Advertisement

ಗದಗ: ಬರದ ಬವಣೆ ನೀಗಿಸಿದ ಎಸ್‌.ಜಿ. ಬಾಳೇಕುಂದ್ರಿ

04:32 PM May 17, 2023 | Team Udayavani |

ಗದಗ: ಎಸ್‌.ಜಿ. ಬಾಳೇಕುಂದ್ರಿ ಅವರು ನಮ್ಮ ನಾಡಿನ ಹೆಸರಾಂತ ಅಭಿಯಂತರರು. ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳ ರೂವಾರಿಗಳು ಎಂದು ಡಾ| ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.

Advertisement

ನಗರದ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ 2641ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ತಂದೆ-ತಾಯಿಯ ಬಗ್ಗೆ ಅಪಾರ ಗೌರವ ಹೊಂದಿದ ಬಾಳೇಕುಂದಿ ಅವರು ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಒಂದು ಪೈಸೆಗೂ ಆಸೆ ಪಡದೇ ಪ್ರಾಮಾಣಿಕ ಸೇವೆ ಸಲ್ಲಿಸಿದ್ದಾರೆ. ಅವರ ನೇರ, ನಿಷ್ಠುರ, ದಕ್ಷ, ಪ್ರಾಮಾಣಿಕತೆಗೆ ಜನಪ್ರತಿನಿಧಿಗಳು ಸಹ ಭಯಪಡುತ್ತಿದ್ದುದನ್ನು ಒಡನಾಡಿಗಳಿಂದ ಕೇಳಿದ್ದೇವೆ ಎಂದರು.

ಉತ್ತರ ಕರ್ನಾಟಕದ ಜನರು ಬರಗಾಲದಿಂದ ತತ್ತರಿಸಿ ಬೇರೆ ಕಡೆಗೆ ಗುಳೇ ಹೋಗುತ್ತಿದ್ದರು. ಈ ಬರಗಾಲದ ಪ್ರದೇಶವನ್ನು ನೀರಾವರಿ ಪ್ರದೇಶವನ್ನಾಗಿ ರೂಪಿಸಿದ ಮಹಾನ್‌ ವ್ಯಕ್ತಿ ಎಸ್‌.ಜಿ. ಬಾಳೇಕುಂದ್ರಿ ಅವರು ಎಂದು ಹೇಳಿದರು.

ಎಸ್‌.ಜಿ. ಬಾಳೇಕುಂದ್ರಿ ಅವರ ಪರಿಶ್ರಮ, ಮುಂದಾಲೋಚನೆಗಳ ಪರಿಣಾಮವಾಗಿ ಇಂದು ನಾವೆಲ್ಲರೂ ವಿದ್ಯುತ್‌ ಮತ್ತು ನೀರನ್ನು ಕಾಣುವಂತಾ ಗಿದೆ. ನಮ್ಮ ಗುರುಗಳಾದ ಲಿಂ| ಡಾ| ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರು ಸಹಿತ ಎಸ್‌.ಜಿ. ಬಾಳೇಕುಂದ್ರಿ ಅವರ ಪ್ರಾಮಾಣಿಕತೆ ಮತ್ತು ಕಾರ್ಯವೈಖರಿ ಕುರಿತು ಅಪಾರ ಅಭಿಮಾನ ಹೊಂದಿದ್ದರು ಎಂದು ಹೇಳಿದರು.

ಎಸ್‌.ಜಿ. ಬಾಳೇಕುಂದ್ರಿ ಅವರ ಜನ್ಮಶತಮಾನೋತ್ಸವ ಸಂದರ್ಭದಲ್ಲಿ ಸರಕಾರ ಅವರನ್ನು ಗೌರವಿಸದೇ ಇರುವುದು ಬಹಳಷ್ಟು ಖೇದಕರ ಸಂಗತಿ. ಸಾಕಷ್ಟು ಬಾರಿ ಸರಕಾರಕ್ಕೆ ಮನವಿ ಪತ್ರಗಳನ್ನು ಸ್ವತಃ ಸಲ್ಲಿಸಿದ್ದೇವೆ. ಅಷ್ಟೇ ಅಲ್ಲದೇ, ಈ ಭಾಗದ ಗಣ್ಯಮಾನ್ಯರೂ ಮನವಿಗಳನ್ನು ಸರಕಾರಕ್ಕೆ ಸಲ್ಲಿಸಿದ್ದಾರೆ. ಆದರೂ, ಬೆಳಗಾವಿಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಅವರ ಹೆಸರಿನಿಂದ ಅಧ್ಯಯನ ಪೀಠ ಸ್ಥಾಪಿಸದೇ ಇರುವುದು ಈ ಭಾಗದ ಜನರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಶ್ರೀಗಳು ಹೇಳಿದರು.

