗಳವರೆಗೆ ಸುಮಾರು 6-7 ಅಡಿ ಎತ್ತರದ ವರೆಗೆ ಟ್ರೀ ವ್ರಾಪ್ತಡ(ಬಳ್ಳಿ ಮಾದರಿಯ) ವಿದ್ಯುತ್‌ ದೀಪಗಳ ಸರಪಳಿಯನ್ನು ಸುತ್ತಲಾಗಿತ್ತು. ಮರದ ಬುಡದಿಂದ ಆಕಾಶ ಮುಖವಾಗಿ ತರಹೇವಾರಿ ಬಣ್ಣದ ಪಾರ್ಕಿಂಗ್‌ ಲೈಟ್‌ಗಳು ಈ ಮಾರ್ಗದ ಅಂದ ಹೆಚ್ಚಿಸಿತ್ತು.

ಸಂಜೆ 6.30ರಿಂದ ರಾತ್ರಿಯಿಡೀ ಬೆಳಗುತ್ತಿದ್ದ ಅಲಂಕಾರಿಕ ದೀಪಗಳ ಬೆಳಕಿನಲ್ಲಿ ಸಂಚರಿಸುವುದು ಮನಸ್ಸಿಗೆ ಮುದ ನೀಡುತ್ತಿತ್ತು. ರಸ್ತೆ ಇಕ್ಕೆಲಗಳಲ್ಲಿ ಸಾಲಾಗಿ ಅಳವಡಿಸಿರುವ ಸಿಮೆಂಟಿನ ಮೇಜುಗಳು ಸಾರ್ವಜನಿಕರನ್ನು ಕೈಬೀಸಿ ಕರೆಯುತ್ತಿದ್ದವು. 250 ಹಾಗೂ 70 ವ್ಯಾಟ್ ಬಲ್ಬ್ಗಳ ವರ್ಣರಂಜಿತ ವಿದ್ಯುತ್‌ ಬೆಳಕು ಸವಿಯಲು ರಾತ್ರಿ 7.30ರಿಂದ 10ರವರೆಗೆ ನಗರದ ವಿವಿಧೆಡೆಯಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದರು.

ವಾರಾಂತ್ಯದ ಶನಿವಾರ ಮತ್ತು ರವಿವಾರ ರಾತ್ರಿ 9ರ ವೇಳೆಗೆ ಬಳಿಕ ಮನೆಯಿಂದ ಬುತ್ತಿ ಸಮೇತ ಕಾರುಗಳಲ್ಲಿ ಆಗಮಿಸುತ್ತಿದ್ದ ಸ್ಥಿತಿವಂತರು, ಈ ಮಾರ್ಗದಲ್ಲಿ ಕೆಲ ಸಮಯ ಕಳೆದು ಕುಟುಂಬ ಸಮೇತ ಊಟ ಮಾಡುತ್ತಿರುವುದು ಆಗಾಗ ಕಂಡುಬರುತ್ತಿತ್ತು. ಇದು ಬೆಂಗಳೂರಿನ ಬ್ರಿಗೇಡ್‌ ರೋಡ್‌ ಜೀವನಶೈಲಿ ನೆನಪಿಸುತ್ತಿತ್ತು. ಆದರೆ ಅಲಂಕಾರಿಕ ದೀಪಗಳ ನಿರ್ವಹಣೆ ಕೊರತೆಯಿಂದ ವರ್ಣರಂಜಿತ ದೀಪಗಳು ಒಂದೊಂದಾಗಿ ಕಣ್ಣು ಮುಚ್ಚುತ್ತಿವೆ. ಪರಿಣಾಮ ವಿದ್ಯುತ್‌ ಬೆಳಕಿನ ಚಿತ್ತಾರದಿಂದ ಕಂಗೊಳಿಸುತ್ತಿದ್ದ ಈ ಮಾರ್ಗ ಇದೀಗ ದಿನದಿಂದ ದಿನಕ್ಕೆ ಕಳೆಗುಂದುತ್ತಿದೆ. ಮಾರ್ಗದಲ್ಲಿ ಸುತ್ತಾಡಲು ಬರುತ್ತಿದ್ದ ಸಾರ್ವಜನಿಕರ ಸಂಖ್ಯೆಯೂ ಕಡಿಮೆಯಾಗಿದೆ ಎನ್ನತ್ತಾರೆ ಸ್ಥಳಿಯ ವರ್ತಕರು.

