Advertisement

ಗದಗ: ಮತ್ತೆ ಆವರಿಸುತ್ತಾ ಅತಿವೃಷ್ಟಿಯ ಕಾರ್ಮೋಡ?

06:04 PM May 24, 2023 | Team Udayavani |

ಗದಗ: ಬಿರು ಬೇಸಿಗೆಯ ನಡುವೆಯೇ ಮಳೆರಾಯ ಆರ್ಭಟಿಸುವ ಮುನ್ಸೂಚನೆ ತೋರುತ್ತಿದ್ದು, ರಾಜ್ಯದ ಹಲವೆಡೆ ಈಗಾಗಲೇ ಅಪಾಯ ಸೃಷ್ಟಿಸಿದ್ದಾನೆ. ಕಳೆದ ವರ್ಷ ಅತಿವೃಷ್ಟಿಯಿಂದ ಅಪಾರ ಪ್ರಮಾಣದ ಬೆಳೆ ಹಾನಿಯ ಜೊತೆಗೆ ಸಾರ್ವಜನಿಕರು, ರೈತರು ತತ್ತರಿಸಿದ್ದರು. ಇದರ ನಡುವೆ ಅತಿವೃಷ್ಟಿಯ ಕಾರ್ಮೋಡ ಮತ್ತೆ ಆವರಿಸುತ್ತಾ ಎಂಬ ಭಯ ಸಾರ್ವಜನಿಕರನ್ನು ಕಾಡುತ್ತಿದೆ.

Advertisement

ಕಳೆದೆರೆಡು ದಿನಗಳಿಂದ ರಾಜ್ಯಾದ್ಯಂತ ಮಳೆರಾಯ ಅವಾಂತರ ಸೃಷ್ಟಿಸುತ್ತಿರುವ ಬೆನ್ನಲ್ಲೇ ಜಿಲ್ಲೆಯಲ್ಲೂ ಈಗಾಗಲೇ ಗಡುಗು, ಮಿಂಚಿನ ಜೊತೆ ಜೊತೆಗೆ ಅಲ್ಲಲ್ಲಿ ಮಳೆಯ ಸಿಂಚನವೂ ಆಗಿದೆ. ಇನ್ನು ಕೆಲವೇ ದಿನಗಳಲ್ಲಿ ಮುಂಗಾರು ಆರಂಭವಾಗಲಿದ್ದು,
ಮಳೆಯ ಅವಶ್ಯಕತೆಯೂ ಸಾಕಷ್ಟಿದೆ. ಆದರೆ, ಅಗತ್ಯಕ್ಕೆ ತಕ್ಕಂತೆ ನಿಗದಿತ ಪ್ರಮಾಣದಲ್ಲಿ ಮಳೆ ಸುರಿದರೆ ರೈತರ ಮೊಗದಲ್ಲಿ ಮಂದಹಾಸ, ಸಾರ್ವಜನಿಕರಿಗೂ ಸಂತಸ ಉಂಟಾಗಲಿದೆ.

ಈಗಾಗಲೇ ಜಿಲ್ಲಾಡಳಿತ ಕೂಡ ಮುಂಜಾಗ್ರತಾ ಕ್ರಮವಾಗಿ ಪ್ರತ್ಯೇಕ ತಂಡಗಳನ್ನು ರಚಿಸಿದ್ದು, ಕಳೆದ ವರ್ಷ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳ ಮೇಲೆ ನಿಗಾ ವಹಿಸುವಂತೆ ಸೂಚನೆ ನೀಡಿದೆ. ಮಲಪ್ರಭಾ, ತುಂಗಭದ್ರಾ ನದಿ ಹಾಗೂ ಬೆಣ್ಣಿಹಳ್ಳ ವ್ಯಾಪ್ತಿಯ ಪ್ರದೇಶಗಳಲ್ಲಿ, ಮುಳುಗಡೆಯಾಗುವ ಪ್ರದೇಶಗಳಲ್ಲಿ ಎಚ್ಚರಿಕೆ ಹೆಜ್ಜೆಯಿಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಕಳೆದ ಸಾಲಿನ ಮುಂಗಾರು ಅವಧಿಯಲ್ಲಿ ನಿರಂತರ ಮಳೆಯಿಂದಾಗಿ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮನೆ, ಕೃಷಿ, ತೋಟಗಾರಿಕೆ ಬೆಳೆಗಳು ಹಾನಿಗೊಳಗಾಗಿದ್ದವು. ಅದರ ಜೊತೆಗೆ ರಸ್ತೆ, ಸೇತುವೆ, ವಿದ್ಯುದ್ದೀಪಗಳು ಹಾನಿಯಾಗುವ ಮೂಲಕ ಸಾರ್ವಜನಿಕರು ಸೇರಿ ರೈತರು ತೀವ್ರ ಸಂಕಷ್ಟಕ್ಕೊಳಗಾಗಿದ್ದರು.

