Advertisement

ಗದಗ: ಆಟೋ ಚಾಲಕನ ಬೆದರಿಸಿ ಚಿನ್ನಾಭರಣ ಸುಲಿಗೆ-ಮೂವರ ಸೆರೆ

05:47 PM Feb 29, 2024 | Team Udayavani |

ಉದಯವಾಣಿ ಸಮಾಚಾರ
ಗದಗ: ಬೆಟಗೇರಿ ಬಡಾವಣೆ ಠಾಣೆ ವ್ಯಾಪ್ತಿಯ ಎಪಿಎಂಸಿ ದನದ ಮಾರ್ಕೆಟ್‌ನಲ್ಲಿ ಆಟೋ ಚಾಲಕನನ್ನು ಹೆದರಿಸಿ, ಜೀವ ಬೆದರಿಕೆ ಹಾಕಿ 1.40 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಸುಲಿಗೆ ಮಾಡಿಕೊಂಡು ಹೋದ ಪ್ರಕರಣವನ್ನು ಬೇಧಿಸಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

Advertisement

ಪ್ರಕರಣ ದಾಖಲಾದ 48 ಗಂಟೆಯೊಳಗಾಗಿ ಬೆಟಗೇರಿ ಬಡಾವಣೆ ಠಾಣೆಯ ಪೊಲೀಸರು ಆರೋಪಿಗಳಾದ ಸಿದ್ಧಾರ್ಥ ನಗರದ
ನಿವಾಸಿಗಳಾದ ಕಿಶೋರ ಯಲ್ಲಪ್ಪ ಕಟ್ಟಿಮನಿ(25), ಶಿವಕುಮಾರ ನಾಗಪ್ಪ ಗುಡಿಮನಿ(20) ಹಾಗೂ ಪ್ರತಾಪ ಧರ್ಮಣ್ಣ ಹೊಸಮನಿ(32) ಅವರನ್ನು ಆಭರಣ ಸಮೇತ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಘಟನೆ ವಿವರ: ಹಾತಲಗೇರಿ ನಿವಾಸಿ ಬಸವರಾಜ ಜಂಬಣ್ಣ ಹಡಗಲಿ ಎಂಬುವವರು 18ರಂದು ಸಂಜೆ 6ಕ್ಕೆ ಹಳೆ ಬಸ್‌ ನಿಲ್ದಾಣದಿಂದ ನಗರದಲ್ಲಿನ ಶಿಕ್ಷಕರ ಬಡಾವಣೆಯಲ್ಲಿರುವ ತಮ್ಮ ನಿವಾಸಕ್ಕೆ ಆಟೋದಲ್ಲಿ ತೆರಳುತ್ತಿರುವ ಸಂದರ್ಭ ಮೂರು ಜನ ಆರೋಪಿಗಳು ಡ್ರಾಪ್‌ ಕೇಳುವ ನೆಪದಲ್ಲಿ ಆಟೋ ಹತ್ತಿ ಎಪಿಎಂಸಿ ದನದ ಮಾರ್ಕೆಟ್‌ ಬಳಿ ಆಟೋ ನಿಲ್ಲಿಸಿ, ಅಡ್ಡಗಟ್ಟಿ ಹೆದರಿಸಿ, ಜೀವ ಬೆದರಿಕೆ ಹಾಕಿದ್ದಲ್ಲದೇ ಚಾಲಕನು ತನ್ನ ಮೈಮೇಲೆ ಹಾಕಿಕೊಂಡಿದ್ದ 15 ಗ್ರಾಂ ತೂಕದ 60 ಸಾವಿರ ಮೌಲ್ಯದ ಒಂದು ಬಂಗಾರದ ಬ್ರಾಸ್ಲೆಟ್‌, 15 ಗ್ರಾಂ ತೂಕದ 60 ಸಾವಿರ ರೂ. ಮೌಲ್ಯದ ಒಂದು ಬಂಗಾರದ ಚೈನ್‌ ಹಾಗೂ 5 ಗ್ರಾಂ ತೂಕದ ಬಂಗಾರದ ಉಂಗುರವನ್ನು ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದರು.

18 ರಂದು ಸುಲಿಗೆಯಾಗಿದ್ದರೂ ಆಟೋ ಚಾಲಕನು ಭಯದಿಂದ ಪ್ರಕರಣ ದಾಖಲಿಸಿರಲಿಲ್ಲ. 26ರಂದು ನಗರದ ಬೆಟಗೇರಿ
ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ನಂತರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎಸ್‌. ನೇಮಗೌಡ, ಹೆಚ್ಚುವರಿ ಎಸ್‌ಪಿ
ಎಂ.ಬಿ. ಸಂಕದ ಹಾಗೂ ಡಿವೈಎಸ್‌ಪಿ ಜೆ.ಎಚ್‌. ಇನಾಮದಾರ ಮಾರ್ಗದರ್ಶನದಲ್ಲಿ ಸಿಪಿಐ  ಧೀರಜ್‌ ಬಿ. ಹಾಗೂ ಪಿಎಸ್‌ಐ ವಿಜಯಕಮಾರ ತಳವಾರ ನೇತೃತ್ವದ ತಂಡ ಪ್ರಕರಣ ದಾಖಲಾದ 48 ಗಂಟೆಗಳಲ್ಲಿ ಆರೋಪಿ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಆರೋಪಿ ಪತ್ತೆ ಹಚ್ಚುವಲ್ಲಿ ಶ್ರಮಿಸಿದ ಎಎಸ್‌ಐ ಆರ್‌.ಜಿ. ಬೇವಿನಕಟ್ಟಿ, ಬಿ.ಎಫ್‌. ಯರಗುಪ್ಪಿ, ಸಿಬ್ಬಂದಿಯಾದ ಪಿ.ಎಚ್‌. ದೊಡ್ಡಮನಿ, ಅಶೋಕ ಗದಗ, ನಾಗರಾಜ ಬರಡಿ, ಸಿ.ವಿ. ನಾಯ್ಕರ್‌, ಎಸ್‌.ಎಚ್‌. ಕಮತರ, ಶ್ರೀಶೈಲ ನಾಗನೂರ ಹಾಗೂ ಕೆ.ವಿ. ಕಿತ್ತಲಿರನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎಸ್‌. ನೇಮಗೌಡ ಶ್ಲಾಘಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next