Advertisement

ಗದಗ: ಹಾಕಿ ಕ್ರೀಡಾಂಗಣಕ್ಕೆ ಉದ್ಘಾಟನೆ ಭಾಗ್ಯ ಕಲ್ಪಿಸಿ

06:18 PM Jul 03, 2023 | Team Udayavani |

ಗದಗ: ಗದಗ-ಬೆಟಗೇರಿ ಅವಳಿ ನಗರದಲ್ಲಿ ನಿರ್ಮಾಣವಾಗಿರುವ ಹಾಕಿ ಕ್ರೀಡಾಂಗಣ ಉದ್ಘಾಟನೆ, ಕ್ರಿಕೆಟ್‌ ಮೈದಾನ ಕಾಮಗಾರಿ
ಆರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಜಿಲ್ಲಾ ಯುವ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ ನೇತೃತ್ವದಲ್ಲಿ ಪದಾಧಿಕಾರಿಗಳು, ಯುವ ಕಾಂಗ್ರೆಸ್‌ ಮುಖಂಡರು ಜಿಲ್ಲಾ ಉಸ್ತುವಾರಿ ಸಚಿವ ಡಾ| ಎಚ್‌.ಕೆ. ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.

Advertisement

ಗದಗ-ಬೆಟಗೇರಿ ಅವಳಿ ನಗರವು ಕಲೆ, ಸಂಗೀತ, ಸಾಹಿತ್ಯದೊಂದಿಗೆ ಕ್ರೀಡಾ ಕ್ಷೇತ್ರದಲ್ಲೂ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಜಿಲ್ಲೆಗಳಲ್ಲೊಂದಾಗಿದೆ. ಪಂಡಿತ್‌ ಭೀಮಸೇನ್‌ ಜೋಶಿ ಅವರು ಸಂಗೀತ ಕ್ಷೇತ್ರದ ಸಾಧನೆಗೆ ಭಾರತ ರತ್ನ ಪುರಸ್ಕೃತರಾಗಿ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದು, ಕ್ರಿಕೆಟ್‌ನಲ್ಲಿ ಸುನೀಲ್‌ ಜೋಶಿ ಅವರು ಗದುಗಿನ ಕೀರ್ತಿ ಹೆಚ್ಚಿಸಿದ್ದಾರೆ.

ಬೆಟಗೇರಿಯ ಗಾಂಧಿ ನಗರದಲ್ಲಿ ಈಗಾಗಲೇ ಸುಸಜ್ಜಿತ ಹಾಕಿ ಕ್ರೀಡಾಂಗಣ ನಿರ್ಮಾಣಗೊಂಡು ಹಲವು ತಿಂಗಳು ಕಳೆದರೂ
ಲೋಕಾರ್ಪಣೆಗೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ, ಹಾಕಿ ಪಟುಗಳು ಅಭ್ಯಾಸಕ್ಕೆ ಮೈದಾನವಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ನಿರ್ಮಾಣಗೊಂಡಿರುವ ಹಾಕಿ ಕ್ರೀಡಾಂಗಣವನ್ನು ಲೋಕಾರ್ಪಣೆಗೊಳಿಸುವ ಮೂಲಕ ಹಾಕಿ ಕ್ರೀಡೆಗೆ ಉತ್ತೇಜನ ನೀಡಬೇಕೆಂದು ಮನವಿ ಮಾಡಿದರು.

