ಗದಗ: ನಗರದ ತೋಂಟದಾರ್ಯ ಮಠದ ಶಿವಾನುಭವ ಮಂಟಪದಲ್ಲಿ ಲಿಂ. ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರ 6ನೇ ಪುಣ್ಯಸ್ಮರಣೆ ಅಂಗವಾಗಿ ಸೋಮವಾರ ಜರುಗಿದ ಮರಣವೇ ಮಹಾನವಮಿ ಆಚರಣೆ ಕಾರ್ಯಕ್ರಮದಲ್ಲಿ ನಾಡೋಜ ಡಾ. ಗೊ.ರು. ಚನ್ನಬಸಪ್ಪ ಅವರಿಗೆ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿಯು 5 ಲಕ್ಷ ರೂ. ಮೊತ್ತವನ್ನು ಹೊಂದಿದ್ದು, ನಾಡೋಜ ಡಾ. ಗೊ.ರು. ಚನ್ನಬಸಪ್ಪ ಅವರು 5ನೇ ಪ್ರಶಸ್ತಿಗೆ ಭಾಜನರಾದರು.
ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಮಹಾತ್ಮ ಗಾಂಧೀಜಿ ಅವರ ತತ್ವ ಸಿದ್ದಾಂತಗಳನ್ನು ಮೈಗೂಡಿಸಿಕೊಂಡ ನಾಡೋಜ ಡಾ. ಗೊ.ರು. ಚನ್ನಬಸಪ್ಪ ಅವರು ಸಜ್ಜನಿಕೆಗೆ ಹೆಸರಾದವರು. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಹಲವಾರು ಸಾಹಿತ್ಯಗಳನ್ನು ರಚಿಸುವ ಮೂಲಕ ನೂರಾರು ಸಾಹಿತಿಗಳಿಗೆ ಪ್ರೇರಣೆಯಾಗಿದ್ದಾರೆ. ಅವರ ಬದುಕಿನ ಸಾಧನೆಗಾಗಿ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿಯು ದೊರೆತಿದೆ ಎಂದು ಹೇಳಿದರು.
ಬಸವವಣ್ಣನವರನ್ನು ಜಗತ್ತಿನ ಮೂಲೆಮೂಲೆಯೊಳಗೆ ರಾಜ್ಯರಾಜ್ಯದ ಮನೆಮನೆಯೊಳಗೆ ಮುಟ್ಟಿಸಿದ ಮಹತ್ವದ ಕಾರ್ಯ ಮಾಡಿರುವುದು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಸಲ್ಲುತ್ತದೆ. ಶರಣ ಸಾಹಿತ್ಯವನ್ನು ಯುವ ಸಾಹಿತಿಗಳ ಮನಮನಗಳಿಗೆ ತಲುಪಿಸಿರುವ ಮಹತ್ ಕಾರ್ಯ ಗೊ.ರು.ಚ ಅವರಿಗೆ ಸಲ್ಲುತ್ತದೆ ಎಂದರು.
ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಿರೋಳ ತೋಂಟದಾರ್ಯ ಶಾಖಾಮಠದ ಶಾಂತಲಿಂಗ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ರೋಣ ಶಾಸಕ ಜಿ.ಎಸ್. ಪಾಟೀಲ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಮಾಜಿ ಸಚಿವ ಎಸ್.ಎಸ್. ಪಾಟೀಲ, ಮಾಜಿ ಶಾಸಕರಾದ ಡಿ.ಆರ್. ಪಾಟೀಲ, ರಾಮಕೃಷ್ಣ ದೊಡ್ಡಮನಿ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ ಸೇರಿ ಅನೇಕರು ಇದ್ದರು.