ಜಿಲ್ಲಾಡಳಿತ ಕೂಡ ಸಂತ್ರಸ್ತರಿಗೆ ಸೂಕ್ತ ಪರಿಹಾರ ಕಲ್ಪಿಸಿತ್ತು. ನಿರಂತರ ಮಳೆಯಿಂದಾಗಿ ಕಳೆದ ವರ್ಷ ಜೂನ್‌ ದಿಂದ ಸೆಪ್ಟೆಂಬರ್‌ ವರೆಗೆ 1,48,683 ಹೆಕ್ಟೇರ್‌ ಕೃಷಿ ಹಾಗೂ 28,184 ಹೆಕ್ಟೇರ್‌ ತೋಟಗಾರಿಕಾ ಬೆಳೆ ಹಾನಿಯಾಗಿದೆ. ಅಕ್ಟೋಬರ್‌ ತಿಂಗಳಲ್ಲಿ ಸುರಿದ
ಅಧಿಕ ಮಳೆಯಿಂದ 14,655 ಹೆಕ್ಟೇರ್‌ ಕೃಷಿ ಹಾಗೂ 3,448 ಹೆಕ್ಟೇರ್‌ ತೋಟಗಾರಿಕೆ ಪ್ರದೇಶ ಬೆಳೆ ಹಾನಿಗೊಳಗಾಗಿತ್ತು. ಹಾನಿಗೆ ಸಂಬಂ ಧಿಸಿದಂತೆ 6 ಹಂತಗಳಲ್ಲಿ 1,12,191 ರೈತ ಫಲಾನುಭವಿಗಳಿಗೆ ಒಟ್ಟು 166.99 ಕೋಟಿ ರೂ. ಪರಿಹಾರವನ್ನು ನೇರವಾಗಿ ರೈತರ ಖಾತೆಗಳಿಗೆ ಜಮೆ ಮಾಡಲಾಗಿತ್ತು.

Advertisement

ಜಿಲ್ಲೆಯಲ್ಲಿ ಹಾನಿಗೊಳಗಾದ 3,512 ಮನೆಗಳ ಪೈಕಿ 2,944 ಮನೆಗಳಿಗೆ ಪರಿಹಾರ ವಿತರಿಸಲಾಗಿದ್ದು, ಸಂಪೂರ್ಣವಾಗಿ ಹಾನಿಗೊಳ ಗಾದ ಮನೆಗಳಿಗೆ ತಲಾ ಮನೆಗೆ 50 ಸಾವಿರ ರೂ.ದಂತೆ ಒಟ್ಟು 2,194 ಮನೆಗಳಿಗೆ ಒಟ್ಟು 1,097 ಲಕ್ಷ ರೂ. ಪಾವತಿಸಲಾಗಿತ್ತು.

ಜೊತೆಗೆ ಮುಂಗಾರು ಅವಧಿಯಲ್ಲಿ ವಾಡಿಕೆ ಮಳೆಗಿಂತ ಶೇ. 317ರಷ್ಟು ಅ ಧಿಕ ಮಳೆಯಾಗುವ ಮೂಲಕ 6 ಮಾನವ ಜೀವಹಾನಿ ಸಂಭವಿಸಿದ್ದು, ತಲಾ 5 ಲಕ್ಷ ರೂ.ನಂತೆ ಪರಿಹಾರ ವಿತರಿಸಲಾಗಿತ್ತು. 59 ಜಾನುವಾರು ಜೀವಹಾನಿಯಾಗಿದ್ದು, 3.64 ಲಕ್ಷ ರೂ.
ಪರಿಹಾರ ನೀಡಲಾಗಿತ್ತು. ಇನ್ನು 2,581 ಮನೆಗಳಿಗೆ ನೀರು ನುಗ್ಗಿ ಬಟ್ಟೆಬರೆ ಇತರೆ ಪದಾರ್ಥಗಳು ಹಾನಿಯಾಗಿದ್ದು, ತಲಾ 10 ಸಾವಿರ ರೂ. ಪರಿಹಾರ ನೀಡಲಾಗಿತ್ತು.