Advertisement

ಉಪನ್ಯಾಸಕ ಡಾ| ಕಲ್ಲಯ್ಯ ಹಿರೇಮಠ ಮಾತನಾಡಿ, ಎಸ್‌.ಜಿ. ಬಾಳೇಕುಂದ್ರಿ ಅವರು ಉತ್ತರ ಕರ್ನಾಟಕ ಭಾಗದಲ್ಲಿ ನೀರಾವರಿ ಮತ್ತು ವಿದ್ಯುತ್‌ ಕ್ಷೇತ್ರದಲ್ಲಿ ಅಭೂತಪೂರ್ವ ಸೇವೆ ಸಲ್ಲಿಸಿದ್ದಾರೆ. ಇಂತಹ ಪುಣ್ಯಪುರುಷರ ಜನ್ಮಶತಮಾನೋತ್ಸವವನ್ನು ಶಿವಾನುಭವ ಕಾರ್ಯಕ್ರಮದಲ್ಲಿ ಆಚರಿಸುತ್ತಿರುವುದು ಔಚಿತ್ಯಪೂರ್ಣವಾದುದು ಎಂದು ಹೇಳಿದರು.

ನಮ್ಮ ಭಾಗದಲ್ಲಿ ಹಲವಾರು ನೀರಾವರಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಈ ಭಾಗದ ರೈತರ ಜೀವನವನ್ನು ಹಚ್ಚಹಸಿರಾಗಿಸಿದವರು ಎಸ್‌.ಜಿ. ಬಾಳೇಕುಂದ್ರಿ ಅವರು. ಲೋಕೋಪಯೋಗಿ ಇಲಾಖೆಯಲ್ಲಿ ಉನ್ನತ ಹುದ್ದೆ ಅಲಂಕರಿಸಿದ ಅವರು ಮಲಪ್ರಭಾ, ಘಟಪ್ರಭಾ, ಹಿಡಕಲ್‌, ಕೂಡಲಸಂಗಮ ಹೀಗೆ ಅನೇಕ ಡ್ಯಾಮ್‌ಗಳನ್ನು ನಿರ್ಮಿಸಿ ಬರದ ಸಮಸ್ಯೆ ನೀಗಿಸಿದ ಮಹಾನುಭಾವರು ಎಂದು ಅಭಿಪ್ರಾಯಪಟ್ಟರು.

ಭಕ್ತಿಸೇವೆ ವಹಿಸಿದ ಬಸವರಾಜ ಬಿಂಗಿ ಮಾತನಾಡಿ, ಉತ್ತರ ಕರ್ನಾಟಕ ಭಾಗದಲ್ಲಿ ನೀರಾವರಿ ಕ್ರಾಂತಿ ಮಾಡಿ ಬಡ ರೈತರಿಗೆ ನೀರಾವರಿ ಸೌಲಭ್ಯಗಳನ್ನು ಒದಗಿಸಿದ ಕೀರ್ತಿ ಎಸ್‌.ಜಿ. ಬಾಳೇಕುಂದ್ರಿ ಅವರಿಗೆ ಸಲ್ಲುತ್ತದೆ ಎಂದರು. ಶ್ರೀಮಠದ ಕಲಾವಿದರಾದ ಮೃತ್ಯುಂಜಯ ಹಿರೇಮಠ ಮತ್ತು ಗುರುನಾಥ ಸುತಾರ ಅವರ ವಚನ ಸಂಗೀತದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.

ಲಾವಣ್ಯ ಗೌಡರ ಧರ್ಮಗ್ರಂಥ ಪಠಿಸಿದರು. ಪ್ರತೀಕ್ಷಾ ಕುಂಬಾರ ವಚನ ಚಿಂತನ ನಡೆಯಿತು. ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಶೇಖಣ್ಣ ಕಳಸಾಪೂರ ಸ್ವಾಗತಿಸಿ, ಮಂಜುಳಾ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next