ಗುತ್ತಿಗೆ ಸಂಸ್ಥೆ ನಿರ್ಲಕ್ಷ್ಯ ಕಾರಣ: ಇಲ್ಲಿನ ಸ್ಟೇಶನ್‌ ರಸ್ತೆಯುಲ್ಲಿರುವ ಗಿಡಮರಗಳಿಗೆ ಅಳವಡಿಸಿದ್ದ ಬೆಳಕಿನ ವಿದ್ಯುತ್‌ ದೀಪಗಳ ತಂತಿಗಳು ತುಂಡಾಗಿವೆ. ಕೆಲವು ದುರಸ್ತಿಗೆ ಕಾದು ನಿಂತಿದ್ದು, ಇನ್ನೂ ಕೆಲವು ಮರಗಳಿಗೆ ಸುತ್ತಿದ್ದ ವಿದ್ಯುತ್‌ ದೀಪಗಳ ಬಳ್ಳಿಗಳು, ವಿದ್ಯುತ್‌ ದೀಪಗಳ ಉಪಕರಣಗಳು ಮಾಯವಾಗಿವೆ. ಈ ಮಾರ್ಗದಲ್ಲಿನ ಅಲಂಕಾರಿಕ ವಿದ್ಯುತ್‌ ದೀಪಗಳ ನಿರ್ವಹಣೆ ಹೊಣೆ ಹೊತ್ತಿರುವ ಗುತ್ತಿಗೆ ಸಂಸ್ಥೆ ನಿರ್ಲಕ್ಷ್ಯವೇ ಇದಕ್ಕೆ ಕಾರಣ. ಕೆಲ ತಿಂಗಳಿಂದ ಬಹುತೇಕ ವಿದ್ಯುತ್‌ ದೀಪಗಳು ಕಣ್ಣು ಮುಚ್ಚಿದ್ದರೂ ಗುತ್ತಿಗೆ ಸಂಸ್ಥೆ ದುರಸ್ತಿಗೆ ಮುಂದಾಗುತ್ತಿಲ್ಲ.

Advertisement

ನಗರದ ಸ್ಟೇಶನ್‌ ರಸ್ತೆಯಲ್ಲಿರುವ ಬಣ್ಣಬಣ್ಣದ ವಿದ್ಯುತ್‌ ದೀಪದ ದುರಸ್ತಿ ಕಾರ್ಯವನ್ನು ಶೀಘ್ರವೇ ಕೈಗೆತ್ತಿಕೊಳ್ಳಲಾಗುತ್ತದೆ. ರಸ್ತೆ ಬದಿಯಲ್ಲಿ ಹರಿದು ಬಿದ್ದಿರುವ ವೈರ್‌ಗಳನ್ನು ತೆಗೆದು ಹೊಸ ತಂತಗಳನ್ನು ಜೊಡಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಈ ಹಿಂದಿನಂತೆ ಈ ಮಾರ್ಗವನ್ನು ವರ್ಣರಂಜಿತವನ್ನಾಗಿಸುವ ಪ್ರಯತ್ನ ಮಾಡುತ್ತೇವೆ. 
• ಮನೂರ್‌ ಅಲಿ, ನಗರಸಭೆ ಪೌರಾಯುಕ್ತ

ಇದಕ್ಕೆ ನಗರಸಭೆ ಆಡಳಿತ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಕಳಪೆ ಗುಣಮಟ್ಟದ ವಿದ್ಯುತ್‌ ದೀಪ ಅಳವಡಿಸಿದ್ದರಿಂದ ಕೆಲ ವಿದ್ಯುತ್‌ ಬೆಳಕಿನ ಉಪಕರಣಗಳು ಹಾಳಾಗಿವೆ. ಲಕ್ಷಾಂತರ ರೂ. ವೆಚ್ಚದಲ್ಲಿ ಅಳವಡಿಸಿರುವ ವಿದ್ಯುತ್‌ ದೀಪಗಳು ಒಂದೇ ವರ್ಷಕ್ಕೆ ಕೆಟ್ಟುನಿಂತಿದ್ದರೂ ಗುತ್ತಿಗೆ ಸಂಸ್ಥೆ ವಿರುದ್ಧ ನಗರಸಭೆ ಯಾವುದೇ ಕ್ರಮಕ್ಕೆ ಮುಂದಾಗದಿರುವುದೂ ಅನುಮಾನಕ್ಕೆ ಕಾರಣವಾಗಿದೆ. ಈ ಕುರಿತು ನಮ್ಮ ಸಂಘಟನೆಯಿಂದ ಶೀಘ್ರವೇ ನಗರಸಭೆ ವಿರುದ್ಧ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತೇವೆ.
• ಸೈಯದ್‌ ಖಾಲಿದ್‌ ಕೊಪ್ಪಳ,
ಅಖಿಲ ಕರ್ನಾಟಕ ಜನಶಕ್ತಿ ವೇದಿಕೆ ರಾಜ್ಯಾಧ್ಯಕ್ಷ

ಅವಳಿ ನಗರ ಅಭಿವೃದ್ಧಿಗೊಳಿಸುವಲ್ಲಿ ನಗರಸಭೆ ಆಡಳಿತ ಪಕ್ಷ ಸಂಪೂರ್ಣ ವಿಫಲವಾಗಿದೆ. ನಗರದ ಅಲಂಕಾರದ ಹೆಸರಲ್ಲಿ ಸಾರ್ವಜನಿಕರ ತೆರಿಗೆ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ರಸ್ತೆ ಅಲಂಕಾರಕ್ಕೆ ವಿದ್ಯುತ್‌ ದೀಪಗಳ ಅಳವಡಿಕೆಗೆ ತೋರಿದಷ್ಟು ಆಸಕ್ತಿ ಅವುಗಳ ನಿರ್ವಹಣೆಗೆ ತೋರದಿರುವುದೇ ಈ ದುಸ್ಥಿತಿಗೆ ಕಾರಣ.
 • ಮಂಜುನಾಥ ಮುಳಗುಂದ,
ನಗರಸಭೆ ಬಿಜೆಪಿ ಸದಸ್ಯ

ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next