ಪ್ರವಾಹಪೀಡಿತ ಗ್ರಾಮಕ್ಕೆ ಪರಿಹಾರ ಭರವಸೆ:
ಜಿಲ್ಲೆಯಲ್ಲಿ ಮಲಪ್ರಭೆ ಹಾಗೂ ಬೆಣ್ಣಿಹಳ್ಳದ ಪ್ರವಾಹದಿಂದ ನರಗುಂದ ತಾಲೂಕಿನ ಕೊಣ್ಣೂರ, ಲಕಮಾಪುರ, ವಾಸನ, ಬೆಳ್ಳೇರಿ, ಬೂದಿಹಾಳ, ಕಪ್ಪಲಿ, ಕಲ್ಲಾಪೂರ, ಶಿರೋಳ, ಮೂಗನೂರ, ಕುರ್ಲಗೇರಿ, ಸುರಕೋಡ, ಹದಲಿ ರೋಣ ತಾಲೂಕಿನ ಮೆಣಸಗಿ, ಹೊಳೆ ಆಲೂರ ಗ್ರಾಮಗಳು ಭಾಗಶಃ ಜಲಾವೃತಗೊಳ್ಳುತ್ತಿದ್ದವು. ಈಗಾಗಲೇ ಕುರ್ಲಗೇರಿ, ಬೂದಿಹಾಳ, ಸುರಕೋಡ ಗ್ರಾಮಗಳನ್ನು ಸ್ಥಳಾಂತರಗೊಳಿಸಲಾಗಿದೆ.

ಇನ್ನು ಲಕಮಾಪುರ ಹಾಗೂ ಕೊಣ್ಣೂರು ಭಾಗದಲ್ಲಿ ಹೊಸ ಸೇತುವೆ ಗಳನ್ನು ನಿರ್ಮಾಣ ಮಾಡಲಾಗಿದ್ದು, ಮಲಪ್ರಭೆ ನದಿ ಅಪಾಯದ ಮಟ್ಟದಲ್ಲಿ ಹರಿದರೂ ಹಾಣಿಯಾಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಗದಗ ಜಿಲ್ಲೆಯ ನರಗುಂದ ತಾಲೂಕಿನ ವಾಸನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಕಮಾಪುರದಲ್ಲಿ 150 ಮನೆಗಳಿದ್ದು, 2000
ಜನರು ಇಲ್ಲಿ ವಾಸಿಸುತ್ತಾರೆ. ನವಿಲುತೀರ್ಥ ಡ್ಯಾಂನಿಂದ ಭಾರಿ ಪ್ರಮಾಣದಲ್ಲಿ ನೀರು ಹರಿಬಿಟ್ಟ ಸಂದರ್ಭದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಆದ್ದರಿಂದ, ಜಿಲ್ಲಾಡಳಿತ ಗ್ರಾಮಕ್ಕೆ ಶಾಶ್ವತ ಪರಿಹಾರ ಕಲ್ಪಿಸಿಕೊಡಬೇಕಿದೆ.
*ಬಸನಗೌಡ ರಾಯನಗೌಡ,
ಲಕಮಾಪುರ ಗ್ರಾಮಸ್ಥ

ಮಳೆ ಹಾನಿ ಮತ್ತು ಮುಳುಗಡೆ ಪ್ರದೇಶಗಳ ಮೇಲೆ ನಿಗಾ ವಹಿಸುವುದು ಮತ್ತು ಮಳೆಯಿಂದಾಗುವ ತೊಂದರೆಗಳನ್ನು
ನಿಭಾಯಿಸಲು ಈಗಾಗಲೇ ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ. ತಂಡದ ಅಧಿಕಾರಿಗಳು ಮಳೆ ಹಾಗೂ ಉಕ್ಕಿ ಹರಿಯುವ ನದಿಗಳ ಮುನ್ಸೂಚನೆ ಅರಿತು ಅಗತ್ಯಕ್ಕೆ ತಕ್ಕಂತೆ ಕ್ರಮ ಜರುಗಿಸಲಿದ್ದಾರೆ.
*ವೈಶಾಲಿ ಎಂ.ಎಲ್‌, ಜಿಲ್ಲಾಧಿಕಾರಿ, ಗದಗ

ಅರುಣಕುಮಾರ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next