ನರಸಾಪೂರ ಗ್ರಾಮ ಹೊರವಲಯದಲ್ಲಿ ಕ್ರಿಕೆಟ್‌ಗೆ ಹೊಸದಾಗಿ ಕ್ರೀಡಾಂಗಣ ನಿರ್ಮಿಸಲು ಭೂಮಿ ಖರೀದಿ ಮಾಡಿದ್ದರೂ, ಕ್ರೀಡಾಂಗಣ ನಿರ್ಮಾಣ ಕಾಮಗಾರಿ ಆರಂಭವಾಗುತ್ತಿಲ್ಲ. ಆದ್ದರಿಂದ ಖರೀದಿ ಮಾಡಿದ ಜಾಗದಲ್ಲಿ ಅನುದಾನ ಬಿಡುಗಡೆಗೊಳಿಸಿ ಶೀಘ್ರದಲ್ಲಿ ಸುಸಜ್ಜಿತ ಕ್ರಿಕೆಟ್‌ ಕ್ರೀಡಾಂಗಣ ನಿರ್ಮಾಣಕ್ಕೆ ಚಾಲನೆ ನೀಡಬೇಕೆಂದು ಒತ್ತಾಯಿಸಿದರು.

ಇನ್ನು ಬಿಲ್ಲುಗಾರಿಕೆ ಕ್ಷೇತ್ರದಲ್ಲಿ ಸ್ಥಳೀಯ ಬಡ್ನ ಕುಟುಂಬದ ಕ್ರೀಡಾಪಟುಗಳು ರಾಜ್ಯಮಟ್ಟದ ಕ್ರೀಡೆಗಳಲ್ಲಿ ಗಮನ ಸೆಳೆದಿದ್ದು, ಸ್ಕಾ ಶ್‌ ಹಾಗೂ ಬಿಲ್ಲುಗಾರಿಕೆಗೆ ವಿಶೇಷ ಆದ್ಯತೆ ನೀಡಬೇಕು. ಟೆನ್ನಿಸ್‌ ಕೋರ್ಟ್‌ ನಿರ್ಮಾಣ ಮತ್ತು ಗದಗ ತಾಲೂಕಿನ ಮುಳಗುಂದ ಪಟ್ಟಣದಲ್ಲಿ ಗ್ರಾಮೀಣ ಕ್ರೀಡಾಪಟುಗಳಿಗೆ ನೆರವಾಗಲು ಈ ಹಿಂದೆಯೇ ಯೋಜಿಸಿದ್ದ ಕ್ರಿಕೆಟ್‌ ಮೈದಾನ ನಿರ್ಮಿಸಲು ವಿಶೇಷ ಯೋಜನೆ ರೂಪಿಸಿ, ಅನುದಾನ ಒದಗಿಸುವ ಮೂಲಕ ಕ್ರಿಕೆಟ್‌ ಮೈದಾನ ನಿರ್ಮಾಣಕ್ಕೆ ಸಹಕರಿಸಬೇಕೆಂದು ಮನವಿ ಮಾಡಿದರು.

Advertisement

ಈ ವೇಳೆ ಜಿಲ್ಲಾ ಯುವ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ, ಪ್ರಧಾನ ಕಾರ್ಯದರ್ಶಿ ಕೃಷ್ಣಗೌಡ ಪಾಟೀಲ, ಜಿಪಂ
ಮಾಜಿ ಅಧ್ಯಕ್ಷ ಸಿದ್ದು ಪಾಟೀಲ, ಮುಖಂಡರಾದ ಉಮರ್‌ಫಾರೂಖ್‌ ಹುಬ್ಬಳ್ಳಿ, ಉಮರ್‌ ಫಾರೂಖ್‌ ಬಾರಿಗಿಡದ, ಮಹಮ್ಮದ್‌ಸಾಬ್‌ ಬೆಟಗೇರಿ, ಅನ್ವರ ನದಾಫ್‌, ನವೀನ ಭಂಡಾರಿ, ಸರ್ಫ್‌ರಾಜ್‌ ಶೇಖ್‌, ಮಹಾಂತೇಶ ಮಡಿವಾಳರ, ಶಾರೂಖ್‌ ಹುಯಿಲಗೋಳ, ಗಣೇಶ ಕಟಗಿ ಸೇರಿ ಯುವ ಕಾಂಗ್ರೆಸ್‌ನ ನೂರಾರು ಯುವಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next